ಕರ್ನಾಟಕ

karnataka

ETV Bharat / state

ಭತ್ತದ ಕೊಯ್ಲು, ರಾಶಿ ಜೋರು; ದರ ನೋಡಿದ್ರೆ ಮನಸ್ಸು ಚೂರು! ರೈತರ ಗೋಳು ಕೇಳೋರಾರು?

ಕುಂದಾನಗರಿಯಲ್ಲಿ ಭತ್ತದ ಕೊಯ್ಲು, ರಾಶಿ ಬಿರುಸಿನಿಂದ ನಡೆಯುತ್ತಿದೆ. ಆದರೆ ಭತ್ತಕ್ಕೆ ಉತ್ತಮ ಬೆಲೆ ಇಲ್ಲದೇ ಇರುವುದು ರೈತರನ್ನು ಕಂಗೆಡಿಸಿದೆ. ಈ ಕುರಿತು 'ಈಟಿವಿ ಭಾರತ' ಬೆಳಗಾವಿ ಪ್ರತಿನಿಧಿ ಸಿದ್ದನಗೌಡ ಪಾಟೀಲ್ ವಿಶೇಷ ವರದಿ ನೀಡಿದ್ದಾರೆ.

ಭತ್ತದ ಕೊಯ್ಲು-ರಾಶಿ ಜೋರು
ಭತ್ತದ ಕೊಯ್ಲು (ETV Bharat)

By ETV Bharat Karnataka Team

Published : Nov 24, 2024, 2:03 PM IST

ಬೆಳಗಾವಿ:ಜಿಲ್ಲೆಯಲ್ಲಿ ಭತ್ತದ ಕೊಯ್ಲು ಮತ್ತು ರಾಶಿ ಜೋರಾಗಿದೆ. ಆದರೆ, ಕಷ್ಟಪಟ್ಟು ಬೆಳೆದ ಭತ್ತಕ್ಕೆ ಸೂಕ್ತ ಬೆಲೆ ಸಿಗುತ್ತಿಲ್ಲ. ಸರ್ಕಾರ ಖರೀದಿ ಕೇಂದ್ರಗಳನ್ನೂ ಆರಂಭಿಸದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿ, ಖಾನಾಪುರ ಮತ್ತು ಕಿತ್ತೂರು ತಾಲೂಕಿನಲ್ಲಿ ಭತ್ತ ಬೆಳೆಯಲಾಗುತ್ತದೆ. ಒಟ್ಟು 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಭತ್ತದ ಕಟಾವು ಕಳೆದ ಒಂದು ವಾರದಿಂದ ನಡೆಯುತ್ತಿದೆ. ಇಲ್ಲಿ ಕಣ್ಣು ಹಾಯಿಸಿದಲ್ಲೆಲ್ಲೆಡೆ ರೈತರು ಭತ್ತದ ಕೊಯ್ಲು ಮತ್ತು ರಾಶಿ ಮಾಡುವಲ್ಲಿ ನಿರತರಾಗಿರುವುದು ಕಂಡುಬರುತ್ತದೆ.

ಭತ್ತದ ಕೊಯ್ಲು, ರಾಶಿ ಜೋರು; ದರ ನೋಡಿದ್ರೆ ಮನಸ್ಸು ಚೂರು! ರೈತರ ಗೋಳು ಕೇಳೋರಾರು? (ETV Bharat)

ಮಾರುಕಟ್ಟೆಯಲ್ಲಿ 1 ಕ್ವಿಂಟಾಲ್ ಭತ್ತ 2,150-2,200 ರೂಪಾಯಿಗೆ ಮಾರಾಟವಾಗುತ್ತಿದೆ. ಇದು ರೈತರಿಗೆ ಸಮಾಧಾನ ತಂದಿಲ್ಲ. ಯಾಕೆಂದರೆ, 1 ಎಕರೆಯಲ್ಲಿ ಭತ್ತ ಬೆಳೆಯಲು ಬೀಜ, ಗೊಬ್ಬರ, ನಾಟಿ-ಕಟಾವು ಮಾಡುವುದೆಲ್ಲವೂ ಸೇರಿ ಸರಾಸರಿ 54 ಸಾವಿರ ರೂ. ಖರ್ಚು ಆಗುತ್ತದೆ. ಆದರೆ, ಈಗಿನ ದರ ನೋಡಿದರೆ ಹಾಕಿದ ಖರ್ಚು ಕೂಡಾ ಬರುವುದಿಲ್ಲ ಎನ್ನುವುದು ರೈತರ ಅಳಲು.

