ಚಾಮರಾಜನಗರ:ತಮ್ಮ ಅಂಗಡಿಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾ ತೆಗೆದು ಹಾಕುವಂತೆ ಚಿನ್ನದಂಗಡಿ ಹಾಗೂ ಬಟ್ಟೆ ಅಂಗಡಿ ಮಾಲೀಕರಿಗೆ ಅಪರಿಚಿತರು ಬೆದರಿಕೆ ಪತ್ರ ಕಳುಹಿಸಿದ ಬೆನ್ನಲ್ಲೇ ಇತರ ಅಂಗಡಿಗಳಲ್ಲಿ ಕಳ್ಳತನವಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರದ ಎಂ.ಕೆ. ಸುಬ್ರಮಣ್ಯ, ಎಂ.ಕೆ. ಶ್ರೀನಿವಾಸ ಹಾಗೂ ವಾಸುಕಿ ಎಂಬುವವರಿಗೆ 'ನಿಮ್ಮ ಅಂಗಡಿಗಳ ಮುಂದೆ ಇರುವ ಸಿಸಿ ಕ್ಯಾಮರಾ ತೆಗೆಸಿ, ಇಲ್ಲದಿದ್ದರೇ ತಕ್ಕ ಪಾಠ ಕಲಿಸುತ್ತೇವೆ' ಬೆದರಿಕೆ ಪತ್ರ ಬರೆದು ಅಂಚೆ ಮೂಲಕ ಡೇಂಜರ್ ಸಿಂಬಲ್ ಬರೆದು ಕಳುಹಿಸಿದ್ದರು. ಮೂರು ಅಂಗಡಿ ಮಾಲೀಕರ ಹೆಸರು ಬರೆದು ಬೆದರಿಕೆ ಹಾಕಿರುವ ಆಸಾಮಿಗಳ ವಿರುದ್ಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆದರೂ ರಾತ್ರಿ ಬೇರೆ ಮೂರು ಅಂಗಡಿಗಳಲ್ಲಿ ಕಳ್ಳತನ ಆಗಿದ್ದು ವ್ಯಾಪಾರಿಗಳನ್ನು ಬೆಚ್ಚಿ ಬೀಳಿಸಿದೆ.
ಸರಣಿ ಕಳ್ಳತನ:ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತ ಆಸುಪಾಸಲ್ಲೇ ಸರಣಿ ಕಳ್ಳತನ ತಡರಾತ್ರಿ ನಡೆದಿದ್ದು ವ್ಯಾಪಾರಸ್ಥರು, ಉದ್ಯಮಿಗಳು ದಿಗಿಲುಗೊಂಡಿದ್ದಾರೆ. ಸ್ವಾಗತ್ ಟ್ರೇಡರ್ಸ್, ಪ್ರಭು ಎಲೆಕ್ಟ್ರಿಕಲ್, ವಿನಯ್ ಆಟೋಮೊಬೈಲ್ಗಳಲ್ಲಿ ಕಳ್ಳತನ ನಡೆದಿದ್ದು ಸಿಸಿಟಿವಿಗಳನ್ನು ಜಖಂ ಮಾಡಿ, ಏಣಿಗಳನ್ನು ಬಳಸಿ ಕಳ್ಳರು ಕೃತ್ಯ ಎಸಗಿದ್ದಾರೆ.