ದಾವಣಗೆರೆ:ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಎರಡೇ ದಿನ ಬಾಕಿಯಿದೆ. ಈ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಇಡೀ ದೇಶದ ಜನರು ಕಾತರರಾಗಿದ್ದಾರೆ. ಹಿಂದೂ ಕಾರ್ಯಕರ್ತರು ಮನೆ ಮನೆಗಳಿಗೆ ಅಯೋಧ್ಯೆಯ ಮಂತ್ರಾಕ್ಷತೆ ನೀಡಿ ಪೂಜಿಸುವಂತೆ ಇಡೀ ದೇಶದಲ್ಲೇ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನದಲ್ಲಿ ಮುಸ್ಲಿಂ ಸಮುದಾಯದವರು ಸಹ ಭಾಗಿಯಾಗಿ ಭಾವೈಕ್ಯತೆ ಮೆರೆದಿದ್ದಾರೆ.
ಜಿಲ್ಲೆಯ ಹರಿಹರ ತಾಲೂಕಿನ ಕಡರನಾಯಕನ ಹಳ್ಳಿಯಲ್ಲಿ ಮುಸ್ಲಿಂರು ಮಂತ್ರಾಕ್ಷತೆ ಪಡೆದು ಮನೆ ಮನೆಗೆ ಹಂಚಿ ಭಾವೈಕ್ಯತೆ ಸಂದೇಶ ಸಾರಿದ್ದಾರೆ.
ಅಯೋಧ್ಯೆಯ ಮಂತ್ರಾಕ್ಷತೆ ಹಾಗೂ ರಾಮ ಮಂದಿರ ಭಾವಚಿತ್ರವನ್ನು ಮನೆ ಮನೆಗೆ ವಿತರಿಸುವ ವಿಶಿಷ್ಟವಾದ ಅಭಿಯಾನ ನಡೆಯುತ್ತಿದೆ. ಆರಂಭದಲ್ಲಿ ಹಿಂದೂಗಳ ಮನೆಗಳಿಗೆ ಈ ಮಂತ್ರಾಕ್ಷತೆ ನೀಡಲಾಗುತ್ತಿತ್ತು. ಆದ್ರೆ, ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕಡರ ನಾಯಕನಹಳ್ಳಿಯಲ್ಲಿ ವಿಭಿನ್ನವಾಗಿ ಮಂತ್ರಾಕ್ಷತೆ ಹಂಚಲಾಗುತ್ತಿದೆ. ಅದರಲ್ಲೂ ರಾಮ ಮಂದಿರ ಫೋಟೋ, ಹಸಿರು ಬಳೆ, ಅರಿಷಿಣ ಕುಂಕುಮವನ್ನು ಮನೆ ಮನೆಗೂ ನೀಡಿ ಪೂಜಿಸಿ ಎಂದು ಸಂದೇಶ ರವಾನಿಸುತ್ತಿದ್ದಾರೆ.
ವಿಶೇಷವೇನೆಂದ್ರೆ, ಕಡರನಾಯಕನ ಹಳ್ಳಿಯಲ್ಲಿ ಮಂತ್ರಾಕ್ಷತೆ ಹಂಚಿಕೆ ಕಾರ್ಯಕ್ರಮದಲ್ಲಿ ಗ್ರಾಮದ ಮುಸ್ಲಿಂ ಸಮುದಾಯದವರು ಕೂಡ ಭಾಗಿಯಾಗಿದ್ದಾರೆ. ಅವರು ಕೂಡ ಶ್ರೀರಾಮನ ಮಂತ್ರಾಕ್ಷತೆ ಫೋಟೋ ಪಡೆದು ಗ್ರಾಮದಲ್ಲಿ ಹಂಚಿಕೆ ಮಾಡಿದರು. ಕಾರ್ಯಕರ್ತರು ಅಕ್ಷತೆ ಕಾಳು ಹಂಚಿಕೆ ಮಾಡುವ ವೇಳೆ ಮುಸ್ಲಿಂ ಧರ್ಮಿಯರ ಮನೆ ಬಿಟ್ಟು ಹಂಚಿಕೆ ಮಾಡಲಾಗುತ್ತಿದೆ. ನಮ್ಮ ಮನೆಗೆ ಏಕೆ ವಿತರಿಸುವುದಿಲ್ಲ ಎಂದು ಕೇಳಿದರು. ತಾವು ಮಂತ್ರಾಕ್ಷತೆಯನ್ನು ಪಡೆದು ಈ ಅಭಿಯಾನದಲ್ಲಿ ಭಾಗವಹಿಸಿದರು. ಜೊತೆಗೆ ಅಯೋಧ್ಯೆಯ ಕಾರ್ಯಕ್ರಮದ ಹಿನ್ನೆಲೆ ರಾಮ ಭಕ್ತರಿಗೆ ಸಿಹಿ ಹಂಚಿ ಸಂಭ್ರಮಿಸಿದರು. 50ಕ್ಕೂ ಹೆಚ್ಚು ಮುಸ್ಲಿಂರ ಮನೆಗಳಿಗೆ ಮಂತ್ರಾಕ್ಷತೆ ನೀಡಲಾಗಿದೆ. ಅಲ್ಲದೇ ಜ.22 ರಂದು ರಾಮ ಮಂದಿರ ಉದ್ಘಾಟನೆ ದಿನದಂದು ಪಾನಕ, ಕೋಸಂಬರಿಯನ್ನು ವಿತರಣೆ ಮಾಡುವ ಜವಾಬ್ದಾರಿ ವಹಿಸಿಕೊಂಡಿರುವುದು ವಿಶೇಷ.
