ಮಂಗಳೂರು (ದಕ್ಷಿಣ ಕನ್ನಡ):ಬೆಳ್ತಂಗಡಿ ತಾಲೂಕಿನ ಕುಕ್ಕೇಡಿಯಲ್ಲಿ ಭಾನುವಾರ ಸಿಡಿಮದ್ದು ಘಟಕದಲ್ಲಿ ಸ್ಫೋಟ ಸಂಭವಿಸಿದ್ದರಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತವು ಜಿಲ್ಲಾ ವ್ಯಾಪ್ತಿಯಲ್ಲಿನ ಎಲ್ಲಾ ಸಿಡಿಮದ್ದು ತಯಾರಿಕಾ ಘಟಕಗಳ ಮೇಲೆ ತಕ್ಷಣದಿಂದಲೇ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿ ಆದೇಶಿಸಲಾಗಿದೆ. ಅಲ್ಲದೆ ಮುಂದಿನ ಆದೇಶದವರೆಗೆ ಅವುಗಳನ್ನು ಅಮಾನತಿನಲ್ಲಿರಿಸಿ ಆದೇಶ ಹೊರಡಿಸಿದೆ.
ಅಲ್ಲದೆ ಎಲ್ಲಾ ಸಿಡಿಮದ್ದು ತಯಾರಿಕಾ ಘಟಕ, ದಾಸ್ತಾನು, ಮಾರಾಟ ಮಳಿಗೆಗಳು ಕೈಗೊಂಡಿರುವ ಮುಂಜಾಗ್ರತೆ ಕ್ರಮಗಳ ಸ್ಥಳ ಪರಿಶೀಲನೆಗೆ ಮಂಗಳೂರು ಹಾಗೂ ಪುತ್ತೂರು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದೆ. ಭಾನುವಾರ ಸಂಜೆ ಬೆಳ್ತಂಗಡಿ ತಾಲೂಕಿನ ವೇಣೂರು ಗೋಳಿಯಂಗಡಿ ಸಮೀಪದ ಕುಕ್ಕೇಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡ್ಯಾರು ಎಂಬಲ್ಲಿ ನುಡುಮದ್ದು ತಯಾರಿಕಾ ಘಟಕದಲ್ಲಿ ಸಂಭವಿಸಿದ ಭೀಕರ ಸ್ಫೋಟದಿಂದ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಅಲ್ಲದೆ, ಸಮೀಪದ ಮನೆಯ ಆಸ್ತಿ ಪಾಸ್ತಿ ಹಾನಿಯಾಗಿದೆ. ಸಿಡಿಮದ್ದು ತಯಾರಿಸುವ ಸಂದರ್ಭಗಳಲ್ಲಿ ಸಿಡಿಮದ್ದುಗಳಿಂದ ಯಾವುದೇ ಅಗ್ನಿ ಅನಾಹುತಗಳು, ಜೀವ ಹಾನಿ, ಆಸ್ತಿ ಹಾನಿ ಸಂಭವಿಸದಂತೆ ಸಂಪೂರ್ಣ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಈ ಆದೇಶ ಮಾಡಲಾಗಿದೆ.
ಸಮಿತಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಿಡಿಮದ್ದು ತಯಾರಿಕಾ ಘಟಕಗಳನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಸೀಲ್ ಡೌನ್ ಮಾಡುವುದು, ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಿಡಿಮದ್ದು ತಯಾರಿಕಾ ಘಟಕಗಳು ಹಾಗೂ ದಾಸ್ತಾನು ಮತ್ತು ಮಾರಾಟಗಳ ಬಗ್ಗೆ ಜಂಟಿಯಾಗಿ ಸಮನ್ವಯ ಸಾಧಿಸಿಕೊಂಡು ಪರಿಶೀಲಿಸತಕ್ಕದ್ದು.