ಬೆಂಗಳೂರು: ರಾಜ್ಯದ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮ ಹಂತ ತಲುಪಿದ್ದು, ಕೊನೆ ಕ್ಷಣದ ಬದಲಾವಣೆ ಹೊರತುಪಡಿಸಿ ಪಟ್ಟಿ ಅಂತಿಮಗೊಂಡಿದೆ ಎನ್ನಲಾಗಿದೆ. ನಾಲ್ಕೈದು ಕ್ಷೇತ್ರ ಹೊರತುಪಡಿಸಿ ಬಹುತೇಕ ಎಲ್ಲಾ ಕ್ಷೇತ್ರಗಳಿಗೆ ಹೆಸರು ಫೈನಲ್ ಆಗಿದೆ ಎಂದು ಹೇಳಲಾಗುತ್ತಿದೆ. ಕೆಲ ಹಾಲಿಗಳಿಗೆ ಕೋಕ್ ನೀಡಿ ಹೊಸಬರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎನ್ನುವ ಮಾತುಗಳು ಬಿಜೆಪಿ ಪಡಸಾಲೆಯಿಂದಲೇ ಕೇಳಿಬರುತ್ತಿವೆ.
ನವದೆಹಲಿಯಲ್ಲಿ ರಾಜ್ಯ ಬಿಜೆಪಿ ನಾಯಕರ ಜೊತೆ ಹೈಕಮಾಂಡ್ ನಾಯಕರು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಮಹತ್ವದ ಸಮಾಲೋಚನೆ ನಡೆಸಿದ್ದು ಬಹುತೇಕ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ರಾಜ್ಯ ನಾಯಕರ ಅಭಿಪ್ರಾಯ, ವೀಕ್ಷಕರ ಸಲಹೆ, ಸಮೀಕ್ಷಾ ವರದಿಗಳು ಹಾಗು ಗೆಲ್ಲುವ ಸಾಮರ್ಥ್ಯದ ಆಧಾರದಲ್ಲಿ ಟಿಕೆಟ್ ಅಂತಿಮಗೊಳಿಸಲಾಗಿದೆ.
ಸದ್ಯ ಟಿಕೆಟ್ ಆಯ್ಕೆ ಕುರಿತ ಮಾತುಕತೆ ಮುಗಿದಿದ್ದು, ಯಾವುದೇ ಕ್ಷಣದಲ್ಲಿ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಅಚ್ಚರಿ ಆಯ್ಕೆಯ ಅವಕಾಶವೂ ಈ ಬಾರಿ ಇರಲಿದ್ದು ಯಾರಿಗೆಲ್ಲಾ ಅವಕಾಶ ಸಿಗಲಿದೆ, ಟಿಕೆಟ್ ಕೈತಪ್ಪಲಿದೆ ಎನ್ನುವುದು ಪಟ್ಟಿ ಬಿಡುಗಡೆ ನಂತರವೇ ಗೊತ್ತಾಗಬೇಕಿದೆ.
ಮೂಲಗಳ ಪ್ರಕಾರ ಸೋಮಣ್ಣ ಅವರಿಗೆ ತುಮಕೂರು ಕ್ಷೇತ್ರ ನೀಡಲಿದ್ದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಶೋಭಾ ಕರಂದ್ಲಾಜೆಗೆ ನೀಡಲಾಗುತ್ತಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಮೈಸೂರಲ್ಲಿ ರಾಜವಂಶಸ್ಥ ಯದುವೀರ್ ಅವರಿಗೆ ಅವಕಾಶ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.