ಕರ್ನಾಟಕ

karnataka

ETV Bharat / state

ಕಂಬಿ ಹಿಂದೆ ಕಂಪ್ಯೂಟರ್ ತರಬೇತಿ ಪಡೆದು ಸರ್ಟಿಫಿಕೇಟ್ ಪಡೆದ ಜೈಲು ಹಕ್ಕಿಗಳು - convicts got certificate - CONVICTS GOT CERTIFICATE

ಚಾಮರಾಜನಗರದ ಜಿಲ್ಲಾ ಕಾರಾಗೃಹದಲ್ಲಿರುವ ಅಪರಾಧಿಗಳು ಜೈಲಿನಲ್ಲೇ ಕಂಪ್ಯೂಟರ್​ ಶಿಕ್ಷಣ ಪಡೆದು ಜಿಲ್ಲಾಧಿಕಾರಿಯಿಂದ ಪ್ರಮಾಣಪತ್ರ ಪಡೆದಿದ್ದಾರೆ.

ಕಾರಾಗೃಹದಲ್ಲಿ ಕಂಪ್ಯೂಟರ್​ ಕೋರ್ಸ್​ ಪ್ರಮಾಣ ಪತ್ರ ವಿತರಣೆ
ಕಾರಾಗೃಹದಲ್ಲಿ ಕಂಪ್ಯೂಟರ್​ ಕೋರ್ಸ್​ ಪ್ರಮಾಣ ಪತ್ರ ವಿತರಣೆ (ETV Bharat)

By ETV Bharat Karnataka Team

Published : Jun 21, 2024, 12:21 PM IST

ಚಾಮರಾಜನಗರ:ಕಾರಾಗೃಹ ಬಂಧಿಗಳಿಗೆ ಕಾರಾಗೃಹದಲ್ಲಿಯೇ ಕಂಪ್ಯೂಟರ್ ಶಿಕ್ಷಣ ತರಬೇತಿ ನೀಡುವ ರಾಜ್ಯದಲ್ಲಿಯೇ ಮೊದಲು ಎನಿಸಿರುವ ವಿನೂತನ ಅರ್ಥಪೂರ್ಣ ಕಾರ್ಯಕ್ರಮ ಚಾಮರಾಜನಗರ ಜಿಲ್ಲೆಯಲ್ಲಿ ಯಶಸ್ಸು ಕಂಡಿದೆ.

ಸರ್ಟಿಫಿಕೇಟ್ ಪಡೆದ ಅಪರಾಧಿಗಳು (ETV Bharat)

ಚಾಮರಾಜನಗರದ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಬಂಧಿಗಳಿಗೆ ಅಲ್ಲಿಯೇ ಕಂಪ್ಯೂಟರ್ ತರಬೇತಿ ನೀಡಿ ಅವರು ಬಿಡುಗಡೆಗೊಂಡ ಬಳಿಕ ಬದುಕು ಕಟ್ಟಿಕೊಳ್ಳಲು ನೆರವಾಗಲಿ ಎಂಬ ಉದ್ದೇಶದಿಂದ ಕಂಪ್ಯೂಟರ್ ತರಬೇತಿ ನೀಡಲು ಯೋಚಿಸಿ ಮೈಸೂರಿನ ಇನ್ಫೋಸಿಸ್​ ರೋಟರಿ ಪಂಚಶೀಲ ಸಂಸ್ಥೆಗಳೊಂದಿಗೆ ಸಿಎಸ್‍ಆರ್ ನೆರವಿನೊಂದಿಗೆ ಕಾರಾಗೃಹದಲ್ಲಿಯೇ ಕಂಪ್ಯೂಟರ್ ತರಬೇತಿಗೆ ಈ ಹಿಂದೆ ಚಾಲನೆ ಕೊಡಲಾಗಿತ್ತು.

ಕಾರಾಗೃಹದಲ್ಲಿ ಸುಸಜ್ಜಿತ ಕೊಠಡಿಯಲ್ಲಿ 10 ಕಂಪ್ಯೂಟರ್ ಮತ್ತು ಪ್ರಿಂಟರ್​ಗಳೊಂದಿಗೆ ತರಬೇತಿ ಆರಂಭವಾಗಿತ್ತು. ತರಬೇತಿಗಾಗಿ 38 ವಿಚಾರಣಾಧೀನ ಬಂಧಿಗಳು ನೋಂದಣಿಯಾಗಿದ್ದರು. ಇವರಲ್ಲಿ 7 ಬಂಧಿಗಳು ಕಾರಾಗೃಹದಲ್ಲಿಯೇ ಕಂಪ್ಯೂಟರ್ ವಿವಿಧ ಕೋರ್ಸುಗಳನ್ನು ಕಲಿತು ಯಶಸ್ವಿಯಾಗಿ ಪೂರ್ಣಗೊಳಿಸಿ ಜಿಲ್ಲಾಧಿಕಾರಿ ಶಿಲ್ಪಾನಾಗ್​​ ಅವರಿಂದ ಇನ್ಫೋಸಿಸ್​ ಸಂಸ್ಥೆಯ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ.

