ಕರ್ನಾಟಕ

karnataka

ಹತ್ತೂರು ಸುತ್ತಿ ದೇಣಿಗೆ ಸಂಗ್ರಹಿಸಿ ಸರ್ಕಾರಿ ಶಾಲೆ ಅಭಿವೃದ್ಧಿಪಡಿಸಿದ ಶಿಕ್ಷಕ! - Teachers Day Special

By ETV Bharat Karnataka Team

Published : Sep 5, 2024, 9:12 AM IST

ಶಿಕ್ಷಕರೊಬ್ಬರು ತಾವು ಕೆಲಸ ಮಾಡುತ್ತಿರುವ ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ಜೋಳಿಗೆ ಹಾಕಿಕೊಂಡು ಹಲವು ಊರುಗಳನ್ನು ಸುತ್ತಿ ದೇಣಿಗೆ ಸಂಗ್ರಹಿಸಿ ಶಾಲೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇಂದು ಶಿಕ್ಷಕರ ದಿನ. ಸಮಾಜಮುಖಿ ಶಿಕ್ಷಕರೊಬ್ಬರ ಸಾಧನೆಯ ಸ್ಟೋರಿ ಇಲ್ಲಿದೆ.

ದಾವಣಗೆರೆ
ಸರ್ಕಾರಿ ಶಾಲೆಯ ಚಿತ್ರಣ ಬದಲಿಸಿದ ಶಿಕ್ಷಕ (ETV Bharat)

ಅಭಿವೃದ್ಧಿಗೊಂಡ ಹಿಂಡಸಘಟ್ಟ ಕ್ಯಾಂಪ್​ ಸರ್ಕಾರಿ ಶಾಲೆ (ETV Bharat)

ದಾವಣಗೆರೆ:ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದ ಅನುದಾನ ಅಷ್ಟಕ್ಕಷ್ಟೇ. ಹಾಗೊಂದು ವೇಳೆ ಕೊಟ್ಟರೂ ಅದು ಶಾಲೆಗಳ ಅಭಿವೃದ್ಧಿಗೆ ಸಾಕಾಗದು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ದಾವಣಗೆರೆ ಜಿಲ್ಲೆಯ ಶಿಕ್ಷಕರೊಬ್ಬರು ಶಾಲೆಯ ಅಭಿವೃದ್ಧಿಗಾಗಿ ತಾವೇ ಟೊಂಕ ಕಟ್ಟಿ ನಿಂತು ಯಶಸ್ವಿಯಾಗಿದ್ದಾರೆ.

ರಾಜ್ಯದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಅರುಣ್ ಕುಮಾರ್ ಅವರು ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಿದವರು. ಹಿಂಡಸಘಟ್ಟ ಕ್ಯಾಂಪ್ ಎಂಬ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಇವರು ದೇಣಿಗೆ ಸಂಗ್ರಹಿಸಿ ಅಭಿವೃದ್ಧಿಪಡಿಸಿದ್ದು ವಿಶೇಷ.

ಮುಖ್ಯಶಿಕ್ಷಕ ಅರುಣ್ ಕುಮಾರ್​​ .ಬಿ. ಅವರಿಂದ ಮಕ್ಕಳಿಗೆ ಪಾಠ, ಪ್ರವಚನ (ETV Bharat)

ಹರಿಹರ ತಾಲೂಕಿನಲ್ಲಿ ಹಿಂಡಸಘಟ್ಟ ಕ್ಯಾಂಪ್​ ಎಂಬುದೊಂದು ಪುಟ್ಟ ಗ್ರಾಮ. ಈ ಗ್ರಾಮದಲ್ಲಿ ಶಾಲೆ ಕಲಿತು ಉನ್ನತ ಹುದ್ದೆ ಗಿಟ್ಟಿಸಿಕೊಂಡವರ ಸಂಖ್ಯೆ ವಿರಳ. ಆದರೆ ತಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಹಂಬಲ ಗ್ರಾಮಸ್ಥರಲ್ಲಿದೆ. ಇದಕ್ಕೆ ನೀರೆರೆಯಬೇಕಿರುವ ಶಾಲೆ ಮಾತ್ರ ಪಾಳು ಬಿದ್ದಿತ್ತು.‌ ಕಲಿಕೆಗೆ ಯೋಗ್ಯ ಪರಿಸರವಿಲ್ಲದ ಈ ಶಾಲೆಯಲ್ಲಿ ಒಟ್ಟು 36 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.

