ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ (ETV Bharat) ಬೆಂಗಳೂರು : ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ, ಅಪಮಾನ ಮಾಡುವುದನ್ನು ನಿಷೇಧಿಸುವ ಮತ್ತು ಇಂತಹ ಕೃತ್ಯಗಳಿಗೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವ ಹಾಗೂ ವೈದ್ಯಕೀಯ ವೃತ್ತಿ ಪಾಲನೆ ಮಾಡುವವರಿಗೆ ಕಡ್ಡಾಯ ನೋಂದಣಿ ಮಾಡಿಸಬೇಕಾದ ಮಸೂದೆ ವಿಧಾನಸಭೆಯಲ್ಲಿ ಇಂದು ಅಂಗೀಕಾರಗೊಂಡಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನು ತಿದ್ದುಪಡಿ ವಿಧೇಯಕಗಳನನ್ನು ಮಂಡಿಸಿದರು.
ಪ್ರಸ್ತಾವಿತ ಮಸೂದೆಯಲ್ಲಿ ವೈದ್ಯರು ವೃತ್ತಿಯಲ್ಲಿ ಕಾರ್ಯನಿರ್ವಹಿಸಬೇಕಾದರೆ, ವೈದ್ಯಕೀಯ ಪರಿಷತ್ತಿನಲ್ಲಿ ಕಡ್ಡಾಯವಾಗಿ ನೋಂದಣಿ ಆಗಿರಬೇಕು. ಒಂದು ವೇಳೆ ನೋಂದಣಿಯಾಗದೆ ವೃತ್ತಿ ಅಭ್ಯಾಸ ಮಾಡುತ್ತಿದ್ದರೆ, ಅಂತಹವರ ವಿರುದ್ಧ ಪರಿಷತ್ ಕ್ರಮ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವೈದ್ಯಕೀಯ ಪರಿಷತ್ಗೆ ರಿಜಿಸ್ಟರ್ ಹಾಗೂ ಉಪ ರಿಜಿಸ್ಟರ್ಗಳನ್ನು ನೇಮಕ ಮಾಡುವ ವ್ಯವಸ್ಥೆಯಲ್ಲೂ ಬದಲಾವಣೆ ತರಲಾಗಿದೆ ಎಂದು ಹೇಳಿದರು.
ಪರಿಷತ್ಗೆ ಸಭೆ ನಡೆಸುವ ವೇಳೆ, ಸ್ಥಳ ಹಾಗೂ ಕಾರ್ಯವಿಧಾನಗಳ ಬಗ್ಗೆಯೂ ವಿವರಿಸಲಾಗಿದೆ. ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರು, ಒಂದು ವೇಳೆ ಇಬ್ಬರು ಲಭ್ಯವಿಲ್ಲದ ಸಂದರ್ಭದಲ್ಲಿ ಸದಸ್ಯರು ಸಭೆಯ ಅಧ್ಯಕ್ಷತೆ ವಹಿಸಬಹುದು ಎಂದು ತಿಳಿಸಲಾಗಿದೆ. ಪರಿಷತ್ತಿನ ರಿಜಿಸ್ಟರ್ ಅವರು ವೈದ್ಯಕೀಯ ವೃತ್ತಿಗರ ಪಟ್ಟಿಯನ್ನು ಪ್ರತಿದಿನ ಇಂಡೀಕರಿಸಿ ಅಧಿಕೃತ ಜಾಲತಾಣದಲ್ಲಿ ನಿರ್ವಹಿಸಬೇಕು ಮತ್ತು ರಾಷ್ಟ್ರೀಯ ಆಯೋಗಕ್ಕೆ ತಿಳಿಸಬೇಕು ಎಂದು ಮಸೂದೆಯಲ್ಲಿ ಸೂಚಿಸಲಾಗಿದೆ ಎಂದರು.
ನಕಲಿ ವೈದ್ಯರಿಗೆ ದಂಡ; ನಕಲಿಯಾಗಿ ವೈದ್ಯಕೀಯ ವೃತ್ತಿ ಮಾಡುವವರಿಗೆ 10 ಸಾವಿರ ರೂ.ನಿಂದ 1 ಲಕ್ಷ ರೂ. ಗಳವರೆಗೂ ದಂಡ ವಿಧಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದರು.