ಕಾರಾಗೃಹ ಕಟ್ಟಡದಲ್ಲಿಯೇ ಬಂಧಿಗಳಿಗೆ ಕಂಪ್ಯೂಟರ್​​ ತರಬೇತಿ ಪಡೆಯಲು ಇನ್ಫೋಸಿಸ್ ಸಹಕಾರದೊಂದಿಗೆ ಐಐಎಚ್‍ಟಿ ಅಕಾಡಮಿ ಬೋಧಕರನ್ನು ನಿಯೋಜಿಸಲಾಗಿದೆ. ಬಂಧಿಗಳಿಗೆ ಮೈಕ್ರೋಸಾಫ್ಟ್​​ ಆಫೀಸ್, ಕಂಪ್ಯೂಟರ್ ಫಂಡಮೆಂಟಲ್, ಸಾಫ್ಟ್ ಸ್ಕಿಲ್ ಸೇರಿದಂತೆ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ. ಮೊದಲನೇ ತಂಡದಲ್ಲಿ 38 ಬಂಧಿಗಳು ಕಂಪ್ಯೂಟರ್ ಕೋರ್ಸುಗಳನ್ನು ಕಲಿಯಲು ಆರಂಭಿಸಿದರು. ಇವರಲ್ಲಿ ಯಶಸ್ವಿಯಾಗಿ ಕೋರ್ಸ್‍ಗಳನ್ನು ಪೂರ್ಣಗೊಳಿಸಿದ 7 ಮಂದಿಗೆ ಇನ್ಫೋಸಿಸ್ ಸಂಸ್ಥೆಯಿಂದ ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ವಿತರಿಸಿದ್ದಾರೆ.

13 ಬಂಧಿಗಳು ಸಕ್ರಿಯವಾಗಿ ಕೋರ್ಸುಗಳಲ್ಲಿ ಪಾಲ್ಗೊಂಡು ವಿಶೇಷ ಗಮನಸೆಳೆದಿದ್ದು, ಇವರ ಕಲಿಕೆ ಮುಂದುವರೆದಿದೆ. ಆಸಕ್ತ ಎಲ್ಲ ಬಂಧಿಗಳಿಗೆ ಕಂಪ್ಯೂಟರ್ ತರಬೇತಿ ನೀಡುವ ಕಾರ್ಯ ಕಾರಾಗೃಹದಲ್ಲಿ ಮುಂದುವರೆಸಲಾಗಿದ್ದು, ನಿರಂತರವಾಗಿ ನಡೆಯಲಿದೆ.

ಇನ್ನು, ಪ್ರಮಾಣ ಪತ್ರ ವಿತರಿಸಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, "ದೇಶ ಕಟ್ಟುವ ಮಹತ್ವದ ಕಾರ್ಯದಲ್ಲಿ ಪ್ರತಿಯೊಬ್ಬರ ಕೊಡುಗೆ ಪಾತ್ರ ಅಮೂಲ್ಯವಾಗಿದೆ. ವಿಚಾರಣಾಧೀನ ಬಂಧಿಗಳು ಅವರು ಬಿಡುಗಡೆಗೊಂಡ ಬಳಿಕ ಬದುಕು ಹಸನಾಗಿಸಿಕೊಳ್ಳಲು ಅವರ ಭವಿಷ್ಯದ ಹಿತದೃಷ್ಠಿಯಿಂದ ಉದ್ಯೋಗ ಕೈಗೊಳ್ಳಲು ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಕಂಪ್ಯೂಟರ್ ತರಬೇತಿ ಆರಂಭಿಸಲಾಯಿತು. ಇಂದು ನಮ್ಮ ಆಶಯ ಉದ್ದೇಶ ಫಲಪ್ರದವಾಗಿದೆ. ಈ ಮಹತ್ಕಾರ್ಯಕ್ಕೆ ಇನ್ಫೋಸಿಸ್, ಐಐಎಚ್‍ಟಿ ಇನ್ನಿತರ ಸಂಸ್ಥೆಗಳು ಸಿಎಸ್‍ಆರ್ ನೆರವು ನೀಡಿದ್ದು ಇದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುವುದಾಗಿ" ಹೇಳಿದರು.

"ಸಮಾಜದಲ್ಲಿ ಯಾರೂ ಮೇಲೂ ಅಲ್ಲ, ಕೀಳೂ ಅಲ್ಲ. ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು ಲಭಿಸಬೇಕು. ಬಂಧಿಗಳು ಇಲ್ಲಿಂದ ಬಿಡುಗಡೆಗೊಂಡ ಬಳಿಕ ಆತ್ಮವಿಶ್ವಾಸದಿಂದ ಉತ್ತಮ ಜೀವನ ಮಾಡಬೇಕು. ಕುಟುಂಬ, ಸಮಾಜಕ್ಕೆ ಆದರ್ಶ ಪ್ರಾಯವಾಗಿ ಕೊಡುಗೆ ನೀಡಬೇಕು. ಜೀವನೋಪಾಯಕ್ಕೆ ಪೂರಕವಾದ ಸ್ವಂತ ಉದ್ಯೋಗ ಮಾಡಬೇಕು ಎಂಬ ಸದಾಶಯ ನನ್ನದಾಗಿದೆ. ತರಬೇತಿ ಪಡೆದವರು ಸ್ವಂತ ಸೈಬರ್ ಕೇಂದ್ರ, ಸೇವಾ ಕೇಂದ್ರಗಳನ್ನು ತೆರೆದು ಇತರರಿಗೆ ಮಾದರಿಯಾಗಬಹುದು" ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಕಾರಾಗೃಹದ ಅಧೀಕ್ಷಕರಾದ ಎನ್.ಎಸ್. ಶಿವಕುಮಾರ್ ಇತರರು ಇದ್ದರು.

ಇದನ್ನೂ ಓದಿ:ಅಂಗನವಾಡಿ ಕೇಂದ್ರಗಳ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ಕ್ರಮ: ಸಚಿವರ ಭರವಸೆಯಿಂದ ಮುಷ್ಕರ ಹಿಂಪಡೆದ ಕಾರ್ಯಕರ್ತೆಯರು - Anganwadi Workers protest

ABOUT THE AUTHOR

...view details