ಕರ್ನಾಟಕ

karnataka

ETV Bharat / state

ಅಜಾತಶತ್ರು ಎಸ್. ಎಂ. ಕೃಷ್ಣ ರಾಜಕೀಯ ಜೀವನ ಹೇಗಿತ್ತು? - S M KRISHNA POLITICAL LIFE

ರಾಜ್ಯದ ಮಾಜಿ ಮುಖ್ಯಮಂತ್ರಿ, ಮುತ್ಸದ್ಧಿ ರಾಜಕಾರಣಿ ಎಸ್.ಎಂ. ಕೃಷ್ಣ ಅವರು ನಡೆದು ಬಂದ ರಾಜಕೀಯ ಜೀವನ ರೋಚಕವಾಗಿದೆ. ವೃತ್ತಿಯಲ್ಲಿ ವಕೀಲರಾಗಿದ್ದ ಎಸ್.ಎಂ. ಕೃಷ್ಣ ಅವರು 1962 ರಲ್ಲಿ ಮೊದಲ ಸುನಾವಣೆಯಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದರು.

Former CM S M KRISHNA
ಮಾಜಿ ಸಿಎಂ ಎಸ್​ ಎಂ ಕೃಷ್ಣ (IANS)

By ETV Bharat Karnataka Team

Published : Dec 10, 2024, 9:29 AM IST

Updated : Dec 10, 2024, 11:08 AM IST

ಬೆಂಗಳೂರು: ಎಸ್.ಎಂ. ಕೃಷ್ಣ ರಾಜ್ಯ ಕಂಡ ಅಪರೂಪದ ಮುಖ್ಯಮಂತ್ರಿಗಳಲ್ಲಿ ಒಬ್ಬರು. ಬೆಂಗಳೂರನ್ನು ಸಿಂಗಾಪುರ ಮಾಡುವ ಕನಸಿನೊಂದಿಗೆ ಸಿಲಿಕಾನ್ ಸಿಟಿಯಾಗಲು ಪ್ರಮುಖ ಕೊಡುಗೆ ನೀಡಿದ್ದರು. ಭೀಕರ ಬರಗಾಲ, ಡಾ. ರಾಜ್ ಕುಮಾರ್ ಅಪಹರಣದಂತಹ ಸಂದಿಗ್ಧ ಸ್ಥಿತಿಯಲ್ಲಿ ರಾಜ್ಯವನ್ನು ಆಳ್ವಿಕೆ ಮಾಡಿದ್ದ ಹೆಗ್ಗಳಿಕೆ ಅವರದು. ಕಾಂಗ್ರೆಸ್​ನಿಂದ ಮುಖ್ಯಮಂತ್ರಿ, ಕೇಂದ್ರ ಸಚಿವ, ರಾಜ್ಯಪಾಲರಾಗಿದ್ದ ಕೃಷ್ಣ ಅವರು ಬದಲಾದ ರಾಜಕೀಯ ಸ್ಥಿತ್ಯಂತರದ ನಡುವೆ ಬಿಜೆಪಿ ಸೇರಿ ರಾಜಕೀಯ ನಿವೃತ್ತಿ ಘೋಷಿಸಿದ್ದರು.

1932ರ ಮೇ 1 ರಂದು ಎಸ್.ಸಿ. ಮಲ್ಲಯ್ಯ ಮತ್ತು ತಾಯಮ್ಮ ದಂಪತಿ ಪುತ್ರರಾಗಿ ಸೋಮನಹಳ್ಳಿಯಲ್ಲಿ ಜನಿಸಿದ ಎಸ್.ಎಂ.ಕೃಷ್ಣ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವೀಧರರಾದ ನಂತರ ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಓದಿದರು. ಬಳಿಕ ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿರುವ ಸದರ್ನ್ ಮೆಥಡಿಸ್ಟ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ವಾಷಿಂಗ್ಟನ್​ನಲ್ಲಿರುವ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ ಫುಲ್‍ಬ್ರೈಟ್ ವಿದ್ಯಾರ್ಥಿವೇತನವನ್ನು ಪಡೆದುಕೊಂಡರು. ಭಾರತಕ್ಕೆ ಮರಳಿದ ನಂತರ ಬೆಂಗಳೂರಿನ ರೇಣುಕಾಚಾರ್ಯ ಲಾ ಕಾಲೇಜಿನಲ್ಲಿ ಕಾನೂನು ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.

