ಶಿವಮೊಗ್ಗ: ಹಿಂದೆ ಸರ್ಕಾರಿ ಉದ್ಯೋಗ ಒದಗಿಸುವ ಕೇಂದ್ರವಾಗಿದ್ದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಈಗ ಖಾಸಗಿ ವಲಯಕ್ಕೆ ಉದ್ಯೋಗಿಗಳನ್ನು ಒದಗಿಸುವ ಕೇಂದ್ರವಾಗಿದೆ.
ಒಂದು ಕಾಲದಲ್ಲಿ ಸರ್ಕಾರಿ ಉದ್ಯೋಗ ಸಿಗಬೇಕಾದರೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಣಿ ಕಡ್ಡಾಯವಾಗಿತ್ತು. ಆದರೆ ಸರ್ಕಾರಗಳ ಬದಲಾದ ಧೋರಣೆಯಿಂದ ಉದ್ಯೋಗ ವಿನಿಮಯ ಕೇಂದ್ರಗಳು ಇಂದು ಖಾಸಗಿ ವಲಯಕ್ಕೆ ಉದ್ಯೋಗಾಕಾಂಕ್ಷಿಗಳನ್ನು ಒದಗಿಸುವ ಕೇಂದ್ರಗಳಾಗಿ ಕೆಲಸ ಮಾಡುತ್ತಿವೆ. ಖಾಸಗಿ ವಲಯಕ್ಕೆ ಬೇಕಾಗ ಉದ್ಯೋಗಿಗಳನ್ನು ಹಾಗೂ ಕಾರ್ಪೋರೇಟ್ ವಲಯಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನು ಒದಗಿಸುವ ಸೇತುವೆಯಾಗಿವೆ.
ಅಂದು ಸರ್ಕಾರಿ ಉದ್ಯೋಗಕ್ಕೆ ಆದ್ಯತೆ, ಇಂದು ಖಾಸಗಿ ಕೆಲಸದ ಮಾಹಿತಿಯೂ ಸಿಗುತ್ತೆ; ಉದ್ಯೋಗಾಕಾಂಕ್ಷಿಗಳಿಗೆ ಸಲಹೆ (ETV Bharat) ಸ್ವಾತಂತ್ರ್ಯ ನಂತರ ಪ್ರಾರಂಭವಾದ ಕೇಂದ್ರ:ಉದ್ಯೋಗ ವಿನಿಮಯ ಕೇಂದ್ರವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಬೇಕಾದ ಉದ್ಯೋಗಿಗಳಿಗಾಗಿ ಸ್ವಾತಂತ್ರ್ಯ ನಂತರದಲ್ಲಿ ಪ್ರಾರಂಭವಾಗಿದೆ. ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಮೊದಲು ತಮ್ಮ ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಡಿಪ್ಲೊಮಾ ಹೀಗೆ ತಾವು ಯಾವ ವಿದ್ಯಾರ್ಹತೆಯನ್ನು ಹೊಂದಿರುತ್ತಾರೋ ಅವರು ಉದ್ಯೋಗ ವಿನಿಮಯ ಕಚೇರಿಗೆ ಆಗಮಿಸಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿತ್ತು. ಸರ್ಕಾರದ ಯಾವ ಇಲಾಖೆಯಿಂದ ಉದ್ಯೋಗಕ್ಕೆ ಅರ್ಜಿ ಆಹ್ವಾನ ಮಾಡುತ್ತಾರೋ ಆಗ ಇಲಾಖೆಯೇ ನಿರುದ್ಯೋಗಿ ಯುವಕರಿಗೆ ಪತ್ರ ಕಳುಹಿಸಿ, ಇಂತಹ ಇಲಾಖೆಯಲ್ಲಿ ಉದ್ಯೋಗ ಇದೆ ಎಂದು ತಿಳಿಸುತ್ತಿತ್ತು.
