ಕರ್ನಾಟಕ

karnataka

ETV Bharat / state

ಹಾವೇರಿ: ಉಪಚುನಾವಣೆ ಮುಗಿದ ಮರುದಿನವೇ ಕಾಲುವೆಯಲ್ಲಿ ಬ್ಯಾಲೆಟ್ ಬಾಕ್ಸ್ ಪತ್ತೆ - BALLOT BOX FOUND

ಹಾವೇರಿ ಜಿಲ್ಲೆಯ ಸಮೀಪದ ಯತ್ತಿನಹಳ್ಳಿ ಗ್ರಾಮದ ಬಳಿಯ ಕಾಲುವೆಯೊಂದರಲ್ಲಿ ನಿರುಪಯುಕ್ತ ಬ್ಯಾಲೆಟ್​ ಬಾಕ್ಸ್​ಗಳು ಪತ್ತೆಯಾಗಿವೆ.

Ballot box
ಬ್ಯಾಲೆಟ್ ಬಾಕ್ಸ್ (ETV Bharat)

By ETV Bharat Karnataka Team

Published : Nov 14, 2024, 6:13 PM IST

ಹಾವೇರಿ :ಜಿಲ್ಲೆಯ ಸಮೀಪದ ಯತ್ತಿ‌ನಹಳ್ಳಿ ಗ್ರಾಮದ ಬಳಿಯ ಲೇಔಟ್​ವೊಂದರ ಕಾಲುವೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಗಳಿಗೆ ಬಳಸಲಾಗುತ್ತಿದ್ದ ನಿರುಪಯುಕ್ತ 10 ಬ್ಯಾಲೆಟ್ ಬಾಕ್ಸ್​ಗಳು ಪತ್ತೆಯಾಗಿವೆ.

ನಗರದ ಎಪಿಎಂಸಿಯಲ್ಲಿರುವ ಒಂದು ಹಳೆ ಗೋದಾಮಿನಲ್ಲಿ ಇಡಲಾಗಿದ್ದ ಹಳೆಯ ನಿರುಪಯುಕ್ತ ಬ್ಯಾಲೆಟ್ ಬಾಕ್ಸ್​ಗಳು ಇವಾಗಿವೆ. ಕಂದಾಯ ಇಲಾಖೆಯವರು ಹಲವು ವರ್ಷಗಳ ಹಿಂದೆ ಇಲ್ಲಿಗೆ ಬ್ಯಾಲೆಟ್ ಬಾಕ್ಸ್​ಗಳನ್ನು ತಂದಿಟ್ಟಿದ್ದಾರೆ. ಕಿಡಿಗೇಡಿಗಳು ಬಾಕ್ಸ್​ಗಳನ್ನು ಮಾರುವ ಉದ್ದೇಶದಿಂದ ಕಳ್ಳತನ ಮಾಡಿಕೊಂಡು ಹೋಗುವಾಗ ಸಾಗಿಸಲಾಗದೇ ಲೇಔಟ್​ನ ಕಾಲುವೆಯಲ್ಲಿ ಬಿಟ್ಟುಹೋಗಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿ ಡಾ. ವಿಜಯ ಮಹಂತೇಶ ಅವರು ಮಾತನಾಡಿದ್ದಾರೆ (ETV Bharat)

ಈ ಮಧ್ಯೆ ಬಳಕೆಯಲ್ಲಿ ಇಲ್ಲದ ಬ್ಯಾಲೆಟ್ ಬಾಕ್ಸ್​ಗಳನ್ನು ಇಟ್ಟಿದ್ದ ಗೋದಾಮಿಗೆ ಪೊಲೀಸರು, ಹಾವೇರಿ ತಹಶೀಲ್ದಾರ್ ಶರಣಮ್ಮ ಹಾಗೂ ಅಧಿಕಾರಿಗಳು ಭೇಟಿ ನೀಡಿದರು. ಕಂದಾಯ ಇಲಾಖೆಯವರಿಂದ ಪೊಲೀಸ್ ಇಲಾಖೆಗೆ ದೂರು ನೀಡಲಾಗಿತ್ತು. ನಿನ್ನೆ ಶಿಗ್ಗಾಂವಿ ಉಪಚುನಾವಣೆ ಮತದಾನ ಮುಗಿದ ಬೆನ್ನಲ್ಲೇ ಬಳಕೆಯಲ್ಲಿದ್ದ ಬ್ಯಾಲೆಟ್ ಬಾಕ್ಸ್​ಗಳು ಪತ್ತೆಯಾದ ಹಿನ್ನೆಲೆ ಯತ್ತಿನಹಳ್ಳಿ ಗ್ರಾಮಸ್ಥರು ಆತಂಕಗೊಂಡಿದ್ದರು.