ಮಾಜಿ ಸಿಎಂ ಎಸ್​ ಎಂ ಕೃಷ್ಣ (Getty Images)

ಕೃಷ್ಣ ರಾಜಕೀಯ ಹಾದಿ:ವಿಧಾನಸಭೆಗೆ ಮೊದಲ ಬಾರಿ 1962 ರಲ್ಲಿ ಮದ್ದೂರು ಕ್ಷೇತ್ರದಿಂದ ಚುನಾಯಿತರಾದರು. ಆದರೆ 1967 ರಲ್ಲಿ ನಡೆದ ಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಪರಾಜಿತಗೊಂಡಿದ್ದರು. ಆದರೆ 1968ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಚುನಾಯಿತರಾದರು. 1971ರಲ್ಲಿ ಕಾಂಗ್ರೆಸ್​ನಿಂದ ಕಣಕ್ಕಿಳಿದು ಮಂಡ್ಯದಿಂದ ಮರು ಚುನಾಯಿತರಾಗಿ, 1972 ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾಯಿತರಾದರು. ಇದೇ ಸಮಯದಲ್ಲಿ ವಾಣಿಜ್ಯ, ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದರು. 1980 ರಲ್ಲಿ ಮತ್ತೆ ಮಂಡ್ಯ ಸಂಸದರಾದರು. ಆದರೆ 1984 ರಲ್ಲಿ ಮಂಡ್ಯದಲ್ಲಿ ಸೋಲನ್ನನುಭವಿಸಿದರು.

1983ರಲ್ಲಿ ಕೇಂದ್ರ ಉದ್ಯಮ ಖಾತೆ ಮತ್ತು ರಾಜ್ಯ ಸಚಿವರಾಗಿ ಮತ್ತು 1984 ರಲ್ಲಿ ಕೇಂದ್ರ ವಿತ್ತ ಖಾತೆಯ ರಾಜ್ಯ ಸಚಿವರಾದರು.1989 ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದ ಕೃಷ್ಣ 1992ರ ವರೆಗೆ ವಿಧಾನಸಭೆಯ ಸ್ಪೀಕರ್ ಆಗಿ ನೇಮಿತರಾಗಿದ್ದರು. 1993 ರಿಂದ 1994ರ ವರೆಗೆ ಕರ್ನಾಟಕದ ಉಪ-ಮುಖ್ಯಮಂತ್ರಿಗಳಾದರು. 1995ರ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಎಸ್ಎಂ ಕೃಷ್ಣ ಸೋಲು ಅನುಭವಿಸಬೇಕಾಯಿತು. ಆ ವೇಳೆ ರಾಜಕೀಯದಲ್ಲಿ ಉನ್ನತ ಮಟ್ಟದಲ್ಲಿದ್ದ ಕೃಷ್ಣ ಅವರ ಸೋಲು ವ್ಯಾಪಕ ಚರ್ಚೆಗೆ ಸಹ ಕಾರಣವಾಗಿತ್ತು. 1996ರಲ್ಲಿ ರಾಜ್ಯಸಭೆಗೆ ನೇಮಕಗೊಂಡ ಕೃಷ್ಣ, 1999 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. 1999 ರಲ್ಲಿ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಎಸ್. ಎಂ. ಕೃಷ್ಣ ಮುನ್ನೆಡಸಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 132 ಸೀಟುಗಳನ್ನು ಗೆದ್ದು ಅಧಿಕಾರದ ಗದ್ದುಗೆಗೇರಿತು.