ಪವಿತ್ರತೆಯಿಂದ ಮಂತ್ರಾಕ್ಷತೆ ಸ್ವೀಕರಿಸಿದ ಮುಸ್ಲಿಂ ಬಾಂಧವರು:"ನಮ್ಮ ಗ್ರಾಮದಲ್ಲಿ ಅಯೋಧ್ಯೆಯ ಮಂತ್ರಾಕ್ಷತೆಯನ್ನು ಮುಸ್ಲಿಂ ಸಮುದಾಯದವರು ಪವಿತ್ರತೆಯಿಂದ ಸ್ವೀಕರಿಸಿದರು. ಮೊದಲಿಗೆ ಮುಸ್ಲಿಂ ಸಮುದಾಯದವರ ಮನೆಗಳಿಗೆ ಮಂತ್ರಾಕ್ಷತೆ ಕೊಡ್ಬೇಕೋ, ಬೇಡವೋ ಎಂದು ಚಿಂತಿಸುತ್ತಿದ್ದೆವು. ಬಳಿಕ ಮನೆ ಮನೆಗೆ ಹಂಚುವ ವೇಳೆ ಮಧ್ಯೆ ಪ್ರವೇಶ ಮಾಡಿದ ಅವರು, ನಾವು ಕೂಡ ರಾಮನ ಭಕ್ತರು. ನಮಗೂ ಮಂತ್ರಾಕ್ಷತೆ ನೀಡಿ ಎಂದು ತಾವಾಗಿಯೇ ಕೇಳಿ ಮಂತ್ರಾಕ್ಷತೆ, ಹಸಿರು ಬಳೆ, ಅರಿಶಿನ ಕುಂಕುಮ, ಜಾಕೆಟ್ ಬಟ್ಟೆ ಸ್ವೀಕರಿಸಿದರು. ಬಾಲ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ದಿನದಂದು ನಡೆಯುವ ಕಾರ್ಯಕ್ರಮದಲ್ಲಿ ಅವರು ಸಹ ಭಾಗವಹಿಸುತ್ತಾರೆ. ಈ ಹಿಂದೆ ರಾಮ ನವಮಿ ದಿನದಂದು ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಹ ಪಾಲ್ಗೊಂಡಿದ್ದರು. ನಮ್ಮ ಊರಿನಲ್ಲಿ ಎಲ್ಲರೂ ಭಾವೈಕ್ಯತೆಯಿಂದ ಒಂದಾಗಿದ್ದೇವೆ'' ಎಂದು ಗ್ರಾಮದ ರಾಮ ಮಂದಿರದ ಅರ್ಚಕ ಗುರುರಾಜ್ ಆಚಾರ್ ಮಾಹಿತಿ ನೀಡಿದರು.
ಗ್ರಾಮಸ್ಥರು ಹೇಳೋದೇನು?:"ಹಿಂದೂ- ಮುಸ್ಲಿಂ ಎನ್ನುವ ಭೇದ, ಭಾವ ಇಲ್ಲದೇ ಎಲ್ಲರೂ ಒಟ್ಟಾಗಿ ನಮ್ಮ ಗ್ರಾಮದಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಂಭ್ರಮಾಚರಣೆ ಮಾಡಲು ಸಿದ್ಧಗೊಂಡಿದ್ದಾರೆ. ನಮ್ಮ ಊರಿನಲ್ಲಿ 2,500 ಜನಸಂಖ್ಯೆ ಇದ್ದು, ಅದರಲ್ಲಿ 50 ಮುಸ್ಲಿಂ ಕುಟುಂಬಗಳಿವೆ. ಗ್ರಾಮದ ಮುಸ್ಲಿಮರು ಕೂಡ ಕರ ಪತ್ರದಲ್ಲಿನ ನಿಯಮದಂತೆ ಜ್ಯೋತಿ ಬೆಳಗುವ ಮೂಲಕ ಆಚರಣೆ ಮಾಡುತ್ತೇವೆ ಎಂದಿದ್ದಾರೆ. ಯಾರು ಅನ್ಯತಾ ಭಾವಿಸಿಲ್ಲ. ನಮ್ಮಲ್ಲಿ ಸೌಹಾರ್ದತೆ ಇದೆ. ಯಾವುದೇ ಕೋಮು ಗಲಭೆ ಇಲ್ಲ. ಇದರಿಂದ ಎಲ್ಲರಲ್ಲೂ ಸಂತಸ ಮೂಡಿದೆ'' ಎಂದು ಗ್ರಾಮಸ್ಥ ಮಾರುತಿ ಖುಷಿ ವ್ಯಕ್ತಪಡಿಸಿದರು.
ಇದನ್ನೂ ಓದಿ:ಶ್ರೀರಾಮ ಮಂದಿರ ಹೋರಾಟದ ವೇಳೆ ದೇವರ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗಿತ್ತು ಭಾರತ ಮಾತಾ ದೇಗುಲ