ಕಡಬ (ದಕ್ಷಿಣ ಕನ್ನಡ) :ಕೋಡಿಂಬಾಳ ಗ್ರಾಮಸ್ಥರೇ ಸೇರಿ ಶ್ರಮದಾನದ ಮೂಲಕ ಪ್ರಾರಂಭಿಸಿದ ತಾತ್ಕಾಲಿಕ ಸೇತುವೆ ಕೆಲಸ ಪೂರ್ಣಗೊಳ್ಳುತ್ತಿದ್ದು, ವಾರದೊಳಗೆ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.
ಸಂಸದರ ಆದರ್ಶ ಗ್ರಾಮ ಬಳ್ಪ ಮತ್ತು ಕೇನ್ಯ ಹಾಗೂ ಮಜ್ಜಾರು ಭಾಗದ ಗ್ರಾಮಸ್ಥರು ತಮ್ಮ ಅಗತ್ಯತೆಗಳಿಗಾಗಿ ತಾಲೂಕು ಕೇಂದ್ರ ಕಡಬ ಅಥವಾ ಸುಳ್ಯ, ಮಡಿಕೇರಿ ಕಡೆಗೆ ಸಂಪರ್ಕಿಸಬೇಕಾದರೆ ಸುಳ್ಯ ತಾಲೂಕಿನ ಪಂಜ ಮೂಲಕ ಸುಮಾರು 20ಕಿ.ಮೀ ಹೆಚ್ಚುವರಿಯಾಗಿ ಸಂಚರಿಸಬೇಕು. ಆದರೆ ತಮ್ಮ ಗ್ರಾಮದಲ್ಲಿ ಹರಿಯುತ್ತಿರುವ ಕುಮಾರಧಾರಾ ನದಿಯನ್ನು ದಾಟಲು ಸಾಧ್ಯವಾದರೆ ಬರೀ 6 ಕಿ.ಮೀ. ಕ್ರಮಿಸಿದರೆ ಕಡಬ ತಾಲೂಕು ಕೇಂದ್ರ, 3 ಕಿ.ಮೀ ಸಂಚರಿಸಿದರೆ ಮಂಗಳೂರು-ಬೆಂಗಳೂರು ನಡುವಿನ ಕೋಡಿಂಬಾಳ ರೈಲ್ವೆ ನಿಲ್ದಾಣ ಸಿಗುತ್ತದೆ.
ಗ್ರಾಮಸ್ಥರಿಂದಲೇ ನಿರ್ಮಾಣವಾದ ತಾತ್ಕಾಲಿಕ ಸೇತುವೆ (ETV Bharat) ಈ ನಿಟ್ಟಿನಲ್ಲಿ ಗ್ರಾಮಸ್ಥರೇ ಸೇರಿಕೊಂಡು ಕುಮಾರಧಾರ ನದಿಯ ಮಜ್ಜಾರುಕಡವು ಎಂಬಲ್ಲಿ ತಾತ್ಕಾಲಿಕ ಸೇತುವೆಯೊಂದನ್ನು ನಿರ್ಮಾಣ ಮಾಡಲು ತೀರ್ಮಾನಿಸಿದರು. ಇದಕ್ಕಾಗಿ ಸೇತುವೆ ನಿರ್ಮಾಣ ಸಮಿತಿಯನ್ನು ರಚಿಸಿ ಗ್ರಾಮಸ್ಥರ ಸಹಕಾರ ಪಡೆದು ಸುಮಾರು ಐದು ಲಕ್ಷ ರೂ. ಮೊತ್ತವನ್ನು ಸಂಗ್ರಹಿಸಿ ಬೇಸಿಗೆ ಕಾಲದಲ್ಲಿ ಮಾತ್ರ ಉಪಯೋಗಕ್ಕೆ ಬರುವಂತಹ ತಾತ್ಕಾಲಿಕ ಸೇತುವೆ ಕೆಲಸ ಆರಂಭಿಸಿದರು. ಬಳ್ಪ, ಕೇನ್ಯ, ಮಜ್ಜಾರು ಭಾಗದ ವೃದ್ಧರು, ಯುವಕರು ಮಕ್ಕಳೆನ್ನದೇ ಸುಮಾರು 200ಕ್ಕೂ ಅಧಿಕ ಮಂದಿ ಗ್ರಾಮಸ್ಥರು ಶ್ರಮದಾನದ ಮೂಲಕ ಸೇತುವೆ ಕೆಲಸಕ್ಕೆ ಸಹಕಾರ ನೀಡುತ್ತಿದ್ದಾರೆ. ಮುಂದಿನ ಒಂದು ವಾರದೊಳಗಡೆ ತಾತ್ಕಾಲಿಕ ಸೇತುವೆ ಕೆಲಸ ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.