ಮುಖ್ಯಮಂತ್ರಿಯಾಗಿ ಕೃಷ್ಣ:ರಾಜ್ಯದಲ್ಲಿ ಎಸ್ಎಂ ಕೃಷ್ಣ ಆಳ್ವಿಕೆ ಇಡೀ ದೇಶದಲ್ಲೇ ಸಾಕಷ್ಟು ಸದ್ದು ಮಾಡಿತ್ತು. ಬೆಂಗಳೂರನ್ನು ಸಿಂಗಾಪುರ ಮಾಡುತ್ತೇನೆ ಎನ್ನುವ ಎಸ್.ಎಂ ಕೃಷ್ಣ ಹೇಳಿಕೆ ಇಡೀ ದೇಶವೇ ರಾಜ್ಯದ ಕಡೆ ತಿರುಗುವಂತೆ ಮಾಡಿತ್ತು. ಬೆಂಗಳೂರು ಸಿಂಗಾಪರ ಆಗದಿದ್ದರೂ ಐಟಿ ಸಿಟಿಯಾಯಿತು. ಐಟಿ ಕ್ಯಾಪಿಟಲ್ ಆಗಿ ದೇಶದ ಗಮನ ಸೆಳೆಯಿತು. ಇದರ ಜೊತೆಗೆ ವಿಧಾನಸೌಧದ ಪಕ್ಕದಲ್ಲಿ ವಿಧಾನಸೌಧದ ಪ್ರತಿಕೃತಿಯಂತೆ ವಿಕಾಸಸೌಧ ನಿರ್ಮಿಸಿದರು. ವಿಕಾಸಸೌಧದ ನಿರ್ಮಾತೃ ಎನ್ನುವ ಹೆಗ್ಗಳಿಕೆ ಪಡೆದುಕೊಂಡರು.

ನಾಲ್ಕು ಸದನದ ಸದಸ್ಯ:ಮದ್ದೂರು ಕ್ಷೇತ್ರದಿಂದ 3 ಬಾರಿ ಹಾಗೂ ಚಾಮರಾಜಪೇಟೆಯಿಂದ 1 ಬಾರಿ ಶಾಸಕರಾಗಿದ್ದರು. ಮೂರು ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ, 1 ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. 2 ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. ಕರ್ನಾಟಕದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸ್ಪೀಕರ್, ಕೈಗಾರಿಕೆ, ವಾಣಿಜ್ಯ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ವಿಧಾನಸಭೆ, ವಿಧಾನ ಪರಿಷತ್​, ಲೋಕಸಭೆ, ರಾಜ್ಯಸಭೆ ಹೀಗೆ ದೇಶದ ನಾಲ್ಕೂ ಸದನಗಳ ಸದಸ್ಯರಾಗಿದ್ದ ಅಪರೂಪದ ರಾಜಕಾರಣಿಗಳಲ್ಲಿ ಕೃಷ್ಣ ಒಬ್ಬರು. ಶಾಸಕ, ಪರಿಷತ್​ ಸದಸ್ಯ, ಸಚಿವ, ಸಂಸದ, ರಾಜ್ಯಸಭೆ ಸದಸ್ಯ, ಕೇಂದ್ರ ಸಚಿವ, ರಾಜ್ಯಪಾಲ ಇಷ್ಟು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ವಿರಳ ರಾಜಕಾರಣಿಗಳಲ್ಲಿ ಕೃಷ್ಣ ಒಬ್ಬರಾಗಿದ್ದರು.

ಮಾಜಿ ಸಿಎಂ ಎಸ್​ ಎಂ ಕೃಷ್ಣ (IANS)

ಎಸ್.ಎಂ. ಕೃಷ್ಣ ಅವರಿಗೆ ಎದುರಾದ ಸವಾಲು: ಎಸ್.ಎಂ. ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆ ಎರಡು ಘಟನೆಗಳು ನಡೆದು ದೊಡ್ಡ ಸವಾಲು ಎದುರಾಗಿತ್ತು. ಆಗ ತಮ್ಮ ಚಾಕಚಕ್ಯತೆಯಿಂದ ನಿಭಾಯಿಸುವಲ್ಲಿ ಎಸ್.ಎಂ.ಕೃಷ್ಣ ಯಶಸ್ವಿಯಾಗಿದ್ದರು.

