ಬೆಂಗಳೂರು: ಕಾಂಗ್ರೆಸ್ ಸರ್ಕಾರ ಸದನಕ್ಕೆ ಸುಳ್ಳು ಮಾಹಿತಿ ಕೊಟ್ಟು, ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ ಮಾಡಿದ್ದು ಅತ್ಯಂತ ಖಂಡನೀಯ. ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ಮರೆತು ಕೇವಲ ರಾಜಕಾರಣಕ್ಕಾಗಿ ಸುಳ್ಳು ಹೇಳುತ್ತಿದೆ. ಸತ್ಯ ಹೇಳಲು ನಾವು ಜನರ ಬಳಿ ಹೋಗುತ್ತೇವೆ. ಅವರೂ ಬರಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ನೀವಿದ್ದಾಗ 15ನೇ ಹಣಕಾಸಿನ ಕಾರ್ಯ ಚಟುವಟಿಕೆ ನಡೆದಿತ್ತು. ಆಗ ನೀವು ನಿದ್ದೆ ಮಾಡಿದ್ರಿ. ನಿಮ್ಮ ಸಮ್ಮಿಶ್ರ ಸರ್ಕಾರ ಇದ್ದಾಗ ಫೈನಲ್ ಮೀಟಿಂಗ್ ಕೂಡಾ ಮಾಡಿದ್ದಿರಿ. ಈಗಿರುವ ಕಾಂಗ್ರೆಸ್ನ ಐವರು ಮಂತ್ರಿಗಳು ಆಗ ನಿದ್ದೆ ಮಾಡುತ್ತಿದ್ದರು. ಹಣಕಾಸಿನ ಆಯೋಗ ತನ್ನ ಕೆಲಸ ಮಾಡಲು ಶುರು ಮಾಡಿ ಬಹಳ ಸಮಯ ಆಗಿದೆ. ಹಣಕಾಸಿನ ಆಯೋಗಕ್ಕೂ ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಈಗ ಏನು ಮಾಡಿದರೂ ನಿಮ್ಮ ವಾದ ನಡೆಯಲ್ಲ. ಏಕೆಂದರೆ, ಈಗಾಗಲೇ ಇಂಪ್ಲಿಮೆಂಟ್ ಆಗಿ ಹೋಗಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಯುಪಿಎ ಸರ್ಕಾರಕ್ಕಿಂತ ಹೆಚ್ಚು ಹಣ ನಮ್ಮ ಸರ್ಕಾರ ಕೊಟ್ಟಿರುವ ಡಿಟೇಲ್ಸ್ ಇದೆ. 15ನೇ ಹಣಕಾಸಿನ ಅವಧಿ ಮಾರ್ಚ್ 26ರವರೆಗೂ ಇದೆ. ಹೀಗಿರುವಾಗ ಸುಳ್ಳನ್ನು ಪದೇ ಪದೆ ಹೇಳಿದರೆ ಅದು ಸತ್ಯ ಆಗಲಿದೆ ಎಂಬ ಭ್ರಮೆಯಲ್ಲಿ ಕೇವಲ ಕೆಟ್ಟ ರಾಜಕಾರಣ ಮಾಡುವ ಸಲುವಾಗಿ ನಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕು ಎನ್ನುವ ದುಷ್ಟ ಹುನ್ನಾರ ಇಟ್ಟುಕೊಂಡಿದ್ದಾರೆ. ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲಿ ಅತ್ಯಂತ ದ್ರೋಹದ ಕೆಲಸವನ್ನು ಅವರು ಮಾಡಿದ್ದಾರೆ. ಇದನ್ನು ಖಂಡಿಸುತ್ತೇವೆ. ಸತ್ಯ ಹೇಳಲು ನಾವು ಜನರ ಬಳಿ ಹೋಗುತ್ತೇವೆ. ಅವರೂ ಬರಲಿ ಎಂದು ಸವಾಲು ಹಾಕಿದರು.