ಶಿರಸಿ (ಉತ್ತರ ಕನ್ನಡ):ಮಲೆನಾಡಿನಲ್ಲಿ ಅಬ್ಬರದ ಮಳೆಗಾಲ ಮುಗಿದರೂ ಮಳೆ ಇನ್ನೂ ಬಿಟ್ಟಿಲ್ಲ. ಅದಾಗಲೇ ರೈತರು ಭತ್ತನಾಟಿ ಮಾಡಿ ಸಸಿಗಳು ಮಾಗುವ ಹಂತಕ್ಕೆ ಬಂದು ನಿಂತಿವೆ. ಇದರ ನಡುವೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ರೈತರು ಜರ್ಮನ್ನ ಚಾಕೋಪರ್ಟ್ ಎನ್ನುವ ನೇರಳೆ ಬಣ್ಣದ ಭತ್ತದ ತಳಿಯಿಂದ ನಿರ್ಮಿಸಿರುವ ಟ್ಯಾಂಬೋ ಆರ್ಟ್ ಎಲ್ಲರ ಗಮನ ಸೆಳೆಯುತ್ತಿದೆ.
ಹೌದು, ಮಲೆನಾಡ ಇದೀಗ ಹಸಿರು ಹೊದಿಕೆಯನ್ನು ಹೊದ್ದು ರಾರಾಜಿಸುತ್ತಿದೆ. ಭತ್ತದ ಗದ್ದೆಗಳಲ್ಲಿ ಸಸಿಗಳ ನಾಟಿ ಆಗಿ ಹಸಿರಿನಿಂದ ಕಂಗೊಳಿಸುತ್ತಿವೆ. ಈ ಹಸಿರು ಸಿರಿಯ ನಡುವೆ ನೇರಳೆ ಬಣ್ಣದ ಭತ್ತದ ತಳಿಯಿಂದ ಟ್ಯಾಂಬೋ ಆರ್ಟ್ ನಿರ್ಮಿಸಲಾಗಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಿರಿಧಾನ್ಯ ಹಾಗೂ ಸಾವಯವ ಮೇಳಕ್ಕೆ ಸಿದ್ದಾಪುರ ಕೃಷಿ ಇಲಾಖೆ ಟ್ಯಾಂಬೋ ಕಲೆಯ ಮೂಲಕ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮುಂದಿನ ಜನವರಿ ಮೊದಲ ವಾರದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಿರಿಧಾನ್ಯ ಹಾಗೂ ಸಾವಯವ ಮೇಳದಲ್ಲಿ ಈ ಟ್ಯಾಂಬೋ ಆರ್ಟ್ ಪ್ರದರ್ಶನವಾಗಲಿದೆ.
ಸಿದ್ದಾಪುರ ತಾಲೂಕಿನ ಗೋಳಗೊಡ ಎನ್ನುವ ಗ್ರಾಮದ ದ್ಯಾವ ನಾಯ್ಕ ಎಂಬ ರೈತನ ಭತ್ತದ ಗದ್ದೆಯಲ್ಲಿ ಈ ಟ್ಯಾಂಬೋ ಕಲೆಯನ್ನು ಮೂಡಿಸಲಾಗಿದೆ. ಅಪರೂಪದ ನೇರಳೆ ಬಣ್ಣದ ಭತ್ತದ ತಳಿಯನ್ನು ಇವರ ಗದ್ದೆಯಲ್ಲಿ ಬೆಳೆಯಲು ಹಾಗೂ ಟ್ಯಾಂಬೋ ಕಲೆಯ ರಚನೆಯ ಅವಕಾಶಕ್ಕಾಗಿ ಕೃಷಿ ಇಲಾಖೆ ಅಧಿಕಾರಿಗಳು ರೈತನನ್ನು ಕೇಳಿಕೊಂಡರು. ನಂತರ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಇದನ್ನು ನಾಟಿ ಮಾಡಿದರು. ಸುತ್ತಲೂ ಹಸಿರು ತಳಿಯ ಭತ್ತದ ನಡುವೆ ಹಗ್ಗದ ಸಹಾಯದಿಂದ ಮಧ್ಯದಲ್ಲಿ "ORGANIC MILLETS 2025" ಎಂದು ನೇರಳೆ ಬಣ್ಣದ ಚಾಕೋಪರ್ಟ್ ತಳಿಯ ಭತ್ತವನ್ನು ನಾಟಿ ಮಾಡಿದರು.