1ರಿಂದ 5ನೇ ತರಗತಿ ಇರುವ ಈ ಶಾಲೆಯ ಅಭಿವೃದ್ಧಿಗೆ ಸರ್ಕಾರದಿಂದ ಸಿಕ್ಕಿದ್ದು ಕೇವಲ 50 ಸಾವಿರ ರೂಪಾಯಿ ಅನುದಾನ. ಈ ಹಣದಲ್ಲಿ ಶಾಲೆಯ ಅಭಿವೃದ್ಧಿ ಸಾಧ್ಯವಿಲ್ಲದ ಮಾತು.‌ ಹಾಗಂತ ಶಾಲೆಯ ಮುಖ್ಯಶಿಕ್ಷಕರಾದ ಅರುಣ್ ಕುಮಾರ್​ ಬಿ ಸುಮ್ಮನಾಗಲಿಲ್ಲ. ಹೇಗಾದರೂ ಮಾಡಿ ಶಾಲೆಯ ಅಭಿವೃದ್ಧಿಗೆ ಪಣ ತೊಟ್ಟರು.

ಅಭಿವೃದ್ಧಿಗೊಂಡ ಹಿಂಡಸಘಟ್ಟ ಕ್ಯಾಂಪ್​ ಸರ್ಕಾರಿ ಶಾಲೆ (ETV Bharat)

ಅರುಣ್​ ಕುಮಾರ್ ಅವರು ಗ್ರಾಮಸ್ಥರು, ಯುವಕರ ತಂಡವನ್ನು ಕಟ್ಟಿಕೊಂಡು ಜೋಳಿಗೆ ಹಾಕಿ ಹತ್ತಾರು ಹಳ್ಳಿಗಳನ್ನು ತಿರುಗಿದರು. ಇದರ ಫಲವಾಗಿ ಮೂರುವರೆ ಲಕ್ಷ ರೂಪಾಯಿ ದೇಣಿಗೆ, ಮೂರು ಲಕ್ಷ ಭೌತಿಕ ರೂಪದಲ್ಲಿ ದೊರೆತ ವಸ್ತುಗಳು, ಎಂಟು ಲಕ್ಷ ನರೇಗಾ ಯೋಜನೆ ಅಡಿಯಲ್ಲಿ ಕಾಂಪೌಂಡ್ ನಿರ್ಮಾಣ ಎಲ್ಲಾ ಸೇರಿ ಒಟ್ಟು 14 ಲಕ್ಷ ರೂಪಾಯಿ ಸಂಗ್ರಹವಾಯಿತು. ಇದೀಗ ಶಾಲೆ ನಳನಳಿಸುತ್ತಿದೆ. ಖಾಸಗಿ ಶಾಲೆಗೆ ಸೆಡ್ಡು ಹೊಡೆಯುತ್ತಿದೆ.‌ ಶಿಕ್ಷಕ ಅರುಣ್ ಕುಮಾರ್ ಕಾರ್ಯಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೀಗ ಶಾಲೆಯ ಸುತ್ತ 700 ಅಡಿ ಕಾಂಪೌಂಡ್‌ಗೆ ಆಕರ್ಷಕ ಬಣ್ಣ, ಮುಂಭಾಗದ ಗೋಡೆಯಲ್ಲಿ ಭಾರತ ಮಾತೆ, ಕನ್ನಡ ತಾಯಿ ಭುವನೇಶ್ವರಿಯ ಚಿತ್ರಗಳು, ವಿಜ್ಞಾನದ ಪ್ರಗತಿಗೆ ಸಂಬಂಧಿಸಿದ ಚಿತ್ರಗಳು, ರೋಬೋ, ಯೋಗಾಸನದ ಭಂಗಿಗಳು, ಕಲಿಕಾ ಅವಶ್ಯಕ ಚಿತ್ರಗಳು ರೂಪುಗೊಂಡಿವೆ. ಎಲ್​ಇಡಿ ಟಿವಿ ಮೂಲಕ ಮಕ್ಕಳಿಗೆ ಪಾಠ, ಕೊಠಡಿ ಮೇಲ್ಭಾಗದಲ್ಲಿ ಸೌರಮಂಡಲ ಗಮನ ಸೆಳೆಯುತ್ತಿದೆ.

ಎಲ್​ಇಡಿ ಟಿವಿ ಮೂಲಕ ಮಕ್ಕಳಿಗೆ ಪಾಠ (ETV Bharat)

ಶಿಕ್ಷಕನ ಅರಸಿಕೊಂಡು ಬಂದ ಪ್ರಶಸ್ತಿಗಳು:ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗೆ ಪೂರಕ ವಾತಾವರಣ ನಿರ್ಮಿಸಿದ ಅರುಣ್ ಕುಮಾರ್ ಸಮಾಜಮುಖಿ ಕಾರ್ಯ ಗುರುತಿಸಿ 2023-24ನೇ ಸಾಲಿನ ಅತ್ಯುತ್ತಮ ತಾಲೂಕು ಶಿಕ್ಷಕ ಪ್ರಶಸ್ತಿ, ದಾವಣಗೆರೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಶಿಕ್ಷಕ ರತ್ನ ಪ್ರಶಸ್ತಿ, ಅನಿತಾ ಕೌಲ್ ರಾಜ್ಯ ಪ್ರಶಸ್ತಿ, ಕರ್ನಾಟಕ ಸರ್ಕಾರ ಕೊಡಮಾಡುವ ರಾಜ್ಯದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳು ದೊರೆತಿವೆ.