ಜಿಲ್ಲೆಯಲ್ಲಿ ಇಂದ್ರಾಯಿಣಿ, ಬಾಸುಮತಿ, ಶುಭಾಂಗಿ, ಚಿಟಕಾ ಸೇರಿ ಮತ್ತಿತರ ತಳಿಯ ಭತ್ತವನ್ನು ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಇಲ್ಲಿನ ಭತ್ತ ರಾಜ್ಯ, ಹೊರ ರಾಜ್ಯಗಳಿಗೂ ರಫ್ತಾಗುತ್ತದೆ. ಮುಂದೆ ಅದೇ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗಿ, ವ್ಯಾಪಾರಿಗಳಿಗೆ ಅಧಿಕ ಲಾಭವಾಗುತ್ತದೆ. ಆದರೆ, ಕಷ್ಟ ಪಟ್ಟು ಬೆಳೆಯುವ ರೈತರಿಗೆ ಮಾತ್ರ ಅದರ ಲಾಭ ಸಿಗದಿರುವುದು ವಿಪರ್ಯಾಸ.

ಕಡೋಲಿ ಗ್ರಾಮದ ರೈತ ಅಪ್ಪಾಸಾಹೇಬ ದೇಸಾಯಿ ಈಟಿವಿ ಭಾರತದ ಜೊತೆಗೆ ಮಾತನಾಡಿ, "10 ಗುಂಟೆ ಹೊಲದಲ್ಲಿ ಭತ್ತ ಬೆಳೆದಿದ್ದೇನೆ. 13,500 ರೂ. ಖರ್ಚಾಗಿದೆ. ಅಂದಾಜು‌ 6 ಕ್ವಿಂಟಾಲ್ ಇಳುವರಿ ಬರಬಹುದು. ಇನ್ನು ಒಂದು ಎಕರೆಗೆ ಲೆಕ್ಕ ಹಾಕಿದರೆ 54 ಸಾವಿರ ರೂ. ಖರ್ಚಾಗುತ್ತದೆ. ಭತ್ತ ಮಾರಿ ಕೈಗೆ 50 ಸಾವಿರ ರೂ. ಬರಬಹುದು. ಇದರಿಂದ 4 ಸಾವಿರ ರೂ. ನಷ್ಟವಾಗುತ್ತಿದೆ. ಆದ್ದರಿಂದ ಸರ್ಕಾರ ತಕ್ಷಣ ಖರೀದಿ ಕೇಂದ್ರ ತೆರೆಯಬೇಕು. 1 ಕ್ವಿಂಟಾಲ್​ಗೆ 3 ಸಾವಿರ ರೂ. ದರ ಘೋಷಿಸಿದರೆ ರೈತರು ನೆಮ್ಮದಿಯ ನಿಟ್ಟುಸಿರು ಬಿಡಬಹುದು" ಎಂದರು.

