ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat) ರಾಮನಗರ:"ಕಳೆದ ಐದು ವರ್ಷಗಳಿಂದ ಚನ್ನಪಟ್ಟಣದಲ್ಲಿ ಸೈಟು, ಮನೆ ಹಂಚಿಲ್ಲ. ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 150- 200 ಕೋಟಿ ಮಂಜೂರು ಮಾಡಿಸಿ ಚನ್ನಪಟ್ಟಣದ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗುವುದು" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಚನ್ನಪಟ್ಟಣದ ಮಹದೇಶ್ವರ ದೇವಸ್ಥಾನದ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು "ದೇವರ ಸನ್ನಿದಿಯಲ್ಲಿ ಮಾತನಾಡುತ್ತಿದ್ದು, ಬೆಂಗಳೂರಿನ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳನ್ನು, ಇಲ್ಲಿಗೂ ತರಬೇಕು. ಹಾಗೂ ಪಟ್ಟಣಕ್ಕೆ ಹೊಸ ರೂಪ ನೀಡಬೇಕು ಎನ್ನುವ ತೀರ್ಮಾನ ಮಾಡಿದ್ದೇನೆ" ಎಂದು ಹೇಳಿದರು.
"ಚನ್ನಪಟ್ಟಣದಿಂದ ಐದಾರು ಕಿಲೋಮೀಟರ್ ಒಳಗೆ ಮುಖ್ಯ ರಸ್ತೆ ಸಂಪರ್ಕ ಇರುವ ಹಾಗೂ ಕಡಿಮೆ ಬೆಲೆಗೆ ಭೂಮಿ ದೊರೆಯುವ ಕಡೆ 50 ರಿಂದ 100 ಎಕರೆ ಜಮೀನು ಖರೀದಿ ಮಾಡಿ ಸೈಟು ಹಂಚುವ ಕೆಲಸ ಮಾಡಲಾಗುವುದು. ಕನಕಪುರದಲ್ಲಿ ಸೈಟು ಹಂಚಿಕೆ ಮಾಡಿದಂತೆ ಗ್ರಾಮ ಮಟ್ಟದಲ್ಲೂ ಸೈಟು ಹಂಚಿಕೆ ಮಾಡಲಾಗುವುದು" ಎಂದು ಹೇಳಿದರು.
ಹೊಸ ಚನ್ನಪಟ್ಟಣ ನಿರ್ಮಾಣ ಮಾಡೋಣ:ಜೂನ್ 24ರಂದು ಬಂದು ಹೆಚ್ಚಿನ ಮಾಹಿತಿ ನೀಡುತ್ತೇನೆ. ಜಮೀನು ನೀಡಲು ಆಸಕ್ತಿ ಇರುವವರು ಬಂದು ನನ್ನ ಭೇಟಿ ಮಾಡಿ ಅಥವಾ ಪಕ್ಷದ ಮುಖಂಡರಿಗೆ ತಿಳಿಸಿ. ಜಮೀನಿನ ದಾಖಲೆಗಳು ಸರಿ ಇದ್ದರೆ, ಒಂದೇ ಬಾರಿಗೆ ಹಣ ನೀಡುವ ವ್ಯವಸ್ಥೆ ಮಾಡಲಾಗುವುದು. ಚನ್ನಪಟ್ಟಣದಲ್ಲಿ ನಿವೇಶನ ಇಲ್ಲದ ಬಡವರಿಗೆ ಮೊದಲು ಹಂಚಿಕೆ ಮಾಡಲಾಗುವುದು. ಹೊಸ ಚನ್ನಪಟ್ಟಣ ನಿರ್ಮಾಣ ಮಾಡೋಣ. ಸೈಟುಗಳನ್ನು ಹೆಣ್ಣುಮಕ್ಕಳ ಹೆಸರಿಗೆ ಮಾಡಿಕೊಡಲಾಗುವುದು. ಏಕೆಂದರೆ ಗಂಡಸರು ಎಲ್ಲಾ ಮಾರಿಕೊಳ್ಳುತ್ತಾರೆ" ಎಂದು ಎಂದರು.