ವರನಟ ಡಾ. ರಾಜ್​ಕುಮಾರ್ ಅವರನ್ನು ಗಾಜನೂರಿನ ನಿವಾಸದಿಂದ ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿ, ಮೂರು ತಿಂಗಳ ಕಾಲ ಒತ್ತೆಯಾಗಿ ಇರಿಸಿಕೊಂಡಿದ್ದ. ಆಗ ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಗಳು ನಡೆದವು. ಬಳಿಕ ಕೃಷ್ಣ ಅವರು ಅಂದಿನ ತಮಿಳುನಾಡು ಸಿಎಂ ಜೊತೆಗೆ ಮಾತುಕತೆ ನಡೆಸಿ, ನಂತರ ಸಂಧಾನಕಾರರನ್ನು ಕಾಡಿಗೆ ಕಳುಹಿಸಿ ವೀರಪ್ಪನ್ ನನ್ನು ಸಂಪರ್ಕ ಮಾಡಿ, ಅಂತೂ ಇಂತೂ 108 ದಿನಗಳ ನಂತರ ರಾಜ್​ಕುಮಾರ್ ಅವರನ್ನು ಕ್ಷೇಮವಾಗಿ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇನ್ನೊಂದು ಘಟನೆ ಎಂದರೆ ಕೃಷ್ಣ ಅವರ ಅವಧಿಯಲ್ಲಿ ರಾಜ್ಯದಲ್ಲಿ ಮಳೆ ಕೈಕೊಟ್ಟು ಭೀಕರ ಬರಗಾಲ ಸೃಷ್ಟಿಯಾಗಿತ್ತು. ಕೆರೆ ಕಟ್ಟೆಗಳು, ಜಲಾಶಯಗಳು ನೀರಿಲ್ಲದೆ ಒಣಗಿ ನೀರಿಗಾಗಿ ಹಾಹಾಕಾರವೇ ಎದ್ದಿತ್ತು. ಅನಾವೃಷ್ಟಿಯಿಂದ ಕಂಗೆಟ್ಟಿದ್ದ ಕೃಷ್ಣ ಸರ್ಕಾರ ಜನರ ರಕ್ಷಣೆಗೆ ವೈಜ್ಞಾನಿಕವಾಗಿ ಮೋಡ ಬಿತ್ತನೆಯಂತಹ ಪ್ರಯತ್ನ ನಡೆಸಿ ಮಳೆ ತರಿಸುವ ವಿಫಲ ಪ್ರಯತ್ನ ನಡೆಸಿತ್ತು. ಈ ವೇಳೆ ತಮಿಳುನಾಡು ಕಾವೇರಿ ನೀರಿಗಾಗಿ ಒತ್ತಡ ಹಾಕಿತ್ತು. ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ತೀವ್ರ ಸ್ವರೂಪದ ಹೋರಾಟಗಳು ಕೂಡ ನಡೆದವು.

2004 ರಲ್ಲಿ ಕೃಷ್ಣ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಕಾಂಗ್ರೆಸ್ ಹೀನಾಯ ಸೋಲು ಕಂಡಿತು. ಚಾಮರಾಜಪೇಟೆಯಿಂದ ಕೃಷ್ಣ ಗೆದ್ದರೂ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ತಳ್ಳಲ್ಪಪಟ್ಟಿತು. ಯಾವ ಪಕ್ಷಕ್ಕೂ ಬಹುಮತ ಇಲ್ಲದ ಕಾರಣ ರಾಜ್ಯದಲ್ಲಿ ಮೊದಲ ಬಾರಿಗೆ ಮೈತ್ರಿ ಸರ್ಕಾರ ರಚನೆಯಾಯಿತು. ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗುವ ಪ್ರಯತ್ನ ಸಫಲವಾಗಲ್ಲ. ಹಾಗಾಗಿ ಮೈತ್ರಿ ಸರ್ಕಾರದಿಂದ ಹೊರಗುಳಿದ ಕೃಷ್ಣ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಮಹಾರಾಷ್ಟ್ರ ರಾಜ್ಯಪಾಲರನ್ನಾಗಿ ನೇಮಿಸಿತು.

