ಬೆಂಗಳೂರು: ಆರ್ಥಿಕವಾಗಿ ಸಬಲೀಕರಣಗೊಳ್ಳಲು ಮಹಿಳೆಯರು ತಯಾರಿಸಿದ ಗುಣಮಟ್ಟದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕಾಗಿ ಕೌಶಲ್ಯಾಭಿವೃದ್ಧಿ ಇಲಾಖೆಯ ಜೀವನೋಪಾಯ ಅಭಿಯಾನದಡಿ ಫೆ.29ರಿಂದ ಹತ್ತು ದಿನಗಳ ರಾಷ್ಟ್ರಮಟ್ಟದ ನಮ್ಮ ಸರಸ್ ಮೇಳವನ್ನ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ರಾಜ್ಯ ಸರ್ಕಾರ ವತಿಯಿಂದ 3ನೇ ಬೃಹತ್ ರಾಷ್ಟ್ರೀಯ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಇದಾಗಿದ್ದು, ಈ ಸಂಬಂಧ ಪೋಸ್ಟರ್ ಹಾಗೂ ಅಕ್ಕ ಕೆಫೆ ಲಾಂಛನ ಬಿಡುಗಡೆ ಮಾಡಲಾಯಿತು. ಈ ವೇಳೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಹೆಣ್ಣು ಮಕ್ಕಳ ಸಬಲೀಕರಣಕ್ಕೆ ನಾವು ಪ್ರಯತ್ನಕ್ಕಾಗಿ ಸರಸ್ ಮೇಳ ಹಮ್ಮಿಕೊಳ್ಳಲಾಗುತ್ತಿದೆ. ಉದ್ಯೋಗ ಪಡೆಯುವುದಕ್ಕಿಂತ ಬದಲಾಗಿ ಉದ್ಯಮ ವೃತ್ತಿಯನ್ನ ಅಳವಡಿಸಿಕೊಳ್ಳುವುದು ಮುಖ್ಯ. ಸರಸ್ ಅಂದ್ರೆ ಸ್ವಯಂ ಪ್ರೇರಿತರಾಗಿ ಉದ್ಯೋಗ ಅಳವಡಿಸಿಕೊಳ್ಳುವುದು. ಇದು ಕುಂಬಮೇಳದ ರೀತಿ ಈ ಹಿಂದೆ ನಾನು ಸಹಕಾರ ಸಚಿವನಾಗಿದ್ದಾಗ ಸ್ತ್ರೀ ಶಕ್ತಿ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದೆ. ಖಾಸಗಿ ಕಂಪನಿಗಳು ಬಂದು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಹೇಳಿದರು.
ಹೇರ್ ಕಟ್ಟಿಂಗ್ ಮಾಡೋಕೆ 1100 ರೂ.ಆಗುತ್ತೆ:ಮಹಿಳೆಯರು ಉದ್ಯಮ ಅರಂಭಿಸುವುದಕ್ಕೆ ಆತ್ಮವಿಶ್ವಾಸ ಇರಬೇಕು. ಬಡ್ಡಿ, ಚಕ್ರಬಡ್ಡಿ ಸಮಸ್ಯೆ ಇರುವುದು ಸಹಜ. ಇದಕ್ಕಾಗಿ ತಲೆ ಕೆಡಿಸಿಕೊಳ್ಳಬಾರದು. ಬ್ಯೂಟಿ ಪಾರ್ಲರ್ ಎಷ್ಟು ಬೆಳೆದಿದೆ ಅಂತ ನಿಮಗೆಲ್ಲ ಗೊತ್ತಿಲ್ಲ. ಹೆಣ್ಣು ಹಣೆಗೆ ಬಿಂದಿ, ಕಿವಿಗೆ ಓಲೆ ಹಾಕಿಕೊಂಡರೇನೆ ಚೆಂದ. ನಾನು ಈ ಹಿಂದೆ ಹಳ್ಳಿಯಲ್ಲಿ ಹೇರ್ ಕಟ್ಟಿಂಗ್ಗೆ 15-20 ರೂಪಾಯಿ ನೀಡುತ್ತಿದ್ದೆ. ಸದಾಶಿವನಗರದಲ್ಲಿ ಇದೀಗ 1100 ಆಗಿದೆ. ಉದ್ಯಮ ಆರಂಭಿಸಿ ಉದ್ಯಮಿಗಳಾಗಿ. ನಿಮ್ಮ ವಸ್ತುಗಳನ್ನು ಬ್ರ್ಯಾಂಡ್ ಮಾಡಿ. ಇದಕ್ಕಾಗಿ ಮಾರ್ಕೆಟಿಂಗ್ ತಂತ್ರವನ್ನ ವಿಭಿನ್ನವಾಗಿ ಪ್ರಚಾರ ಮಾಡಿ ಎಂದ ಸಚಿವರು, ಉದ್ಯೋಗ ಸೃಷ್ಟಿ ಮಾಡುವ ಮಹಿಳೆಯರಿಗೆ ಸರ್ಕಾರ ಹೆಚ್ಚು ಆದ್ಯತೆ ನೀಡಲಿದೆ ಎಂದರು.