ಉಪಚುನಾವಣೆಯಲ್ಲಿ ಇವಿಎಂ ಬಳಸಲಾಗಿದೆ. ಲೇಔಟ್​ನಲ್ಲಿ ಪತ್ತೆಯಾದ ಬ್ಯಾಲೆಟ್ ಬಾಕ್ಸ್​ಗಳು ನಿರುಪಯುಕ್ತವಾಗಿದ್ದವು. ಹಲವು ವರ್ಷಗಳಿಂದ ಬಳಕೆಯಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ಡಾ. ವಿಜಯ ಮಹಂತೇಶ ಅವರು ಮಾತನಾಡಿ, ''ಮಾಧ್ಯಮದಲ್ಲಿ ಮಾಡಿರುವ ವರದಿಗೆ ಸಂಬಂಧಿಸಿದಂತೆ ಪ್ರಾಥಮಿಕ ವರದಿಯನ್ನ ತೆಗೆದುಕೊಂಡಿದ್ದೇನೆ. 2020ರಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಾದ ನಂತರ ತಹಶೀಲ್ದಾರ್ ಕಚೇರಿಯಲ್ಲಿ ಸ್ಥಳದ ಕೊರತೆ ಇದ್ದಿದ್ದರಿಂದ ಬ್ಯಾಲೆಟ್ ಬಾಕ್ಸ್​ಗಳನ್ನ ನಾವು ಎಪಿಎಂಸಿ ಗೋಡಾನ್​​ನಲ್ಲಿ ಇಟ್ಟಿದ್ದೆವು. 8 ತಿಂಗಳ ಹಿಂದೆ ಅಲ್ಲಿ ಬೆಂಕಿ ಅವಘಡವೂ ಆಗಿತ್ತು ಎಂಬುದನ್ನ ನಾವು ಕೇಳ್ಪಟ್ಟೆ. ಮೇಲ್ನೋಟಕ್ಕೆ ಯಾರೋ ಅಲ್ಲಿ ಕಳ್ಳತನ ಮಾಡಿ ಕಾಲುವೆಯಲ್ಲಿ ಬಿಸಾಕಿದ್ದು ಕಂಡುಬಂದಿದೆ. ಈಗಾಗಲೇ ನಾವು ತಹಶೀಲ್ದಾರ್​ಗೆ ಸೂಚನೆಯನ್ನ ಕೊಟ್ಟಿದ್ದೇವೆ. ಅವರು ಎಫ್​ಐಆರ್​ ಮಾಡಲಿಕ್ಕೆ ಕ್ರಮವನ್ನು ತೆಗೆದುಕೊಳ್ಳುತ್ತಿದ್ದಾರೆ. ಪೊಲೀಸ್ ತನಿಖೆಯಿಂದ ಸತ್ಯಾಂಶ ಏನು ಹೊರಬರಲಿದೆ ನೋಡೋಣ'' ಎಂದರು.

ಬ್ಯಾಲೆಟ್ ಬಾಕ್ಸ್​ಗೂ, ಚುನಾವಣೆಗೂ ಸಂಬಂಧವಿಲ್ಲ : ''ಸಾಮಾನ್ಯವಾಗಿ ನಾವು ಬ್ಯಾಲೆಟ್​ ಪೇಪರ್​ನ್ನು ಈ ಬಾಕ್ಸ್​ನಲ್ಲಿ ಹಾಕುತ್ತೇವೆ. ವಿಶೇಷವಾಗಿ ಗ್ರಾಮ ಪಂಚಾಯಿತಿ, ಸಹಕಾರಿ ಇಲಾಖೆ ಮತ್ತು ಕೆಲವು ಸಂದರ್ಭದಲ್ಲಿ ನಮ್ಮ ಸರ್ಕಾರಿ ಇಲಾಖೆಯ ಚುನಾವಣೆಯ ಸಂದರ್ಭದಲ್ಲಿಯೂ ಅಂತಹ ಬಾಕ್ಸ್​​ಗಳನ್ನ ತೆಗೆದುಕೊಂಡು ಹೋಗ್ತಾರೆ. ಬಾಕ್ಸ್ ಪತ್ತೆಯಾಗಿರೋದಕ್ಕೂ, ನಿನ್ನೆ ನಡೆದ ಚುನಾವಣೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ಮಾಡಿಕೊಡುವ ಅವಶ್ಯಕತೆಯೂ ಇಲ್ಲ. ಇವು ಹಳೆಯ ಬಾಕ್ಸ್​ಗಳು, ನಾವು ಅಲ್ಲಿ ಇಟ್ಟಿದ್ದು ಈ ರೀತಿಯಾಗಿದೆ. ತಹಶೀಲ್ದಾರ್ ಅವರು ಎಫ್​ಐಆರ್ ಹಾಕಲಿದ್ದಾರೆ. ಮುಂದೆ ತನಿಖೆಯಾಗಲಿದೆ'' ಎಂದು ಹೇಳಿದರು.

ಇದನ್ನೂ ಓದಿ :ಶಿಗ್ಗಾಂವಿ‌ ಕ್ಷೇತ್ರದಾದ್ಯಂತ ಶಾಂತಿಯುತ ಮತದಾನ: ಅಮೆರಿಕದಿಂದ ಬಂದು ವೋಟ್​ ಮಾಡಿದ ಯುವತಿ!

ABOUT THE AUTHOR

...view details