ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಟಾಟಾ ಸಮೂಹದಿಂದ 2,300 ಕೋಟಿ ರೂ. ಹೂಡಿಕೆ: ಮಹತ್ವದ ಒಪ್ಪಂದಕ್ಕೆ ಅಸ್ತು - ಸಿಎಂ ಸಿದ್ದರಾಮಯ್ಯ

ಟಾಟಾ ಸಮೂಹದ ಏರ್ ಇಂಡಿಯಾ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ರಾಜ್ಯದಲ್ಲಿ 2300 ಕೋಟಿ ರೂ ಹೂಡಿಕೆ ಮಾಡಲು ರಜ್ಯ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದೆ.

Etv Bharat
Etv Bharat

By ETV Bharat Karnataka Team

Published : Feb 19, 2024, 12:47 PM IST

ಬೆಂಗಳೂರು: ಟಾಟಾ ಸಮೂಹದ ಭಾಗವಾಗಿರುವ ಏರ್ ಇಂಡಿಯಾ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ರಾಜ್ಯದಲ್ಲಿ ವಿವಿಧ ಯೋಜನೆಗಳಿಗೆ 2,300 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿವೆ. ಈ ಸಂಬಂಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರ ಸಮ್ಮುಖದಲ್ಲಿ ಸೋಮವಾರ ಇಲ್ಲಿ ಒಡಂಬಡಿಕೆಗೆ ಅಂಕಿತ ಹಾಕಲಾಯಿತು.

ಬಳಿಕ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಏರ್ ಇಂಡಿಯಾದ ಮುಖ್ಯ ವಾಣಿಜ್ಯ ವ್ಯವಹಾರ ಅಧಿಕಾರಿ ನಿಪುಣ್ ಅಗರವಾಲ್ ಹಾಗೂ ಟಿಎಎಸ್ಎಲ್ ಸಿಇಒ ಸುಕರಣ್ ಸಿಂಗ್ ಒಡಂಬಡಿಕೆ ಪತ್ರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

ವಿಧಾನಸೌಧದಲ್ಲಿ ನಡೆದ ಒಡಂಬಡಿಕೆ ವಿನಿಮಯದ ನಂತರ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ಟಾಟಾ ಸಮೂಹದ ಈ ಹೂಡಿಕೆಯಿಂದ ನೇರವಾಗಿ 1,650 ಉದ್ಯೋಗಗಳು ಸೃಷ್ಟಿಯಾಗಲಿವೆ. ಒಟ್ಟು ಹೂಡಿಕೆಯ ಪೈಕಿ ಏರ್ ಇಂಡಿಯಾ ಕಂಪನಿಯು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಓವರ್ - ಹಾಲ್ (ಎಂಆರ್​ಒ) ಘಟಕವನ್ನು ಸ್ಥಾಪಿಸಲು 1,300 ಕೋಟಿ ರೂ. ಹೂಡುತ್ತಿದೆ. ಇದರಿಂದಾಗಿ 1,200 ಜನರಿಗೆ ನೇರವಾಗಿ ಉದ್ಯೋಗ ಸಿಗಲಿದ್ದು, ಪರೋಕ್ಷವಾಗಿ 25 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ಇಡೀ ಭಾರತದಲ್ಲಿ ಇದು ಮೊಟ್ಟಮೊದಲ ಯೋಜನೆಯಾಗಿದೆ ಎಂದರು.

ಮೂರು ಯೋಜನೆಗಳಿಗೆ ಸಾವಿರ ಕೋಟಿ ಹೂಡಿಕೆ:ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಕಂಪನಿಯು ಮೂರು ಯೋಜನೆಗಳಿಗೆ 1,030 ಕೋಟಿ ರೂ. ಬಂಡವಾಳ ಹೂಡಲಿದೆ. ಇವುಗಳ ಪೈಕಿ 420 ಕೋಟಿ ರೂ.ಗಳನ್ನು ಅದು ನಾಗರಿಕ ವಿಮಾನಗಳನ್ನು ಸರಕು ಸಾಗಣೆ ವಿಮಾನಗಳನ್ನಾಗಿ (ಫ್ರೈಟರ್) ಪರಿವರ್ತಿಸುವ ಘಟಕ ಸ್ಥಾಪನೆಗೆ ವಿನಿಯೋಗಿಸಲಿದೆ. ಜೊತೆಗೆ 310 ಕೋಟಿ ರೂ. ಹೂಡಿಕೆಯೊಂದಿಗೆ ಗನ್ ತಯಾರಿಕೆ ಘಟಕ ಮತ್ತು 300 ಕೋಟಿ ರೂ. ವೆಚ್ಚದಲ್ಲಿ ವಿಮಾನಯಾನ ಮತ್ತು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಿದೆ. ಇದರಿಂದ 450 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ವಿವರಿಸಿದರು.

