ಕರ್ನಾಟಕ

karnataka

ETV Bharat / state

ನಾಲ್ಕು ದಿನಗಳ ಧಾರವಾಡ ಕೃಷಿಮೇಳ ಮುಕ್ತಾಯ: ಗಮನ ಸೆಳೆದ ಜಾನುವಾರು ಮೇಳ - Dharwad Krishi Mela

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸೆ.21ರಂದು ಆರಂಭವಾಗಿದ್ದ ಕೃಷಿಮೇಳ ನಿನ್ನೆ ಸಮಾಪನಗೊಂಡಿತು.

ಧಾರವಾಡ ಕೃಷಿಮೇಳದಲ್ಲಿ ಗಮನ ಸೆಳೆದ ಜಾನುವಾರು ಮೇಳ
ಧಾರವಾಡ ಕೃಷಿಮೇಳದಲ್ಲಿ ಗಮನ ಸೆಳೆದ ಜಾನುವಾರು ಮೇಳ (ETV Bharat)

By ETV Bharat Karnataka Team

Published : Sep 25, 2024, 8:35 AM IST

ಧಾರವಾಡ:ಇಲ್ಲಿನಕೃ.ವಿ.ವಿ ಆವರಣದಲ್ಲಿ ಕಳೆದ 4 ದಿನಗಳಿಂದ ನಡೆಯುತ್ತಿದ್ದ ಕೃಷಿಮೇಳ ಮಂಗಳವಾರ ಮುಕ್ತಾಯಗೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ರೈತರು ಮೇಳದ ಸದುಪಯೋಗ ಪಡೆದುಕೊಂಡರು. ಪ್ರಮುಖವಾಗಿ, ಜಾನುವಾರುಗಳ ಮೇಳ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ವಿವಿಧ ತಳಿಯ ಜಾನುವಾರುಗಳ ಕುರಿತು ರೈತರು ಮಾಹಿತಿ ಪಡೆದರು.

ಪ್ರತೀ ವರ್ಷದಂತೆ ಈ ವರ್ಷವೂ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿ ಮೇಳ ಆಯೋಜಿಸಲಾಗಿತ್ತು. ಸೆ.21ರಿಂದ 24ರವರೆಗೆ ಮೇಳ ನಡೆದಿದೆ. ರೈತಾಪಿ ವರ್ಗದ ಗಮನ ಸೆಳೆಯಲು ಜಾನುವಾರು ಮೇಳವನ್ನು ಆಯೋಜಿಸಲಾಗಿತ್ತು. ಕುದುರೆ, ಕುರಿ, ಟಗರು, ಎಮ್ಮೆ, ಆಕಳು ಹಾಗು ಎತ್ತುಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

ದೊಡ್ಡ ಗಾತ್ರದ ಪಂಜಾಬ್​​ ರಾಜ್ಯದ ಮುರ್ರಾ ಎಮ್ಮೆ ತಳಿ ಹಾಗೂ ಗುಜರಾತ್‌ನ​ ಜಾಫ್ರಾಬಾದಿ ತಳಿಗಳು ವಿಶೇಷವಾಗಿ ಗಮನ ಸೆಳೆದವು. ಹಾವೇರಿಯ ಜನನಾಯಕ ಹಾಗೂ 300 ಕೊಲೆಗಾರ ಹೆಸರಿನ ಹೋರಿಗಳು ಕೂಡಾ ನೋಡುಗರನ್ನು ತಮ್ಮತ್ತ ಆಕರ್ಷಿಸಿದವು. ಹಾವೇರಿ ಜಿಲ್ಲೆಯಲ್ಲಿ ಅತೀ ಹೆಚ್ಚು ಜನರ ಮೆಚ್ಚುಗೆಗೆ ಪಾತ್ರವಾಗಿರುವ ಈ ಹೋರಿಗಳು ಕೃಷಿ ವಿವಿಯ ಆವರಣದಲ್ಲಿ ಕಂಡುಬಂದವು. ಅವುಗಳ ಆರ್ಭಟ ನೋಡಿದ್ದ ಜನರು ಪ್ರದರ್ಶನದಲ್ಲಿ ಅವುಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

ಹೋರಿ ಮಾಲೀಕರ ಅಭಿಪ್ರಾಯ (ETV Bharat)

"ನಮ್ಮ ಹಾವೇರಿಯಲ್ಲಿ ನಡೆಯುವ ಹೋರಿ ಹಬ್ಬ ಎಲ್ಲೆಡೆ ಪರಿಚಯವಾಗಲಿ ಹಾಗೂ ಎಲ್ಲೆಡೆ ನಡೆಯಲಿ ಎಂಬುದು ನಮ್ಮ ಆಶಯ. ನಮ್ಮ ಹೋರಿಯನ್ನು ಕೃಷಿ ವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಮೇಳದ ಉಸ್ತುವಾರಿಗಳು ಪ್ರದರ್ಶನಕ್ಕಾಗಿ ಕರೆಸಿಕೊಂಡರು. ಈ ಭಾಗದವರಿಗೆ ಹೋರಿ ಹಬ್ಬ ತಿಳಿದಿಲ್ಲ. ಹಾಗಾಗಿ ಉತ್ತರ ಕರ್ನಾಟಕದ ಹೋರಿ ಹಬ್ಬದ ಸೊಗಡು ಮತ್ತು ಸಂಪ್ರದಾಯ ಇನ್ನೂ ಬೆಳೆಯಲಿ ಎಂದು ಜಾನುವಾರು ಮೇಳಕ್ಕೆ ಹೋರಿಗಳನ್ನು ತೆಗೆದುಕೊಂಡು ಬಂದಿದ್ದೇವೆ. ನನ್ನ ಮನೆಯಲ್ಲಿ ಇನ್ನೂ ಹೋರಿಗಳಿವೆ. ಮೇಳಕ್ಕೆ ತಂದಿರುವ ಹೋರಿ ಹಾವೇರಿ ಜನನಾಯಕ. ಮನೆಯಲ್ಲಿ ಸಾಹುಕಾರ, ವೈಭವ, ಒಡ್ಡಮ್ಮ ಎಂಬ ಹೆಸರಿನ ಹೋರಿಗಳಿವೆ" ಎಂದು ಹೋರಿ ಮಾಲೀಕ ಪ್ರಜ್ವಲ್​ ತಿಳಿಸಿದರು.

ಇದನ್ನೂ ಓದಿ:ಧಾರವಾಡ ಕೃಷಿಮೇಳ: ಕೀಟಗಳಿಂದ ತಯಾರಿಸಿದ ಆಹಾರ ಪ್ರದರ್ಶನ - Dharwad Krishi Mela

ABOUT THE AUTHOR

...view details