ಶಿಕ್ಷಕ ಅರುಣ್ ಕುಮಾರ್ ಪ್ರತಿಕ್ರಿಯಿಸಿ, "ಸುಮಾರು ಮೂರುವರೆ ಲಕ್ಷ ದೇಣಿಗೆ, ಮೂರು ಲಕ್ಷ ಮೌಲ್ಯದ ಭೌತಿಕ ವಸ್ತುಗಳು, ಎಂಟು ಲಕ್ಷ ರೂಪಾಯಿ ನರೇಗಾ ಯೋಜನೆಯ ಅಡಿಯಲ್ಲಿ ಕಾಂಪೌಂಡ್ ನಿರ್ಮಾಣ ಸೇರಿದಂತೆ ಒಟ್ಟು 14 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಶಾಲೆಗೆ ಸುಣ್ಣ-ಬಣ್ಣ, ವರ್ಲಿ ಚಿತ್ರಗಳು, ಕಂಪ್ಯೂಟರ್ ಟಿವಿ ವ್ಯವಸ್ಥೆ ಮಾಡಿದ್ದೇವೆ. ಸರ್ಕಾರ ಶಾಲೆಗಳಿಗೆ ಕೊಡುವ ಅನುದಾನ ಸಾಲದು. ಅದ್ದರಿಂದ ಜೋಳಿಗೆ ಹಾಕಿಕೊಂಡು ದೇಣಿಗೆ ಪಡೆದಿದ್ದೇವೆ. ಶಾಲೆಯಲ್ಲಿ 36 ಮಕ್ಕಳಿದ್ದಾರೆ. ಇದೀಗ ಕಾನ್ವೆಂಟ್​ಗೆ ಹೋಗುವ ಮಕ್ಕಳನ್ನೂ ಈ ಶಾಲೆಗೆ ಸೇರಿಸಲಾಗುತ್ತಿದೆ. ಕಾನ್ವೆಂಟ್ ಮಕ್ಕಳಿಗೆ ಹೋಲಿಸಿದಾಗ ನಮ್ಮ ಸರ್ಕಾರಿ ಶಾಲೆಯ ಮಕ್ಕಳು ಅವರನ್ನು ಮೀರಿಸುತ್ತಿದ್ದಾರೆ" ಎಂದು ವಿವರಿಸಿದರು.

ಅಭಿವೃದ್ಧಿಗೊಂಡ ಹಿಂಡಸಘಟ್ಟ ಕ್ಯಾಂಪ್​ ಸರ್ಕಾರಿ ಶಾಲೆ (ETV Bharat)

"ನಮ್ಮ ಮನೆಯವರಿಗೆ ರಾಜ್ಯದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ. ಹಳ್ಳಿ ಮಕ್ಕಳಿಗೆ ಒಳ್ಳೆಯದನ್ನು ಬಯಸಿ ಕಷ್ಟಪಟ್ಟು ದೇಣಿಗೆ ಪಡೆದು ಶಾಲೆಯನ್ನು ಅಭಿವೃದ್ಧಿ ಮಾಡಿದ್ದಾರೆ. ಇದಕ್ಕೆ ನಮ್ಮ ಸಹಕಾರ ಕೂಡಾ ಇದೆ‌. ಹಳ್ಳಿ ಮಕ್ಕಳಿಗೆ ವಿದ್ಯೆಯ ಧಾರೆ ಎರೆಯುತ್ತಿದ್ದಾರೆ. ನಲಿ-ಕಲಿ ಪಠ್ಯ ಕಾರ್ಯಾಗಾರದಲ್ಲಿ ಮೂರು ಬಾರಿ ಭಾಗಿಯಾಗಿದ್ದಾರೆ. ಶಾಲೆ ಅಭಿವೃದ್ಧಿ ಮಾಡುವ ಸಲುವಾಗಿ ಅವರು ಮೂರು ತಿಂಗಳು ಮನೆಗೆ ಬಂದಿಲ್ಲ" ಎಂದು ಅರುಣ್ ಕುಮಾರ್ ಪತ್ನಿ ಸಿಂಧು ತಿಳಿಸಿದರು.

ಇದನ್ನೂ ಓದಿ:ಎರಡೇ‌ ಕೊಠಡಿಯಲ್ಲಿ ಮಕ್ಕಳಿಗೆ ಪಾಠ, ಇಬ್ಬರೇ ಶಿಕ್ಷಕರು: ಕಲಿಕಾ ಪ್ರಗತಿಯಲ್ಲಿ ಈ ಸರ್ಕಾರಿ ಶಾಲೆ ಟಾಪರ್ - Yakkeygondi school

ABOUT THE AUTHOR

...view details