2004- 2008 ರವರೆಗೆ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಕೃಷ್ಣರನ್ನು ಮನಮೋಹನ್ ಸಿಂಗ್ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರನ್ನಾಗಿ ಮಾಡಿ ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. 2009- 2012ರ ವರೆಗೆ ವಿದೇಶಾಂಗ ಸಚಿವರಾಗಿ ಕೃಷ್ಣ ಕಾರ್ಯ ನಿರ್ವಹಣೆ ಮಾಡಿದ್ದರು. ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಏಕಾಏಕಿ ಸಂಪುಟದಿಂದ ಕೃಷ್ಣ ಅವರನ್ನು ಕೈಬಿಡಲಾಗಿತ್ತು. ನಂತರ ಕಾಂಗ್ರೆಸ್​ನಿಂದ ಅಂತರ ಕಾಯ್ದುಕೊಂಡಿದ್ದ ಕೃಷ್ಣ 2017ರ ಜನವರಿ 28 ಬೆಳಗ್ಗೆ 11 ಗಂಟೆಗೆ ಅಧಿಕೃತವಾಗಿ ಕಾಂಗ್ರೆಸ್​ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಘೋಷಣೆ ಮಾಡಿ ಬಿಜೆಪಿ ಸೇರಿದ್ದರು. ಯಾವುದೇ ಹುದ್ದೆಯ ನಿರೀಕ್ಷೆ ಇಲ್ಲದೆ ಬಿಜೆಪಿಯಲ್ಲಿದ್ದು ಮಾರ್ಗದರ್ಶನ ಮಾಡುವುದಕ್ಕೆ ಸೀಮಿತರಾಗಿದ್ದರು.

ಟೆನಿಸ್ ಚಾಂಪಿಯನ್ ಶಿಪ್ ಆಯೋಜಿಸಿದ ಕೀರ್ತಿ:2000ನೇ ಇಸವಿಯಲ್ಲಿ ಅಂದರೆ ಎಸ್‌ಎಂಕೆ ಕಾಲದಲ್ಲಿ ಬೆಂಗಳೂರಿನಲ್ಲಿ ಇಂಟರ್ ನ್ಯಾಷನಲ್ ಗುಣಮಟ್ಟದ ಟೆನಿಸ್ ಕ್ರೀಡಾಂಗಣ ಸಿದ್ಧವಾಯಿತು. ಏಷ್ಯಾ ಖಂಡದಲ್ಲಿಯೇ ಮೊದಲ ಬಾರಿಗೆ ATP World Doubles Championship-2000ನ್ನು ಬೆಂಗಳೂರಿನಲ್ಲಿ ಆಯೋಜಿಸಲಾಯಿತು. ಏಷ್ಯಾ ಖಂಡದಲ್ಲಿ ಮೊತ್ತ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಈ ಕ್ರೀಡಾಕೂಟ ಆಯೋಜನೆಗೊಂಡಿದ್ದು ಚರಿತ್ರಾರ್ಹ ವಿಷಯವಾಗಿದೆ. ಇದಕ್ಕೆ ಮುಖ್ಯ ಕಾರಣ ಆಗ ಕೆಎಸ್‌ಎಲ್‌ಟಿಎ ಅಧ್ಯಕ್ಷರಾಗಿದ್ದ ಎಸ್‌.ಎಂ. ಕೃಷ್ಣ ಅವರು. 90 ವರ್ಷಗಳಿಂದ ಆಗದ ಮಹತ್ಕಾರ್ಯವನ್ನು ಎಸ್‌.ಎಂ. ಕೃಷ್ಣ ಅಧ್ಯಕ್ಷರಾಗಿದ್ದಾಗ ನೆರವೇರಿಸಿದ್ದರು.

