ಬೆಳಗಾವಿ:ನಿವೇಶನ ಹಂಚಿಕೆ ಹಗರಣಗಳಿಂದ ಕುಖ್ಯಾತಿಗೆ ಒಳಗಾಗಿರುವ ಮುಡಾಗೆ ರಾಜ್ಯ ಸರ್ಕಾರ ದೊಡ್ಡ ಸರ್ಜರಿ ಮಾಡಿದೆ. ರಾಜ್ಯ ಸರ್ಕಾರ ಇದೀಗ ಮುಡಾ ರದ್ದುಗೊಳಿಸಿ ಅದರ ಬದಲು ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಂದಾಗಿದೆ. ಆ ನಿಟ್ಟಿನಲ್ಲಿ ಶುಕ್ರವಾರ ಸಿಎಂ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮಸೂದೆ ಮಂಡನೆಗೆ ಅಸ್ತು ಎಂದಿದೆ.
ಬಿಡಿಎ ಮಾದರಿಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ:ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಮುಡಾ ನಿವೇಶನ ಹಂಚಿಕೆ ಪ್ರಕರಣ ಸಂಬಂಧ, ಮಹತ್ವದ ತೀರ್ಮಾನ ಕೈಗೊಂಡಿರುವ ರಾಜ್ಯ ಸರಕಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ವನ್ನು ಬಿಡಿಎ ಮಾದರಿಯಲ್ಲಿ ರಚಿಸಲು ತೀರ್ಮಾನಿಸಿದೆ. ಆ ಮೂಲಕ ಪ್ರಸಕ್ತ ಇರುವ ಮುಡಾ ರದ್ದಾಗಲಿದೆ. ಮುಡಾದ ಎಲ್ಲಾ ಅಧಿಕಾರ, ಬಾಧ್ಯತೆ, ಹೊಣೆಗಾರಿಕೆ, ಆಸ್ತಿಗಳು ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾವಣೆಯಾಗಲಿದೆ.
ಶುಕ್ರವಾರ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ರಾಜ್ಯ ಸರಕಾರ ಕೈಗೊಂಡಿದೆ. ಸೋಮವಾರ ಅಥವಾ ಮಂಗಳವಾರ ಸದನದಲ್ಲಿ ಮಂಡಿಸಿ ಅನುಮೋದನೆ ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಹಂಚಿಕೆಯಾಗಿರುವ ನಿವೇಶನಕ್ಕೆ ಸಂಬಂಧಿಸಿದಂತೆ ಮುಡಾ ಭಾರಿ ವಿವಾದ ಸೃಷ್ಟಿಸಿದೆ. ಸುಮಾರು 1,500 ಪರ್ಯಾಯ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವ ಆರೋಪ ಕೇಳಿ ಬಂದಿದೆ. ಇದರ ಮಧ್ಯೆ ರಾಜ್ಯ ಸರ್ಕಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಇನ್ನಷ್ಟು ಬಲ ತುಂಬುವ ಪ್ರಯತ್ನಕ್ಕೆ ಮುಂದಾಗಿದೆ.
ಸ್ವತಂತ್ರ ತೀರ್ಮಾನ ಕೈಗೊಳ್ಳಲು ಅವಕಾಶ:ಮುಡಾ ಇಷ್ಟು ದಿನ ನಗರಾಭಿವೃದ್ಧಿ ಇಲಾಖೆಯ ಸುಪರ್ದಿಯಲ್ಲಿತ್ತು. ಆದರೆ ಇನ್ನು ಮುಂದೆ ನಗರಾಭಿವೃದ್ಧಿ ಇಲಾಖೆಯಡಿ ಬಂದರೂ, ಬಿಡಿಎಯಂತೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚಿಸಿ ಸ್ವಾತಂತ್ರ್ಯ ತೀರ್ಮಾನ ಕೈಗೊಳ್ಳಲು ಅವಕಾಶ ನೀಡಲು ಮುಂದಾಗಿದೆ. ಬಿಡಿಎಯಂತೆ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯವ್ಯಾಪ್ತಿ ವಿಸ್ತರಿಸಿ ಕೆಲ ಹೆಚ್ಚುವರಿ ಅಧಿಕಾರ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮದ ಮಾದರಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತ್ಯೇಕವಾಗಿ ಹೊಸ ಅಧಿನಿಯಮ ರಚಿಸಲು ಮಸೂದೆ ಮಂಡಿಸಲು ತೀರ್ಮಾನಿಸಲಾಗಿದೆ. ಪ್ರಸ್ತುತದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ರಾಜ್ಯದಲ್ಲಿನ ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಅನ್ವಯವಾಗುವ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧಿನಿಯಮ 1987ರ ಅಡಿ ಕಾರ್ಯನಿರ್ವಹಿಸುತ್ತಿದೆ.