ಸ್ಪರ್ಧಾತ್ಮಕ ಪರೀಕ್ಷೆಗಳಿಂದ ನೇರ ನೇಮಕಾತಿ:ಕಾಲ ಬದಲಾದಂತೆ ಸರ್ಕಾರಗಳು ಉದ್ಯೋಗಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದವು. ಇದರಿಂದ ಎಲ್ಲಾ ನೇಮಕಾತಿಯನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದೆ. ಮೊದಲಿನಂತೆ ಯಾರು ಸಹ ನೋಂದಣಿಗೆ ಆಗಮಿಸುವುದಿಲ್ಲ. ಇದರಿಂದ ಈ ಇಲಾಖೆಗೆ ಈಗ ಹೆಚ್ಚಿನ ಕೆಲಸವಿಲ್ಲ. ಈ ಮೂಲಕ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗಿದೆ. ಹಾಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಕೊನೆಯ ಗ್ಯಾರಂಟಿಯಾದ ಯುವನಿಧಿ ಕಾರ್ಯಕ್ರಮ ಇದೇ ಇಲಾಖೆಯ ಮೂಲಕ ನಡೆಯುತ್ತಿದೆ.
ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವು ಸಾಗರ ರಸ್ತೆ ಪಕ್ಕದ ಪಂಪ ನಗರದಲ್ಲಿ ಖಾಸಗಿ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತದೆ. ಈ ಕುರಿತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಅಧೀಕ್ಷಕ ಕಲಂದರ್ ಖಾನ್ ಅವರು ತಮ್ಮ ಕಚೇರಿಯು ನಿರ್ವಹಿಸುತ್ತಿರುವುದನ್ನು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ. "ನಮ್ಮ ಉದ್ಯೋಗ ಇಲಾಖೆಯಿಂದ ಹಿಂದೆ ಸರ್ಕಾರಿ ನೌಕರಿಗೆ ನೇಮಕಾತಿ ಆಗುವ ಅವಕಾಶಗಳಿದ್ದವು. ಕಾಲ ಬದಲಾದಂತೆ, ಸರ್ಕಾರವು ಸರ್ಕಾರಿ ಉದ್ಯೋಗಕ್ಕೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಪರಿಚಯಿಸಿತು. ಇದರಿಂದ ಇಲಾಖೆಗೆ ಕೆಲಸ ಕಡಿಮೆ ಆಗುತ್ತಾ ಬಂದಿತು. ನಂತರ ಇಲಾಖೆಯನ್ನು ಉಳಿಸಿಕೊಳ್ಳಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸರ್ಕಾರಿ ಉದ್ಯೋಗ ಅಲ್ಲದೆ ಖಾಸಗಿ ವಲಯಕ್ಕೆ ಬೇಕಾದ ನಿರುದ್ಯೋಗಿಗಳನ್ನು ಹುಡುಕಿಕೊಡುವ ಕೆಲಸ ಮಾಡುತ್ತಿದೆ. ಉದ್ಯೋಗಕಾಂಕ್ಷಿಗಳಿಗೆ ಸೂಕ್ತವಾದ ಉದ್ಯೋಗ ಕೊಡುವುದು, ಹಾಗೇನೆ ಕಾರ್ಪೋರೇಟ್ ವಲಯಕ್ಕೆ ಅರ್ಹರಾದ ಮಾನವ ಸಂಪನ್ಮೂಲವನ್ನು ಒದಗಿಸುವ ಕೆಲಸ ಮಾಡುತ್ತಿದೆ. ಉದ್ಯೋಗಕಾಂಕ್ಷಿಗಳ ಹಾಗೂ ಉದ್ಯೋಗ ನೀಡುವವರ ನಡುವಿನ ಕೊಂಡಿಯಾಗಿ ಕೆಲಸವನ್ನು ಮಾಡಲಾಗುತ್ತಿದೆ" ಎಂದು ಮಾಹಿತಿ ನೀಡಿದರು.