ಎಸ್.ಎಂ.ಕೆ ಸಾಧನೆ: ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದ ವೇಳೆ ಬೆಂಗಳೂರನ್ನು ಸಿಲಿಕಾನ್ ಸಿಟಿಯನ್ನಾಗಿ ಮಾಡಿದ್ದು, ಐಟಿ ಬಿಟಿಯಲ್ಲಿ ಬಹುದೊಡ್ಡ ಕ್ರಾಂತಿ. ಇದರ ಜೊತೆ ನಗರದಲ್ಲಿ ಹೆಬ್ಬಾಳ, ಹೆಚ್​.ಎಸ್.ಆರ್. ಲೇಔಟ್, ಸಿಲ್ಕ್​ ಬೋರ್ಡ್, ರಿಚ್ಮಂಡ್ ಸರ್ಕಲ್ ಫ್ಲೈಓವರ್​ಗಳಿಗೆ ಅಡಿಪಾಯ ಹಾಕಿದರು. ಇದರ ಜೊತೆ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿದರು. ಸರ್ಕಾರಿ ಶಾಲೆ ಮಕ್ಕಳಿಗೆ ಬಿಸಿಯೂಟ, ಯಶಸ್ವಿನಿ ಯೋಜನೆ, ವಿಕಾಸಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆ ಆಗಿದ್ದೇ ಎಸ್.ಎಂ.ಕೃಷ್ಣ ಅವರ ಅಧಿಕಾರಾವಧಿಯಲ್ಲಿ. ಅದೇ ರೀತಿ ಅಂತಾರಾಷ್ಟ್ರ್ರೀಯ ವಿಮಾನ ನಿಲ್ದಾಣ, ಬೆಂಗಳೂರು-ಮೈಸೂರು ಹೆದ್ದಾರಿ ಸೇರಿದಂತೆ ಹಲವಾರು ಅಭಿವೃದ್ಧಿ ಕೊಡುಗೆಗಳನ್ನು ರಾಜ್ಯಕ್ಕೆ ಕೊಟ್ಟಿರುವ ಕೀರ್ತಿ ಎಸ್.ಎಂ.ಕೆ. ಅವರಿಗೆ ಸಲ್ಲುತ್ತದೆ. ಕೃಷ್ಣ ಅವರ ರಾಜಕೀಯ ಮುತ್ಸದ್ಧಿತನಕ್ಕೆ 2023 ರಲ್ಲಿ ಕೇಂದ್ರ ಸರ್ಕಾರ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.

ಖಾಸಗಿ ಬದುಕು:ಎಸ್ಎಂ ಕೃಷ್ಣ ಪ್ರೇಮಾ ಅವರನ್ನು ಮದುವೆಯಾದರು. ಅವರಿಗೆ ಇಬ್ಬರು ಪುತ್ರಿಯರು. ಒಬ್ಬರು ಮಾಳವಿಕ ಮತ್ತೊಬ್ಬರು ಶಾಂಭವಿ. ಮಾಳವಿಕ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ದಾರ್ಥ್​ ಅವರನ್ನು ಮದುವೆಯಾಗಿದ್ದರು. ಆದರೆ ಸಿದ್ದಾರ್ಥ್​ ಕೆಲ ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದು, ಅಳಿಯನ ಅಕಾಲಿಕ ನಿಧನದಿಂದ ಕೃಷ್ಣ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು.

ಇದನ್ನೂ ಓದಿ:ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಮುಖ್ಯಮಂತ್ರಿ ಎಸ್​ ಎಂ ಕೃಷ್ಣ ವಿಧಿವಶ

Last Updated : Dec 10, 2024, 11:08 AM IST

ABOUT THE AUTHOR

...view details