ಶಿವಮೊಗ್ಗ:ಜಿಲ್ಲೆ 3ನೇ ಹಂತದಲ್ಲಿ ಲೋಕಾಸಭಾ ಚುನಾವಣೆಗೆ ಅಣಿಯಾಗಿದೆ. ಮೇ 7 ರಂದು ಶಿವಮೊಗ್ಗದಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 12 ರಿಂದ 19 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಏಪ್ರಿಲ್ 20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 22 ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
8 ವಿಧಾನಸಭಾ ಕ್ಷೇತ್ರಗಳ ವಿವರ:ಶಿವಮೊಗ್ಗ, ಭದ್ರಾವತಿ, ಶಿವಮೊಗ್ಗ ಗ್ರಾಮಾಂತರ, ತೀರ್ಥಹಳ್ಳಿ, ಶಿಕಾರಿಪುರ, ಸಾಗರ, ಹೊಸನಗರ ಹಾಗೂ ಬೈಂದೂರು ಕ್ಷೇತ್ರಗಳನ್ನು ಒಳಗೊಂಡಿದೆ.
ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು: ಕ್ಷೇತ್ರದಲ್ಲಿ 8,52,107 ಪುರುಷ, 8,77,761 ಮಹಿಳೆಯರು ಸೇರಿದಂತೆ ಒಟ್ಟು 17,29,901 ಮತದಾರರಿದ್ದಾರೆ. 25,654 ಮಹಿಳಾ ಮತದಾರರು ಹೆಚ್ಚಿದ್ದಾರೆ. 29,788 ನವ ಮತದಾರರು ಈ ಭಾರಿ ಸೇರ್ಪಡೆಗೊಂಡಿದ್ದಾರೆ. 85 ವರ್ಷ ಮೇಲ್ಪಟ್ಟ ಮತದಾರರು 15,315 ಹಾಗೂ PWD ಮತದಾರರು- 18,888 ಇದ್ದಾರೆ. ಜಿಲ್ಲೆಯಲ್ಲಿ ಹೊಸ ಮತದಾರರು, ಮೊದಲ ಸಲ ಮತ ಹಾಕುವವರ ಸಂಖ್ಯೆ 29,788 ಇದೆ. 2039 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಕ್ಷೇತ್ರಕ್ಕೆ 3217 ಬ್ಯಾಲೆಟ್ ಯೂನಿಟ್, 2215 ಕಂಟ್ರೋಲ್ ಯೂನಿಟ್ ಹಾಗೂ 2340 ವಿವಿ ಪ್ಯಾಟ್ ಬಳಕೆ ಮಾಡಲಾಗುತ್ತಿದೆ. 8 ಸಾವಿರಕ್ಕೂ ಅಧಿಕ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದರು.