ಬೆಂಗಳೂರು:ರಾಮನಗರ ಜಿಲ್ಲೆ ಕನಕರಪುರ ಗ್ರಾಮದಲ್ಲಿ 10.33 ಗುಂಟೆ ವಿಸ್ತೀರ್ಣದ ಕೆಂಕೇರಮ್ಮ ಕೆರೆ ಪ್ರದೇಶದಲ್ಲಿ ಒಟ್ಟು 4 ಎಕರೆ 37 ಗುಂಟೆ ಜಾಗ ಒತ್ತುವರಿ ಮಾಡಿ, ನಿವೇಶನ ರಚಿಸಿ ಹಂಚಲಾಗಿದ್ದು, ಸಮುದಾಯ ಭವನ, ಸರ್ಕಾರಿ ಪ್ರಾಥಮಿಕ ಶಾಲೆ ನಿರ್ಮಿಸಲಾಗಿದೆ ಎಂದು ಕನಕಪುರ ತಾಲೂಕು ತಹಶೀಲ್ದಾರ್ ಹೈಕೋರ್ಟ್‌ಗೆ ವರದಿ ಸಲ್ಲಿಸಿದರು.
ಕೆಂಕೇರಮ್ಮ ಕೆರೆ ಜಾಗದಲ್ಲಿ ಒತ್ತುವರಿ ಮಾಡಲಾಗಿದೆ ಮತ್ತು ಸಂಸದ ಡಿ.ಕೆ.ಸುರೇಶ್ ಬರೆದ ಪತ್ರದ ಮೇರೆಗೆ ಕನಕಪುರ ನಗರಸಭೆ ಕೆರೆ ಜಾಗವನ್ನು ಸಮುದಾಯ ಭವನ ನಿರ್ಮಿಸಲು ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯ (ಎಸ್‌ಡಿಬಿ) ಸ್ವಾಧೀನಕ್ಕೆ ನೀಡಿದೆ ಎಂದು ಆಕ್ಷೇಪಿಸಿ ರವಿ ಕುಮಾರ್ ಕಂಚನಹಳ್ಳಿ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು.
ಈ ಅರ್ಜಿ ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠಕ್ಕೆ ತಹಶೀಲ್ದಾರ್ ವರದಿ ಒಪ್ಪಿಸಿದರು. ಸರ್ಕಾರಿ ವಕೀಲರು ಹಾಜರಾಗಿ, ಹೈಕೋರ್ಟ್ ನಿರ್ದೇಶನದ ಮೇರೆಗೆ ಕನಕಪುರ ತಾಲೂಕು ತಹಸೀಲ್ದಾರ್ ಡಾ.ಸ್ಮಿತಾ ರಾಮು ಅವರು ಕೆರೆ ಜಾಗಕ್ಕೆ ಸಂಬಂಧಿಸಿದ ದಾಖಲೆ ಪರಿಶೀಲಿಸಿ ಪ್ರಮಾಣ ಪತ್ರ ರೂಪದಲ್ಲಿ ವಸ್ತುಸ್ಥಿತಿ ವರದಿಯನ್ನು 2023ರ ಡಿ.19ರಂದು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು. ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಪ್ರಮಾಣ ಪತ್ರ ಪರಿಶೀಲಿಸಿ ಅಭಿಪ್ರಾಯ ತಿಳಿಸಲು ಅರ್ಜಿದಾರಿಗೆ ಎರಡು ವಾರ ಕಾಲಾವಕಾಶ ನೀಡಿ ವಿಚಾರಣೆಯನ್ನು ಫೆ.16ಕ್ಕೆ ಮುಂದೂಡಿತು.
ಪ್ರಮಾಣ ಪತ್ರದಲ್ಲಿರುವ ಅಂಶಗಳು:ಹೈಕೋರ್ಟ್ ಸೂಚನೆಯ ಮೇರೆಗೆ ಕನಕಪುರ ಗ್ರಾಮದ ಸರ್ವೇ ನಂ.21 ರಲ್ಲಿನ 10 ಎಕರೆ 33 ಗುಂಟೆ ವಿಸ್ತೀರ್ಣದಲ್ಲಿರುವ ಕೆಂಕೆರಮ್ಮ ಕೆರೆ ಜಾಗದ ಸರ್ವೇ ನಡೆಸಲಾಗಿದೆ. 10.33 ಎಕರೆ ಕೆರೆ ಜಾಗದ ಪೈಕಿ ಸದ್ಯ 5.36 ಎಕರೆ ಜಾಗ ಖಾಲಿಯಿದೆ. ಉಳಿದ ಜಾಗದ ಪೈಕಿ 1.17 ಎಕರೆ ವಿಸ್ತೀರ್ಣದಲ್ಲಿ ಎಸ್‌ಡಿಬಿ ನಿವೇಶನ ರಚಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಲಾಗಿದೆ. 8 ಗುಂಟೆ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಿದೆ. ಈ ನಿವೇಶನದಲ್ಲಿ ವಸತಿ ಮನೆ ನಿರ್ಮಿಸಿ, ಜನ ವಾಸವಾಗಿದ್ದಾರೆ.