ಬೆಳಗಾವಿ: "ವಕ್ಫ್ ಕಾನೂನು ಭಯಾನಕವಾಗಿದೆ, ಇದರಿಂದ ನಮ್ಮ ದೇಶ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ನಮ್ಮ ಮಠ ಮಾನ್ಯಗಳು, ಎಸ್ಸಿ, ಎಸ್ಟಿ ಸಮುದಾಯದವರು, ಮುಸ್ಲಿಂ ಸಮುದಾಯದ ಕೆಲ ಜನರೂ ಇದರಿಂದ ಸುರಕ್ಷಿತವಾಗಿಲ್ಲ" ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ವಿಧಾನಸಭೆಯಲ್ಲಿಂದು ವಕ್ಫ್ ವಿಚಾರ ಕುರಿತ ಚರ್ಚೆ ವೇಳೆ ಮಾತನಾಡಿದ ಅವರು, "ಮುಸ್ಲಿಂ ನಾಯಕರು, ಪಟ್ಟಬದ್ಧ ಹಿತಾಸಕ್ತಿಗಳು ವಕ್ಫ್ ಆಸ್ತಿಯನ್ನು ಒತ್ತುವರಿ ಮಾಡಿವೆ. ಅನ್ವರ್ ಮಾನಪ್ಪಾಡಿ ವರದಿಯಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ. ಪ್ರತಿಷ್ಠೆಗೆ ಬೀಳಬೇಡಿ. ಕೇಂದ್ರ ತರುತ್ತಿರುವ ತಿದ್ದುಪಡಿ ಕಾನೂನು ಸ್ವಾಗತ ಮಾಡಿ ನಿರ್ಣಯ ತೆಗೆದುಕೊಳ್ಳೋಣ. ಅನುಭವ ಮಂಟಪದ ಬಗ್ಗೆ ಗೌರವ ಇದ್ದರೆ ಅದನ್ನು ನಮ್ಮ ಜನಾಂಗಕ್ಕೆ ಬಿಟ್ಟುಕೊಡಿ" ಎಂದು ಆಗ್ರಹಿಸಿದರು.
"ವಕ್ಫ್ ಕಾಯ್ದೆ ಒಂದು ಕರಾಳ ಕಾನೂನಾಗಿದೆ. ಇದರಿಂದ ಮತ್ತೆ ದೇಶ ವಿಭಜನೆಯಾಗಲಿದೆ. ಸಂವಿಧಾನದಲ್ಲೂ ಅದರ ಬಗ್ಗೆ ಪ್ರಸ್ತಾವನೆ ಮಾಡಿಲ್ಲ. ಪಾಕಿಸ್ತಾನದ ಹಿಂದೂಗಳ ಆಸ್ತಿಯನ್ನು ತನ್ನ ಆಸ್ತಿ ಎಂದು ಘೋಷಿಸಿದೆ. ವಿಜಯಪುರದಲ್ಲಿ ಎಸ್ಪಿ ಕಚೇರಿ, ಡಿಸಿ ಕಚೇರಿ, ಜಿಲ್ಲಾಸ್ಪತ್ರೆ ಜಾಗ ವಕ್ಫ್ಗೆ ಸೇರಿದೆ. ಕೇಂದ್ರ ಸರ್ಕಾರನಲ್ಲಿ ತಿದ್ದುಪಡಿ ತರುತ್ತಿದೆ ಎಂದಾಗ ನೀವು ನೋಟಿಸ್ ಕೊಡಲು ಆರಂಭಿಸಿದ್ದಿರಿ" ಎಂದರು.
"ನಾನು ಐದು ಸಲ ಪ್ರಧಾನಿಗೆ ಪತ್ರ ಬರೆದು ಈ ವಕ್ಫ್ ಬೋರ್ಡ್ ರದ್ದಾಗಬೇಕು ಎಂದು ಮನವಿ ಮಾಡಿದ್ದೆ. ಇಲ್ಲವಾದರೆ ಮತ್ತೊಂದು ಪಾಕಿಸ್ತಾನ ಆಗಲಿದೆ ಎಂದು ಪತ್ರ ಬರೆದಿದ್ದೆ. ಮಠಗಳು, ಮಂದಿರಗಳು, ಎಸ್ಸಿ, ಎಸ್ಟಿ ಜಮೀನಿಗೆ ವಕ್ಫ್ ಆಸ್ತಿ ಎಂದು ನೋಟಿಸ್ ನೀಡಲಾಗಿದೆ. ದೇಶದ ಇಂಚಿಂಚು ನಮ್ಮದು. ಅನುಭವ ಮಂಟಪವೂ ಈಗ ವಕ್ಫ್ ಆಸ್ತಿ ಆಗಿದೆ. ಪೀರ್ ಬಾಷಾ ಶಾ ದರ್ಗಾ ಆಗಿದೆ. ಅಲ್ಲಿ ಗೋಹತ್ಯೆ ನಡೆಯುತ್ತಿದೆ" ಎಂದು ದೂರಿದರು.
ಇದನ್ನೂ ಓದಿ:ಚರ್ಚೆಗೆ ಅಡ್ಡಿ, ಪ್ರತಿಪಕ್ಷಗಳ ಸದಸ್ಯರಿಂದ ಸಭಾತ್ಯಾಗ: ಸದನದಲ್ಲೇ ಕುಳಿತ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್