ಹಾವೇರಿ: ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿರುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಬಿರುಸಿನ ಮತದಾನ ನಡೆಯುತ್ತಿದೆ. ಮುಕ್ತ, ನ್ಯಾಯಸಮ್ಮತ ಮತದಾನಕ್ಕೆ ಮುಖ್ಯ ಚುನಾವಣಾಧಿಕಾರಿ ಕಚೇರಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಯುವ ಮತದಾರರು, ವಯೋವೃದ್ಧರು ಮತಗಟ್ಟೆಗೆ ಬಂದು ಸರತಿ ಸಾಲಿನಲ್ಲಿ ನಿಂತು ಶಾಂತಿಯುತವಾಗಿ ವೋಟಿಂಗ್ ಮಾಡುತ್ತಿದ್ದಾರೆ.
ಮೊದಲ ಬಾರಿ ಮತದಾನ: ಜಾಹ್ನವಿ ಕಾಮನಹಳ್ಳಿ ಎಂಬ ಯುವತಿ ಇದೇ ಮೊದಲ ಬಾರಿ ಮತದಾನ ಮಾಡಿ ಹರ್ಷ ವ್ಯಕ್ತಪಡಿಸಿದರು. ಶಿವಮೊಗ್ಗದಿಂದ ಶಿಗ್ಗಾಂವಿ ಪಟ್ಟಣಕ್ಕೆ ಆಗಮಿಸಿದ ಇವರು, ಪಟ್ಟಣದ ಮತಗಟ್ಟೆ ಸಂಖ್ಯೆ 99ರಲ್ಲಿ ತಂದೆ-ತಾಯಿ ಜೊತೆಗೆ ಮತ ಹಕ್ಕು ಚಲಾಯಿಸಿದರು.
ಬಳಿಕ ಈಟಿವಿ ಭಾರತ ಜೊತೆಗೆ ಮಾತನಾಡಿದ ಜಾಹ್ನವಿ, "ಮೊದಲ ಬಾರಿ ವೋಟ್ ಮಾಡುತ್ತಿದ್ದೇನೆ ಎಂಬ ಭಯ ಇತ್ತು. ನನ್ನ ತಂದೆ-ತಾಯಿ ಮತದಾನದ ಬಗ್ಗೆ ಹೇಳಿಕೊಟ್ಟಿದ್ದರಿಂದ ಸುಲಭ ಅನ್ನಿಸಿತು. ಓಟು ಹಾಕಲೆಂದೇ ಶಿವಮೊಗ್ಗದಿಂದ ಶಿಗ್ಗಾಂವಿ ಬಂದಿದ್ದೇನೆ. ಇದು ನನ್ನ ಮೊದಲ ಮತದಾನ. ಯುವ ಮತದಾರರು ಮನೆಯಲ್ಲಿ ಕುಳಿತುಕೊಳ್ಳದೆ ಮತದಾನ ಮಾಡಬೇಕು. ನಾವು ಪಕ್ಷ ನೋಡಿ ಮತದಾನ ಮಾಡಬಾರದು, ಅಭಿವೃದ್ಧಿ ಮಾಡುವ ವ್ಯಕ್ತಿ ನೋಡಿ ಮತ ಹಾಕಬೇಕು" ಎಂದು ಅವರು ಹೇಳಿದರು.
ವೃದ್ಧ ವ್ಯಕ್ತಿಯಿಂದ ಮೊದಲ ಮತ: ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆ ನಂ.1ರಲ್ಲಿ ಎಲ್ಲರಿಗಿಂತ ಮೊದಲು ವೋಟ್ ಹಾಕಿ ಮಾತನಾಡಿದ ತಿರುಕಪ್ಪ ಚಾಕಾಪುರ ಎಂಬ 70 ವರ್ಷದ ವೃದ್ಧ, "ಕುರುಬರ ಮೊದಲ ಮತದಾನದಿಂದ ಒಳ್ಳೆಯದಾಗುತ್ತದೆ ಎಂಬ ಮಾತಿದೆ. ಅದೇ ರೀತಿ ನಮ್ಮ ಓಣಿಯ ಹಾಲುಮತದ ಹಿರಿಯರು ಕೂಡ ಮೊದಲು ನೀನೇ ಓಟು ಹಾಕು ಎಂದು ತಿಳಿಸಿದ್ದರು. ಅದರಂತೆ ಪೂಜೆ ಮಾಡಿದ ಬಳಿಕ ನಾನೇ ಮೊದಲ ಓಟು ಹಾಕಿದೆ. ಯುವಕರು, ಯುವತಿಯರು, ಹಿರಿಯರು ಎಲ್ಲರೂ ಮತದಾನ ಮಾಡಬೇಕು. ಹಾಗಿದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ" ಎಂದರು.