ಮಂಗಳೂರು:ಪಶ್ಚಿಮ ಘಟ್ಟ ಭಾಗದಲ್ಲಿ ಬಿಡದೇ ಮಳೆಯಾಗಿದ್ದು ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಬಂಟ್ವಾಳದ ಶಂಭೂರಿನಲ್ಲಿರುವ ಎಎಂಆರ್ ಜಲಾಶಯದಿಂದ ಹೆಚ್ಚುವರಿ ನೀರನ್ನು ಮಂಗಳೂರಿಗೆ ನೀರುಣಿಸುವ ತುಂಬೆ ಡ್ಯಾಂಗೆ ಸೋಮವಾರ ಹರಿಸಲಾಗಿದೆ.
ನೇತ್ರಾವತಿ ನದಿ ಪಾತ್ರದಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ನದಿಗೆ ನೀರಿನ ಹರಿವು ಆರಂಭವಾಗಿದೆ. ತುಂಬೆ ಅಣೆಕಟ್ಟೆಗಿಂತ ಹಿಂದೆ ಇರುವ ಎಎಂಆರ್ ಅಣೆಕಟ್ಟು ಪ್ರಸ್ತುತ ಬಹುತೇಕ ಭರ್ತಿಯಾಗಿರುವುದರಿಂದ ನೀರನ್ನು ಹೊರಬಿಡಲಾಗುತ್ತಿದೆ. ಅಲ್ಲಿಂದ ಈ ನೀರು ತುಂಬೆಗೆ ಸೇರುವುದರಿಂದ ಇಲ್ಲಿನ ನೀರಿನ ಮಟ್ಟವೂ ಏರಲಿರುವುದರಿಂದ ಮಂಗಳೂರಿನ ನೀರಿನ ಸಮಸ್ಯೆ ನಿವಾರಣೆಯಾಗುವ ನಿರೀಕ್ಷೆ ಇದೆ.
6 ಮೀಟರ್ ಎತ್ತರದ ತುಂಬೆ ಅಣೆಕಟ್ಟಿನಲ್ಲಿ ಸೋಮವಾರ 3.42 ಮೀ. ಮಾತ್ರ ನೀರು ಲಭ್ಯವಿದ್ದು ಮುಂದಿನ 10 ದಿನಗಳಿಗೆ ಮಾತ್ರ ಮಂಗಳೂರು ನಗರಕ್ಕೆ ಲಭ್ಯವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿಗೆ ಕಳೆದ ಕೆಲವು ದಿನಗಳಿಂದ ರೇಶನಿಂಗ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಬೆಳ್ತಂಗಡಿ, ಸುಬ್ರಹ್ಮಣ್ಯ ಪರಿಸರದಲ್ಲಿ ಕೆಲವು ದಿನಗಳಿಂದ ಉತ್ತಮ ಮಳೆ ಯಾಗಿರುವ ಕಾರಣ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಆರಂಭಗೊಂಡಿದೆ. ಸೋಮವಾರ ಕೂಡ ನದಿ ಪಾತ್ರದ ಬೆಳ್ತಂಗಡಿ, ಪುತ್ತೂರು, ಸುಬ್ರಹ್ಮಣ್ಯ ಪರಿಸರದ ಹೆಚ್ಚಿನ ಕಡೆ ಉತ್ತಮ ಮಳೆಯಾಗಿದೆ. ಇದರಿಂದ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಮಂಗಳೂರಿನ ನೀರಿನ ಸಮಸ್ಯೆಯೂ ದೂರವಾಗುವ ಸಾಧ್ಯತೆ ಇದೆ.
ಮೇ 20ರ ಲೆಕ್ಕಾಚಾರ ಪ್ರಕಾರ ಎಎಂಆರ್ ಡ್ಯಾಂನ ನೀರಿನ ಮಟ್ಟ 18.60 ಮೀ. ಇದೆ. ಗರಿಷ್ಠ ಮಟ್ಟ 18.90 ಮೀ. ದಾಟಿದಲ್ಲಿ ಬ್ಯಾರೇಜ್‌ನ ವಿನ್ಯಾಸ ಹಾಗೂ ಸುರಕ್ಷತೆ ದೃಷ್ಟಿಯಿಂದ ಉಕ್ಕೇರುವ ಸಾಧ್ಯತೆ ಇದೆ. ಜತೆಗೆ ಪ್ರಸ್ತುತ ನೀರಿನ ಮಟ್ಟವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸುರಕ್ಷತೆ ದೃಷ್ಟಿಯಿಂದ ಡ್ಯಾಂನಲ್ಲಿ ಲಭ್ಯವಿರುವ ನೀರನ್ನು ನದಿಯ ಕೆಳಭಾಗಕ್ಕೆ ಬಿಡುಗಡೆ ಮಾಡುವುದು ಸೂಕ್ತ. ಹೀಗಾಗಿ ಟರ್ಬೈನ್ ಗಳನ್ನು ಪ್ರಾರಂಭಿಸಲು ಅಥವಾ 18.9 ಮೀ.ಗಿಂತ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲು ಅನುಮತಿ ನೀಡುವಂತೆ ಶುಕ್ರವಾರ ಎಎಂಆರ್ ಪವರ್ ಪೈ.ಲಿ.ನಿಂದ ಜಿಲ್ಲಾಡಳಿತಕ್ಕೆ ಕೋರಿಕೆ ಸಲ್ಲಿಸಲಾಗಿತ್ತು.
ಇದನ್ನೂ ಓದಿ:ಮೇ 31 ರಿಂದ ಜೂನ್ 2ರ ವರೆಗೆ ಮಂಗಳೂರಿನ ಸಸಿಹಿತ್ಲು ಬೀಚ್ನಲ್ಲಿ ಸರ್ಫಿಂಗ್ ಸ್ಪರ್ಧೆ - Surfing Competition