ತಾತ್ಕಾಲಿಕ ಸೇತುವೆ ನಿರ್ಮಾಣದಲ್ಲಿ ತೊಡಗಿರುವ ಗ್ರಾಮಸ್ಥರು (ETV Bharat) ಗ್ರಾಮಸ್ಥರಿಂದಲೇ ತಾತ್ಕಾಲಿಕ ಸೇತುವೆ ನಿರ್ಮಾಣ (ETV Bharat) ಕಲ್ಲು, ಮಣ್ಣು, ಮರಳು, ಮತ್ತು ಸಿಮೆಂಟ್ ಪೈಪ್ ಮುಂತಾದ ಪರಿಕರಗಳಿಂದ ನಿರ್ಮಿಸುತ್ತಿರುವ ಈ ತಾತ್ಕಾಲಿಕ ಸೇತುವೆ ಮಳೆಗಾಲದಲ್ಲಿ ನೆರೆ ನೀರಿಗೆ ಹಾನಿಯಾಗುತ್ತದೆ. ಬಳಿಕ ಮುಂದಿನ ವರ್ಷ ಬೇಸಿಗೆ ಕಾಲದಲ್ಲಿ ಮತ್ತೆ ಪುನರ್ ನಿರ್ಮಾಣ ಮಾಡಬೇಕಾಗುತ್ತದೆ. ಇಲ್ಲಿ ಶಾಶ್ವತ ಸಂಪರ್ಕ ಸೇತುವೆ ಪೂರ್ಣವಾದರೆ ಕಡಬ, ಕೋಡಿಂಬಾಳ ರೈಲ್ವೆ ನಿಲ್ದಾಣ, ಪ್ರಸಿದ್ಧ ಪ್ರವಾಸಿ ಮತ್ತು ಕಾರಣಿಕ ಕ್ಷೇತ್ರಗಳಾದ ಮಜ್ಜಾರು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಸೇರಿದಂತೆ ಮಂಗಳೂರು, ಬೆಂಗಳೂರು ಮತ್ತು ಸುಳ್ಯ, ಮಡಿಕೇರಿ, ಕೇರಳ ಕಡೆಗೂ ಸಂಪರ್ಕ ಕೊಂಡಿಯಾಗಲಿದೆ.
ಗ್ರಾಮಸ್ಥರಿಂದಲೇ ತಾತ್ಕಾಲಿಕ ಸೇತುವೆ ನಿರ್ಮಾಣ (ETV Bharat) ಆದ್ದರಿಂದ ಸರ್ಕಾರ ಈ ಭಾಗದಲ್ಲಿ ಸುಮಾರು 200 ರಿಂದ 300ಮೀಟರ್ ಉದ್ದದ ಒಂದು ಸುಸಜ್ಜಿತವಾದ ಸೇತುವೆ ನಿರ್ಮಿಸಲು ಮುಂದಾಗಬೇಕಿದೆ. ಸಂಸದರ ಆದರ್ಶ ಗ್ರಾಮವಾಗಿರುವುದರಿಂದ ಈ ಸೇತುವೆ ಸಂಪರ್ಕ ಕಲ್ಪಿಸುವ ಬಳ್ಪ ಗ್ರಾಮದ ರಸ್ತೆಗಳು ಬಹುತೇಕ ಎಲ್ಲಾ ಕಡೆಗಳಲ್ಲಿ ಈಗಾಗಲೇ ಕಾಂಕ್ರೀಟಿಕರಣವಾಗಿವೆ. ಆದ್ದರಿಂದ ಸಂಬಂಧಿಸಿದ ಇಲಾಖಾಧಿಕಾರಿಗಳು ಮತ್ತು ರಾಜಕಾರಣಿಗಳು ಮಜ್ಜಾರುಕಡವು ಭಾಗದಲ್ಲಿ ಪೂರ್ಣಕಾಲಿಕ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಕುಸಿದ ಕಾಳಿ ಸೇತುವೆ ತೆರವು ವೇಳೆ ಪಿಲ್ಲರ್ ಮುರಿದು ನದಿಗೆ ಬಿದ್ದ ಸ್ಲ್ಯಾಬ್: ತಪ್ಪಿದ ಭಾರಿ ಅನಾಹುತ!