"4 ಎಕರೆಯಲ್ಲಿ ಭತ್ತ ಬೆಳೆದಿದ್ದು, ಈಗ ಬೆಳೆ ಕಟಾವಿಗೆ ಬಂದು ನಿಂತಿದೆ. ಆದರೆ, ಆಳುಗಳು ಸಿಗುತ್ತಿಲ್ಲ. ನರೇಗಾ ಕೆಲಸಕ್ಕೆ ಎಲ್ಲರೂ ಹೋಗುತ್ತಿರುವುದು ಚಿಂತೆಗೀಡು ಮಾಡಿದೆ.‌ ಹಾಕಿದ ಖರ್ಚು ಕೂಡ ಕೈಗೆ ಬರುವುದು ಅನುಮಾನವಾಗಿದೆ. ಹಾಗಾಗಿ, ಸರ್ಕಾರ 3 ಸಾವಿರ ರೂ. ದರ ನಿಗದಿಪಡಿಸಿದರೆ ನಾವು ಬದುಕುತ್ತೇವೆ. ಇಲ್ಲದಿದ್ದರೆ ವಿಷ ಕುಡಿದು ಸಾಯುವ ಪರಿಸ್ಥಿತಿ ನಮಗೆ ಬರುತ್ತದೆ. ಕೃಷಿ ನಂಬಿ ಏನೂ ದೊಡ್ಡ ಕೆಲಸಕ್ಕೆ ಕೈ ಹಾಕಲು ಆಗುತ್ತಿಲ್ಲ" ಎಂದು ಜಾಫರವಾಡಿ ರೈತ ಕಲ್ಲಪ್ಪ ಕಾಗಣಿಕರ್ ನೋವು ತೋಡಿಕೊಂಡರು.

ಇದೇ ಗ್ರಾಮದ ರೈತ ಮಹಿಳೆ ರೇಣುಕಾ ಪಾಟೀಲ ಮಾತನಾಡಿ, "1 ಎಕರೆಯಲ್ಲಿ ಭತ್ತ ಬೆಳೆದಿದ್ದೇವೆ. ಈಗಿನ ದರ ನೋಡಿದರೆ ನಾವು ಹಾಕಿದ ಖರ್ಚು ವಾಪಸ್ ಸಿಗುವ ಭರವಸೆ ಇಲ್ಲ. ಸರ್ಕಾರ ದಯವಿಟ್ಟು ಭತ್ತದ ಬೆಳೆಗಾರರ ಸಮಸ್ಯೆ ಆಲಿಸಿ 3 ಸಾವಿರ ರೂ. ಬೆಲೆ ಘೋಷಣೆ ಮಾಡಿದರೆ ತುಂಬಾ ಅನುಕೂಲ ಆಗುತ್ತದೆ" ಎಂದರು.

"ಬೆಳಗಾವಿ ಮತ್ತು ಖಾನಾಪುರದಲ್ಲಿ ಭತ್ತದ ಖರೀದಿ ಕೇಂದ್ರ ತೆರೆಯಲಾಗಿದೆ. 1 ಕ್ವಿಂಟಾಲ್ ಗೆ 2300-2310 ರೂ. ದರ ನಿಗದಿಪಡಿಸಲಾಗಿದೆ. ಆದರೆ, ಪ್ರತಿಯೊಬ್ಬ ರೈತರಿಂದ ಎಷ್ಟು ಎಕರೆಯಲ್ಲಿ ಬೆಳೆದ ಎಷ್ಟು ಕ್ವಿಂಟಾಲ್ ಭತ್ತ ಖರೀದಿಸಬೇಕು ಎಂಬುದನ್ನು ಸರ್ಕಾರ ನಿರ್ಧರಿಸಬೇಕಿದೆ. ರೈತರು ಇನ್ನೂ ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡಿಲ್ಲ. ಕೇಂದ್ರಕ್ಕೆ ಬಂದು ಮಾಹಿತಿ ಪಡೆದುಕೊಂಡು ಹೋಗುತ್ತಿದ್ದಾರೆ" ಎಂದು ಬೆಳಗಾವಿ ಕೃಷಿ ಮಾರಾಟ ಇಲಾಖೆ ಉಪ ನಿರ್ದೇಶಕರು ಎಂ.ಡಿ.ಚಬನೂರ ಹೇಳಿದ್ದಾರೆ.

ಇದನ್ನೂ ಓದಿ:ಬೆಳಗಾವಿ ಗೆಣಸಿಗೆ ಉತ್ತರ ಭಾರತದಲ್ಲಿ ಭಾರೀ ಡಿಮ್ಯಾಂಡ್​: ಕೈ ಸೇರಿದ ಉತ್ತಮ ಬೆಲೆ, ರೈತರು ಖುಷ್‌

ABOUT THE AUTHOR

...view details