ಚನ್ನಪಟ್ಟಣದ ಸ್ಥಿತಿ ನೋಡಿದರೆ ಮೂರು ದಿನ ಅಧಿಕಾರಿಗಳ ಸಭೆ ಮಾಡಿದರೂ ಸಾಲಲ್ಲ:ಚನ್ನಪಟ್ಟಣದ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, "ಇಂದು ಚನ್ನಪಟ್ಟಣದಲ್ಲಿ ಅಧಿಕಾರಿಗಳ ಜತೆ ಒಂದು ಸಣ್ಣ ಸಭೆ ಮಾಡಿದ್ದೇನೆ. ಇಲ್ಲಿನ ಪರಿಸ್ಥಿತಿ ನೋಡಿದರೆ ಮೂರು ದಿನ ಸಭೆ ಮಾಡಿದರೂ ಸಾಲುವುದಿಲ್ಲ. ಇದುವರೆಗೂ ಇಲ್ಲಿ ಒಂದೂ ಕೆಡಿಪಿ ಸಭೆ, ಲ್ಯಾಂಡ್ ಗ್ರಾಂಟ್ ಸಭೆ, ಆಶ್ರಯ ಸಭೆಯೂ ನೀಡಿಲ್ಲ. ಯಾರೊಬ್ಬರಿಗೂ ಒಂದು ನಿವೇಶನ ಹಂಚಿಲ್ಲ. ಬಗರ್ ಹುಕ್ಕುಂ ಸಾಗುವಳಿ ಜಮೀನು ಹಂಚಿಕೆ ಮಾಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ" ಎಂದರು.
ಹೊಸದಾಗಿ ವಿಶೇಷ ಅನುದಾನ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಚಾರವಾಗಿ ಲಿಖಿತ ರೂಪದಲ್ಲಿ ಮನವಿ ನೀಡಿ ಎಂದು ಸೂಚನೆ ನೀಡಿದ್ದೇನೆ. ಜಿಲ್ಲಾ ಮಂತ್ರಿಗಳ ಸಮ್ಮುಖದಲ್ಲಿ ಪ್ರತಿ ಪಂಚಾಯಿತಿಗೆ ಭೇಟಿ ನೀಡಲು ನಿರ್ಧರಿಸಿದ್ದು, ಒಂದು ದಿನಕ್ಕೆ ಮೂರು ಪಂಚಾಯಿತಿಗೆ ಭೇಟಿ ಮಾಡಲು ಆಲೋಚಿಸಿದ್ದೇವೆ. ಜನರ ಮನವಿ ಸಲ್ಲಿಕೆಗೆ ಅರ್ಜಿ ಸಿದ್ಧಪಡಿಸಿದ್ದೇವೆ. ನಿವೇಶನ, ಪಡಿತರ ಚೀಟಿ, ಗ್ಯಾರಂಟಿ ಯೋಜನೆ, ಪಿಂಚಣಿ, ಪೋಡಿ, ಜಮೀನು ಖಾತೆ, ಕುಡಿಯುವ ನೀರಿನ ಸಮಸ್ಯೆ, ಪಾಲಿಕೆಗೆ ಸಂಬಂಧಿತ ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಸಂಬಂಧಿಸಿದಂತೆ ಅರ್ಜಿ ಸಿದ್ಧಪಡಿಸಿದ್ದೇವೆ. ಕೆಲವರು ಸಮುದಾಯ ಭವನ ಕೇಳಿದರೆ, ಮತ್ತೆ ಕೆಲವರು ದೇವಸ್ಥಾನ ಜೀರ್ಣೋದ್ಧಾರಕ್ಕೆ ಮನವಿ ಮಾಡುತ್ತಾರೆ."
ಬೆಂಗಳೂರಿನಲ್ಲಿ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಎಂಬ ಜನಸ್ಪಂದನ ಕಾರ್ಯಕ್ರಮ ಮಾಡಿದ್ದೆ. ಅದೇ ರೀತಿ ಚನ್ನಪಟ್ಟಣದಲ್ಲಿ ಮಾಡಲು ನಿರ್ಧರಿಸಿದ್ದೇವೆ. ಈ ಕಾರ್ಯಕ್ರಮ ಮಾಡುವ ಮುನ್ನ ಎಲ್ಲರ ಮನೆ ಬಾಗಿಲಿಗೆ ಅರ್ಜಿಯನ್ನು ತಲುಪಿಸುತ್ತೇವೆ. ಜನ ಕಾರ್ಯಕ್ರಮಕ್ಕೆ ಬರುವ ದಿನ ಅರ್ಜಿ ತಂದು ಕೊಡಬೇಕು" ಎಂದು ತಿಳಿಸಿದರು.
