ದಾವಣಗೆರೆ:ಅನಧಿಕೃತವಾಗಿ ವಾಹನಗಳಲ್ಲಿ ಎಲ್ಪಿಜಿ ಸಿಲಿಂಡರ್ಗೆ ಗ್ಯಾಸ್ ತುಂಬಿಸುವ ವೇಳೆ ಸೋರಿಕೆಯಾಗಿ ವಾಹನ ಸಮೇತ ಸ್ಫೋಟ ಸಂಭವಿಸಿರುವ ಘಟನೆ ಜಿಲ್ಲೆ ದೊಡ್ಡಬೂದಿಹಾಳ್ ಬಳಿ ಸೋಮವಾರ ನಡೆದಿದೆ.
ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಆದರೆ 2 ಸಲ ಭಾರಿ ಶಬ್ದದೊಂದಿಗೆ ಸ್ಫೋಟ ಸಂಭವಿಸಿದ ಕಾರಣ ಅಕ್ಕಪಕ್ಕದ ಜನರು ಭಯಭೀತರಾಗಿ ಓಡಿಹೋಗಿದ್ದಾರೆ. ಘಟನೆಯ ದೃಶ್ಯ ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಇಲ್ಲಿಯ ಜನನಿಬಿಡ ಪ್ರದೇಶದಲ್ಲಿ ಹಲವು ದಿನಗಳಿಂದ ಅನಧಿಕೃತವಾಗಿ ಎಲ್ಪಿಜಿ ಗ್ಯಾಸ್ ತುಂಬುತ್ತಿದ್ದರು. ಹೀಗೇ ಸೋಮವಾರ ಓಮಿನಿ ಕಾರು ಹಾಗೂ ರಿಕ್ಷಾದಲ್ಲಿ ಸಿಲಿಂಡರ್ಗೆ ಗ್ಯಾಸ್ ತುಂಬಿಸುವಾಗ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿದೆ. ಗಾಂಧಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಘಟನೆಯ ವಿಚಾರ ತಿಳಿದು ಗಾಂಧಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಎಫ್ಐಆರ್ ದಾಖಲಿಸಿದ್ದಾರೆ. ಈ ಕುರಿತು ಗಾಂಧಿನಗರ ಪೊಲೀಸ್ ಠಾಣೆಯ ಪಿಎಸ್ಐ ಆಂಜೀನಪ್ಪ ಪ್ರತಿಕ್ರಿಯೆ ನೀಡಿದ್ದು , "ಘಟನೆ ದಾವಣಗೆರೆ ನಗರದ ದೊಡ್ಡಬೂದಿಹಾಳ್ ಬಳಿ ನಡೆದಿದೆ. ಅಕ್ರಮವಾಗಿ ಗ್ಯಾಸ್ ಫಿಲ್ಲಿಂಗ್ ಮಾಡಲಾಗುತ್ತಿತ್ತು, ಈ ವೇಳೆ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸಮೇತ ಓಮಿನಿ ಮತ್ತು ಆಟೋ ಎರಡು ಬಾರಿ ಬ್ಲಾಸ್ಟ್ ಆಗಿವೆ. ಆದರೆ ಗ್ಯಾಸ್ ಸಿಲಿಂಡರ್ ಫಿಲ್ಲಿಂಗ್ ಅಡ್ಡೆ ಯಾರಿಗೆ ಸೇರಿದ್ದು ಎಂದು ಮಾತ್ರ ತಿಳಿದು ಬಂದಿಲ್ಲ. ಎಫ್ಐಆರ್ ದಾಖಲು ಮಾಡಿದ್ದೇವೆ, ತನಿಖೆ ಬಳಿಕ ಎಲ್ಲಾ ವಿಚಾರ ತಿಳಿದುಬರಲಿದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಅನುಮತಿ ಇಲ್ಲದ ವಾಹನದಲ್ಲಿ75 ಲಕ್ಷ ರೂ ಹಣ ಸಾಗಣೆ: ಮೋಟೆಬೆನ್ನೂರು ಚೆಕ್ಪೋಸ್ಟ್ನಲ್ಲಿ ವಶ - Seized 75 lakh money