"ಇದರಿಂದ ಆಗಾಗ್ಗೆ ಉದ್ಯೋಗ ಮೇಳದ ಆಯೋಜನೆ ಮಾಡುವಂತದ್ದು, ವಾಕಿನ್ಸ್ ಹಾಗೂ ಬೃಹತ್ ಉದ್ಯೋಗ ಮೇಳ ಮಾಡುವಂತದ್ದು, ಅಲ್ಲಿ ಖಾಸಗಿ ವಲಯದಲ್ಲಿನ ಉದ್ಯೋಗವನ್ನು ಉದ್ಯೋಗಕಾಂಕ್ಷಿಗಳಿಗೆ ಒದಗಿಸುವಂತಹ ಕೆಲಸ ಮಾಡಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಉದ್ಯೋಗ ಮೇಳಗಳ ಮೂಲಕ ಸುಮಾರು 5 ಸಾವಿರ ಜನರಿಗೆ ಉದ್ಯೋಗ ಒದಗಿಸುವಂತಹ ಕೆಲಸ ಮಾಡಲಾಗುತ್ತಿದೆ. ಐಟಿಐ, ಡಿಪ್ಲೊಮೊ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೃತ್ತಿ(ಅಪ್ರೆಂಟಿಸ್‌ಶಿಪ್) ಮಾಡಿಕೊಡಲಾಗುತ್ತಿದೆ. ಖಾಸಗಿ ಹಾಗೂ ಸರ್ಕಾರಿ ಸೇವೆಯಲ್ಲಿನ ವಲಯಕ್ಕೆ ಈ ಅಪ್ರೆಂಟಿಸ್ಶಿಪ್ಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಹೆಚ್ಎಎಲ್ ಅವರು ಈಗ 1 ಸಾವಿರ ಹುದ್ದೆ ಅಪ್ರೆಂಟಿಸ್ಶಿಪ್ಗೆ ಕರೆದಿದ್ದಾರೆ. ಇದು ಸಾರ್ವಜನಿಕರಿಗೆ ತಲುಪಬೇಕೆಂಬ ಉದ್ದೇಶದಿಂದ ಮಾಹಿತಿ ನೀಡಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಯುವ ನಿಧಿಗೆ ನೋಂದಣಿಯಾದವರೆಷ್ಟು?:ರಾಜ್ಯ ಸರ್ಕಾರದ ಯುವನಿಧಿ ಗ್ಯಾರಂಟಿ ಯೋಜನೆಯನ್ನು ಉದ್ಯೋಗ ವಿನಿಮಯ ಕೇಂದ್ರದ ಮೂಲಕ ನಡೆಸಲಾಗುತ್ತಿದೆ. ಡಿಪ್ಲೊಮೊ, ಪದವಿ ಪಡೆದವರಿಗೆ ನಿರುದ್ಯೋಗ ಭತ್ಯೆ ನೀಡುವಂತಹ ಕೆಲಸವನ್ನು ಮಾಡಲಾಗುತ್ತಿದೆ. ಯುವ ನಿಧಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 2,036 ನಿರುದ್ಯೋಗಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಕಾರ್ಯಾಗಾರ:ಗ್ರಾಮಾಂತರ ಮಟ್ಟದಲ್ಲಿ ಕಾಲೇಜು, ಹೈಸ್ಕೂಲ್ ಮಟ್ಟದಲ್ಲಿ ಉದ್ಯೋಗ ಮಾರ್ಗದರ್ಶನದಲ್ಲಿ ಒದಗಿಸುವ ಕೆಲಸವನ್ನು ಮಾಡಲಾಗುತ್ತಿದೆ. ಉನ್ನತ ಹುದ್ದೆಗೆ ಯಾವ ಶಿಕ್ಷಣವನ್ನು ಹಾಗೂ ಕೌಶಲ್ಯವನ್ನು ಆಯ್ಕೆ ಮಾಡಿಕೊಂಡರೆ ಒಳ್ಳೆಯದು ಎಂಬುದರ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ಕರ್ನಾಟಕ ರಾಜ್ಯ ಸರ್ಕಾರದ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ಕೆಳಗೆ ಕೆಲಸ ನಿರ್ವಹಿಸುತ್ತಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಸಿನಿಮಾ, ಸಾಂಸ್ಕೃತಿಕ ಕಾರ್ಯಕರ್ತರ ಕಾಯ್ದೆ ಜಾರಿ: ಯಾರಿಗೆ ಅನ್ವಯ, ಪ್ರಯೋಜನಗಳೇನು? - Cinema And Cultural Workers Act