ಹೊಸ ಅಧ್ಯಾಯ ಆರಂಭ:ಇಷ್ಟೆಲ್ಲ ಸಮಸ್ಯೆ ಹೇಳುತ್ತಿದ್ದೀರಿ. ಈ ಹಿಂದೆ ಇದ್ದ ಶಾಸಕರು ಜನರ ಸಮಸ್ಯೆ ಕೇಳಿಲ್ಲವೇ ಎಂದು ಕೇಳಿದಾಗ, "ಅದು ಮುಗಿದ ಅಧ್ಯಾಯ. ಅದರ ಬಗ್ಗೆ ನಾನು ಯಾಕೆ ಮಾತನಾಡಲಿ. ಈಗ ಹೊಸ ಅಧ್ಯಾಯ ಆರಂಭವಾಗಲಿದೆ. ಕನಕಪುರದಲ್ಲಿ ನಾನು ಅಷ್ಟೋ ಇಷ್ಟೋ ಸಹಾಯ ಮಾಡಿದ್ದೇನೆ. ಜನ ಕೂಡ ಅದಕ್ಕೆ ಗೌರವ ನೀಡುತ್ತಾ ಬಂದಿದ್ದಾರೆ. ನಾನು ಈ ಹಿಂದೆ ನಾಲ್ಕು ಬಾರಿ ಈ ಭಾಗದ ಶಾಸಕನಾಗಿದ್ದಾಗ ಆಗಾಗ್ಗೆ ಪಂಚಾಯಿತಿಗಳಿಗೆ ಅಧಿಕಾರಿಗಳನ್ನು ಕರೆದುಕೊಂಡು ಹೋಗುತ್ತಿದೆ. ಈ ಜನರ ಋಣ ತೀರಿಸಲು ಒಂದು ಅವಕಾಶ ಇದೆ. ಅದನ್ನು ಬಳಸಿಕೊಳ್ಳುತ್ತೇನೆ" ಎಂದು ತಿಳಿಸಿದರು.
ಜನರ ಋಣ ತೀರಿಸಲು ಬಂದಿದ್ದೇನೆ:ನೀವು ಹೇಳಿದ ಹೊಸ ಅಧ್ಯಾಯ ಭಾರಿ ಚರ್ಚೆಯಾಗುತ್ತಿದೆ. ಉಪಚುನಾವಣೆಯಲ್ಲಿ ನೀವೇ ಸ್ಪರ್ಧೆ ಮಾಡುತ್ತೀರಾ ಎಂದು ಕೇಳಿದಾಗ, "ಇದು ಜನರ ತೀರ್ಪು, ಪಕ್ಷದ ತೀರ್ಮಾನಕ್ಕೆ ಬಿಟ್ಟದ್ದು. ಈಗ ಆ ಬಗ್ಗೆ ಚರ್ಚೆ ಬೇಡ. ನಮ್ಮ ಸರ್ಕಾರ ಇನ್ನು ನಾಲ್ಕು ವರ್ಷ ಸುಭದ್ರವಾಗಿ ಇರಲಿದೆ. ಸಧ್ಯ ಈ ಜನರ ಋಣ ತೀರಿಸಲು ಬಂದಿದ್ದೇನೆ. ಇಲ್ಲಿನ ಪಟ್ಟಣದ ಸುತ್ತಮುತ್ತಲ ನೂರು ಎಕರೆ ಜಾಗದಲ್ಲಿ ನಿವೇಶನ ಹಂಚಲು ತೀರ್ಮಾನಿಸಿದ್ದೇವೆ. ಕನಕಪುರದಲ್ಲಿ 100 ಎಕರೆ ನಿವೇಶನ ಹಂಚಿದ್ದು, ರಾಮನಗರದಲ್ಲಿ 50 ಎಕರೆ ಸಿದ್ಧಪಡಿಸಿದ್ದೇವೆ. ಚನ್ನಪಟ್ಟಣದಲ್ಲಿ ನಿವೇಶನ ಹಂಚಿಕೆ ಮಾಡಿಲ್ಲ. ಅದು ಅವರ ಕಾರ್ಯವೈಖರಿ ಅದನ್ನು ನಾವು ಪ್ರಶ್ನೆ ಮಾಡುವುದು ಬೇಡ. ನಮಗೆ ಉಪಕಾರ ಸ್ಮರಣೆ ಇದೆ. ಜನರಿಗೆ ಸಹಾಯ ಮಾಡದೇ ಇರಲು ಆಗುವುದಿಲ್ಲ" ಎಂದು ತಿಳಿಸಿದರು.