ವೈದ್ಯಕೀಯ ಸೇವಾ ಸಿಬ್ಬಂದಿಯನ್ನು ಹಿಂಸಿಸುವುದು, ಅಪಮಾನ ಮಾಡುವುದು, ವೈದ್ಯೋಪಚಾರ ಸಂಸ್ಥೆಗಳ ಆಸ್ತಿಗೆ ಹಾನಿ ಮಾಡುವುದಕ್ಕೆ ಈ ಮೊದಲು ನಿಗದಿಯಾಗಿದ್ದ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಪ್ರಸ್ತಾವಿತ ಮಸೂದೆಯಲ್ಲಿ ಮೂರು ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಏಳು ವರ್ಷಗಳವರೆಗೂ ವಿಸ್ತರಿಸಬಹುದಾದ ಕಾರಾಗೃಹ ವಾಸ ಹಾಗೂ 25 ಸಾವಿರ ರೂ.ಗಳಿಗಿಂತ ಕಡಿಮೆ ಇಲ್ಲದಂತೆ 2 ಲಕ್ಷಗಳವರೆಗೂ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಅಪರಾಧಗಳಿಗೆ ಪ್ರಚೋದನೆ ನೀಡುವವರಿಗೂ ಇದೇ ತೆರನಾದ ಶಿಕ್ಷೆಯನ್ನು ವಿಧಿಸಲು ಮಸೂದೆಯಲ್ಲಿ ಅವಕಾಶವಿದೆ. ಇನ್ನು ಮುಂದೆ ವೈದ್ಯಕೀಯ ಸೇವಾ ಸಿಬ್ಬಂದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ, ಆಡಿಯೋ-ವಿಡಿಯೋಗಳಲ್ಲಿ, ಆಸ್ಪತ್ರೆಗಳಲ್ಲಿ ಫೋಟೋ, ವಿಡಿಯೋ ತೆಗೆಯುವ ಮೂಲಕ ಅಗೌರವಿಸುವ, ದೌರ್ಜನ್ಯ ಎಸಗುವ ಕೃತ್ಯಗಳನ್ನು ನಡೆಸಿದರೆ ಅವು ದಂಡನಾರ್ಹವಾಗಲಿವೆ ಎಂದು ಹೇಳಿದರು.
ಪ್ರಮುಖವಾದ ಈ ಮಸೂದೆ ಕುರಿತು ವಿಧಾನಸಭೆಯಲ್ಲಿ ಯಾವುದೇ ಚರ್ಚೆಗಳಾಗಲಿಲ್ಲ. ಮುಡಾ ಹಗರಣವನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ನ ಶಾಸಕರು ಸದನದ ಬಾವಿಯಲ್ಲಿ ಇಳಿದು ಧರಣಿ ನಡೆಸುತ್ತಿದ್ದರು. ಈ ವೇಳೆ ಮಸೂದೆ ಮಂಡನೆಯಾಯಿತು. ಸ್ಪೀಕರ್ ಯು. ಟಿ ಖಾದರ್, ಜನಪರವಾದ ಮಸೂದೆಗಳು ಮಂಡನೆಯಾಗಿವೆ. ಅವುಗಳ ಮೇಲೆ ಚರ್ಚೆ ಮಾಡಿ ಎಂದು ಮನವಿ ಮಾಡಿದರು. ಪ್ರತಿಪಕ್ಷದ ನಾಯಕರು ತಮ್ಮ ಪಟ್ಟನ್ನು ಸಡಿಲಿಸದ ಕಾರಣ ವಿಧೇಯಕ ಚರ್ಚೆ ಇಲ್ಲದೆ ಅಂಗೀಕಾರಗೊಂಡಿತು.
ನಂದಿ ಬೆಟ್ಟ ಆಕರ್ಷಣೀಯ ಪ್ರವಾಸಿ ತಾಣ : ನಂದಿಬೆಟ್ಟವನ್ನು ಆಕರ್ಷಣೀಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಪ್ರಯತ್ನಗಳಿಗೆ ಪೂರಕವಾದ ವಿಧೇಯಕಕ್ಕೆ ಅಂಗೀಕಾರ ದೊರೆಯಿತು. ಪ್ರವಾಸೋದ್ಯಮ ಸಚಿವ ಹೆಚ್ ಕೆ ಪಾಟೀಲ್, ಸರ್ಕಾರಿ ಉದ್ಯಾನವನಗಳ ಸಂರಕ್ಷಣಾ ವಿಧೇಯಕವನ್ನು ಮಂಡಿಸಿದರು.
ನಂದಿ ಬೆಟ್ಟದಲ್ಲಿ ಎರಡು ಎಕರೆ ಭೂಮಿಯನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸಿಕೊಡಬೇಕು ಎಂಬುದು ಮಸೂದೆಯಲ್ಲಿನ ಪ್ರಮುಖ ಅಂಶವಾಗಿದೆ. ಇತರೆ ಬದಲಾವಣೆಗಳ ಜೊತೆಗೆ ನಂದಿ ಬೆಟ್ಟವನ್ನು ಆಕರ್ಷಣೀಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಪ್ರಯತ್ನ ಮಾಡಲು ವಿಧೇಯಕ ಸಹಕಾರಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ :ಒಂದು ರಾಷ್ಟ್ರ ಒಂದು ಚುನಾವಣೆ ವಿರೋಧಿಸುವ ನಿರ್ಣಯ ವಿಧಾನಸಭೆಯಲ್ಲಿ ಅಂಗೀಕಾರ: ನಿರ್ಣಯ ವಿರೋಧಿಸಿದ ಬಿಜೆಪಿ - Resolution Against One Election