ಬೆಂಗಳೂರು: ಇದು ಪ್ರಧಾನ ಮಂತ್ರಿ ಆವಾಸ್ ಯೋಜನೆ, ಸರ್ವರಿಗೂ ಸೂರು. ಆದರೆ, ಕೇಂದ್ರದಿಂದ 1.50 ಲಕ್ಷ ರೂ. ಮಾತ್ರ ಬರುತ್ತೆ. ಇದಕ್ಕಿಂತ ದೊಡ್ಡ ಮೋಸ ಯಾವುದಾದರೂ ಇದ್ಯಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಕೆ.ಆರ್.ಪುರಂನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಇದು ಪ್ರಧಾನಿ ಮಂತ್ರಿ ಆವಾಸ್ ಯೋಜನೆ, ಸರ್ವರಿಗೂ ಸೂರು. ಆದರೆ, ಕೇಂದ್ರದಿಂದ ಬರೋದು 1.50 ಲಕ್ಷ ರೂ. ಮಾತ್ರ. ಒಂದು ಮನೆಗೆ 6 ರಿಂದ 7.5 ಲಕ್ಷ ರೂ. ಖರ್ಚು ಆಗುತ್ತೆ. ಇದಕ್ಕಿಂತ ದೊಡ್ಡ ಮೋಸ ಯಾವುದಾದ್ರೂ ಇದ್ಯಾ?. ಇದರ ಜೊತೆಗೆ 1.50 ಲಕ್ಷ ರೂ. ಜಿಎಸ್ಟಿ ಸಂಗ್ರಹ ಮಾಡ್ತಾರೆ. ಬಾಕಿ ಉಳಿದದ್ದು ಎಷ್ಟು 12 ಸಾವಿರ ರೂ. ಎಂದು ಟೀಕಿಸಿದರು.
ಯಾರಾದ್ರೂ ಫ್ರೀ ಬಸ್ ಕೊಟ್ಟಿದ್ರಾ?. ಪೂರ್ಣಿಮಾ ಕೂಡ ತಿರುಗಾಡಬಹುದು. ಹಿಂದೆ ಯಾರಾದ್ರೂ ಈ ಯೋಜನೆ ಕೊಟ್ಟಿದ್ರೇನಮ್ಮಾ?. ಬಿಜೆಪಿಯವರಿಗೆ ನಮ್ಮ ಯೋಜನೆಯಿಂದ ಹೊಟ್ಟೆ ಉರಿ. ಬಿಜೆಪಿಯವರು ಬಡವರ, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ವಿರೋಧಿ. ಅವರು ಇರೋದೇ ಶ್ರೀಮಂತರ ಪರವಾಗಿ. ಮೋದಿ ಕಾರ್ಪೊರೇಟ್ ಟ್ಯಾಕ್ಸ್ 22.5ಕ್ಕೆ ಇಳಿಕೆ ಮಾಡಿದ್ದಾರೆ. ಮಧ್ಯಮ ವರ್ಗ ಹಾಗೂ ಬಡವರಿಗೆ ಹೊರೆ ಹಾಕಿ ಕಾರ್ಪೊರೇಟ್ ಟ್ಯಾಕ್ಸ್ ಕಡಿಮೆ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ನೀವು ಅವರಿಗೆ ಪಾಠ ಕಲಿಸಿದ್ದೀರಿ. ಮುಂದಿನ ಲೋಕಸಭೆಯಲ್ಲೂ ಇದೇ ರೀತಿ ಆಶೀರ್ವಾದ ಮಾಡಿ. ನಮ್ಮ ಅಭ್ಯರ್ಥಿಗಳಿಗೆ ಬೆಂಬಲ ಕೊಡಿ ಎಂದರು.
28 ಜಿಲ್ಲೆಗಳಲ್ಲಿ 36,789 ಮನೆಗಳನ್ನ ಮೊದಲ ಹಂತದಲ್ಲಿ ಹಂಚಿಕೆ ಮಾಡ್ತಾ ಇದ್ದೇವೆ. ಒಂದೇ ದಿನ ಎಲ್ಲ ಜಿಲ್ಲೆಗಳಲ್ಲೂ ಹಂಚಿಕೆ ಆಗ್ತಿದೆ. ಬೆಂಗಳೂರಿನಲ್ಲಿ ನಾನು, ಬೇರೆ ಜಿಲ್ಲೆಗಳಲ್ಲಿ ಸ್ಥಳೀಯ ಶಾಸಕರಿಂದ ಮನೆ ಹಂಚಿಕೆ ಆಗ್ತಾ ಇದೆ. 1,80, 253 ಮನೆಗಳನ್ನ ಕೊಳಗೇರಿ ನಿವಾಸಿಗಳಿಗೆ ಹಂಚಿಕೆ ಮಾಡ್ತಾ ಇದ್ದೇವೆ. ನಮ್ಮ ಸರ್ಕಾರ 2013-18ರವರೆಗೆ ಇದ್ದಾಗ ರಾಜ್ಯದಲ್ಲಿ ವಸತಿ ಹೀನರಿಗೆ ಪ್ರತಿ ವರ್ಷ 3 ಲಕ್ಷ ಮನೆ ಕೊಡ್ಬೇಕು ಅಂತ ತೀರ್ಮಾನ ಮಾಡಿದ್ವಿ. 5 ವರ್ಷದಲ್ಲಿ 14.54 ಲಕ್ಷ ಮನೆಗಳನ್ನು ಬಡವರಿಗೆ ನೀಡಿದ್ದೇವೆ ಎಂದರು.