ಇಲ್ಲಿ ಗೆದ್ದು ಸಿಎಂ ಆಗುವ ಆಸೆ ಇದೆಯೇ ಎಂದು ಕೇಳಿದಾಗ, "ಒಂದೇ ದಿನ ಹೆಚ್ಚಿನ ಚರ್ಚೆ ಬೇಡ" ಎಂದು ತಿಳಿಸಿದರು. ಕನಕಪುರ ಹಾಗೂ ಚನ್ನಪಟ್ಟಣಕ್ಕೂ ಇರುವ ವ್ಯತ್ಯಾಸವೇನು ಎಂದು ಕೇಳಿದಾಗ, "ಇಲ್ಲಿ ಒಬ್ಬರಿಗೂ ಒಂದು ನಿವೇಶನ, ಮನೆ, ಜಮೀನು ನೀಡಿಲ್ಲ. ಒಂದು ವೇಳೆ ಕೊಟ್ಟಿದ್ದರೆ ಲೆಕ್ಕ ನೀಡಲಿ" ಎಂದು ತಿಳಿಸಿದರು.
ರಾಜ್ಯದ ಅಭಿವೃದ್ಧಿ ಮೇಲೆ ನಮ್ಮ ದೃಷ್ಟಿ ಇದೆ:ಚನ್ನಪಟ್ಟದ ಮೇಲೆ ಡಿ.ಕೆ ಸಹೋದರರ ವಕ್ರದೃಷ್ಟಿ ಬಿದ್ದಿದೆ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, "ನನಗೆ ಇಡೀ ಕರ್ನಾಟಕ ರಾಜ್ಯದ ಮೇಲೆ, ರಾಜ್ಯದ ಎಲ್ಲಾ ಜನರ ಅಭಿವೃದ್ಧಿಗೆ ನಮ್ಮ ದೃಷ್ಟಿ ಇದೆ. ಅವರು ತಮ್ಮ ಖುಷಿಗೆ ಏನೋ ಮಾತಾಡಿಕೊಳ್ಳುತ್ತಾರೆ. ಅದಕ್ಕೆ ನಾನೇಕೆ ಬೇಸರ ಮಾಡಿಕೊಳ್ಳಲಿ. ನಾನು ಯಾರಿಗೂ ಉತ್ತರ ಕೊಡುವುದಿಲ್ಲ. ನಾನು ಏನು ಮಾಡಬಲ್ಲೆ ಎಂಬುದಷ್ಟೇ ನನಗೆ ಮುಖ್ಯ" ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳನ್ನು ವಶಪಡಿಸಿಕೊಂಡಿರುವ ಕಾಂಗ್ರೆಸ್ ಚನ್ನಪಟ್ಟಣ ವಶಪಡಿಸಿಕೊಳ್ಳುವುದೇ ಎಂದು ಕೇಳಿದಾಗ, "ನೋಡೋಣ, ಕಾಲವೇ ತೀರ್ಮಾನ ಮಾಡಲಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಬೆಂಗಳೂರಿಗರಿಗೆ ಸದ್ಯದಲ್ಲೇ ನೀರಿನ ದರ ಏರಿಕೆ ಶಾಕ್; ಹೀಗಂದ್ರು ಡಿಸಿಎಂ ಡಿಕೆ ಶಿವಕುಮಾರ್ - DCM DK Shivakumar