ಬೆಂಗಳೂರು :ಭೂ ಮಂಜೂರಾತಿ ಸಮಿತಿ ಒಬ್ಬ ವ್ಯಕ್ತಿಗೆ ಭೂಮಿಯನ್ನು ಮಂಜೂರು ಮಾಡಲು ಶಿಫಾರಸು ಮಾಡಿದ ಬಳಿಕ ಅದಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಅವರು ಕಾನೂನು ಪ್ರಕಾರ ಸಾಗುವಳಿ ಚೀಟಿ (ಅನುದಾನ ಪ್ರಮಾಣಪತ್ರ) ವಿತರಣೆ ಮಾಡುವುದು ಆದ್ಯಕರ್ತವ್ಯವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.
ತನ್ನ ತಂದೆ ಪರವಾಗಿ ಭೂ ಮಂಜೂರಾತಿ ಸಮಿತಿಯ ಶಿಫಾರಸಿನಂತೆ ಸಾಗುವಳಿ ಚೀಟಿ ವಿತರಿಸಲು ತಹಶೀಲ್ದಾರ್‌ಗೆ ನಿರ್ದೇಶಿಸುವಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೆಗೌಡನ ಹಳ್ಳಿಯ ನಿವಾಸಿ ಎ.ವಿ. ಮುನಿಯಪ್ಪ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರು ಕರ್ನಾಟಕ ಭೂ ಕಂದಾಯ ನಿಯಮಗಳ ಸೆಕ್ಷನ್ 108ಡಿ(3) ಅಡಿಯಲ್ಲಿ ಈಗಾಗಲೇ ಭೂ ಮಂಜೂರಾತಿ ಸಮಿತಿಯಿಂದ ಕಾನೂನು ಬದ್ಧವಾಗಿ ಶಿಫಾರಸು ಪಡೆದುಕೊಂಡಿದ್ದಾರೆ. ಆ ಶಿಫಾರಸಅನ್ನು ತಹಶೀಲ್ದಾರ್ ಅವರು ಅಂಗೀಕರಿಸುವುದು ಮತ್ತು ನಿಗದಿತ ಕಾನೂನು ಕಾರ್ಯವಿಧಾನಕ್ಕೆ ಅನುಗುಣವಾಗಿ ಸಾಗುವಳಿ ಚೀಟಿ ವಿತರಣೆಗೆ ಮಾಡುವುದಕ್ಕೆ ಬಾಧ್ಯರಾಗಿರುತ್ತಾರೆ ಎಂದು ಪೀಠ ಹೇಳಿದೆ.
ಅಲ್ಲದೆ, ಈ ಪ್ರಕರಣದಲ್ಲಿ ಅರ್ಜಿದಾರರು ಕಾನೂನಿನ ಆದೇಶಿಸದಂತೆ ಅಗತ್ಯವಾದ ಮೊತ್ತವನ್ನು ಠೇವಣಿ ಇಡುವುದಕ್ಕೆ ಸಿದ್ಧರಿದ್ದಾರೆ. ಭೂ ಅನುದಾನ ಸಮಿತಿಯು ಅರ್ಜಿದಾರರ ತಂದೆ ಅನಧಿಕೃತವಾಗಿ ಬಳಕೆ ಮಾಡುತ್ತಿದ್ದ ಜಮೀನನ್ನು ಕ್ರಮ ಬದ್ಧಗೊಳಿಸಲು ಶಿಫಾರಸು ಮಾಡಿರುವುದರಿಂದ ಅರ್ಜಿದಾರರು ಈ ನ್ಯಾಯಾಲಯದಿಂದ ಸೂಕ್ತ ಆದೇಶವನ್ನು ಪಡೆಯುವ ಹಕ್ಕು ಹೊಂದಿದ್ದಾರೆ ಎಂದು ಪೀಠ ಹೇಳಿದೆ.