ಬೆಂಗಳೂರು ವಿಮಾನ ನಿಲ್ದಾಣದ ಸಮೀಪ ಮತ್ತು ಕೋಲಾರದಲ್ಲಿ ಟಿಎಎಸ್ಎಲ್ ತಾನು ಸ್ಥಾಪಿಸಲಿರುವ ಗನ್ ತಯಾರಿಕೆ ಘಟಕದ ಮೂಲಕ ತನಗೆ ಅಗತ್ಯವಿರುವ 13 ಸಾವಿರ ಬಿಡಿಭಾಗಗಳ ಪೈಕಿ ಶೇಕಡಾ 50ರಷ್ಟನ್ನು ಪೂರೈಸಿಕೊಳ್ಳುವ ಆಲೋಚನೆ ಹೊಂದಿದೆ. ಇದರಿಂದಾಗಿ 300ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ 2-3 ಸಾವಿರ ಜನರಿಗೆ ಉದ್ಯೋಗಗಳು ಸಿಗಲಿವೆ. 1939ರಷ್ಟು ಹಿಂದೆಯೇ ಬೆಂಗಳೂರಲ್ಲಿ ಹೆಚ್ಎಎಲ್ ಸ್ಥಾಪನೆಯಾಗುವುದರೊಂದಿಗೆ ರಾಜ್ಯವು ವೈಮಾನಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಶೇ 67ರಷ್ಟು ಕರ್ನಾಟಕದಲ್ಲೇ ತಯಾರಿ:ರಕ್ಷಣಾ ಇಲಾಖೆಗೆ ಬೇಕಾಗುವ ವಿಮಾನಗಳು ಮತ್ತು ಹೆಲಿಕಾಪ್ಟರ್​​​ಗಳ ಪೈಕಿ ಶೇಕಡಾ 67ರಷ್ಟು ಕರ್ನಾಟಕದಲ್ಲೇ ತಯಾರಾಗುತ್ತಿದೆ. ಜತೆಗೆ ದೇಶದ ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದ ರಫ್ತು ವಹಿವಾಟಿಗೆ ರಾಜ್ಯವು ಶೇಕಡಾ 65ರಷ್ಟು ಕೊಡುಗೆ ನೀಡುತ್ತಿದೆ. ದೇಶದಲ್ಲಿ ಈ ವಲಯದಲ್ಲಿರುವ ಕಂಪನಿಗಳ ಪೈಕಿ ಶೇ.70ರಷ್ಟು ಕಂಪನಿಗಳು ಕರ್ನಾಟಕದಲ್ಲೇ ನೆಲೆ ಹೊಂದಿವೆ.

ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್, ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಏರ್ ಇಂಡಿಯಾದ ಉನ್ನತಾಧಿಕಾರಿಗಳಾದ ಮನನ್ ಚೌಹಾಣ್, ಕಾರ್ತಿಕೇಯ ಭಟ್, ಅತುಲ್ ಶುಕ್ಲ, ಟಿಎಎಸ್ಎಲ್ ಉನ್ನತಾಧಿಕಾರಿಗಳಾದ ಗುರು ದತ್ತಾತ್ರೇಯ, ಅರ್ಜುನ್ ಮೈನೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ಹರಿ ಮಾರಾರ್, ಸಿಒಒ ಸಾತ್ಯಕಿ ರಘುನಾಥ್, ಸಿಎಫ್ಒ ಭಾಸ್ಕರ್ ರವೀಂದ್ರ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: ವಿಶೇಷ ವಿಮಾನದಲ್ಲಿ ಡಿಕೆಶಿ ಜೊತೆ ಮಂಗಳೂರಿಗೆ ಬಂದು ಹೋದ ಸೋಮಶೇಖರ್

ABOUT THE AUTHOR

...view details