ಚಿಕ್ಕಮಗಳೂರು:ಇತ್ತೀಚೆಗೆ ಸಿಎಂ ಕಚೇರಿಯಲ್ಲಿ ಶರಣಾಗಿದ್ದ ಆರು ಜನ ನಕ್ಸಲರನ್ನ ಜಿಲ್ಲಾ ಪೊಲೀಸರು ವಿಚಾರಣೆ ಹಾಗೂ ಸ್ಥಳ ಪರಿಶೀಲನೆಗೆ ಜಿಲ್ಲೆಗೆ ಕರೆತಂದಿದ್ದಾರೆ. ಮುಂಡಗಾರು ಲತಾ, ಜಯಣ್ಣ, ಸುಂದರಿ, ವನಜಾಕ್ಷಿ, ವಸಂತ್ ಹಾಗೂ ಜೀಶ ಅವರನ್ನು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಕರೆತರಲಾಗಿದೆ. ಈ ವೇಳೆ ಎಎನ್ಎಫ್ ಪೊಲೀಸರ ಭದ್ರತೆ ಒದಗಿಸಲಾಗಿತ್ತು.
ಮುಂಡಗಾರು ಲತಾ 33, ವನಜಾಕ್ಷಿ 15, ಸುಂದರಿ-ಜಯಣ್ಣ ಮೇಲೆ ತಲಾ 3 ಕೇಸ್ ದಾಖಲಾಗಿದ್ದವು. ವಸಂತ್ ಹಾಗೂ ಜೀಶ ಮೇಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಕರಣಗಳಿಲ್ಲ. ಎನ್ಐಎ ಕೋರ್ಟಿನಿಂದ ವಿಚಾರಣೆಗಾಗಿ ಅನುಮತಿ ಪಡೆದಿರುವ ಪೊಲೀಸರು, ಶರಣಾದ ನಕ್ಸಲರನ್ನು ಜಿಲ್ಲೆಗೆ ಕರೆದುಕೊಂಡು ಬಂದಿದ್ದು, 14 ದಿನಗಳವರೆಗೆ ಅವರು ಪೊಲೀಸ್ ಕಸ್ಟಡಿಯಲ್ಲಿ ಇರಲಿದ್ದಾರೆ.
ಈ ಆರು ಜನ ನಕ್ಸಲರ ವಿಚಾರಣೆ ನೇತೃತ್ವವನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಡಿವೈಎಸ್ಪಿ ಹಾಗೂ ಉಡುಪಿ ಜಿಲ್ಲೆಯ ಡಿವೈಎಸ್ಪಿ ಅವರು ನಿರ್ವಹಿಸಲಿದ್ದಾರೆ. ಇಂದಿನಿಂದ ಪ್ರಕರಣಗಳ ಬಗ್ಗೆ ವಿಚಾರಣೆ ಆರಂಭವಾಗಲಿದೆ. ಶೃಂಗೇರಿ, ಜಯಪುರ, ಕೊಪ್ಪ ಠಾಣೆಯಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನು ಈಗಾಗಲೇ ಪೊಲೀಸರು, ನಕ್ಸಲರ ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.
ಮುಖ್ಯ ವಾಹನಿಗೆ ಬಂದ ನಕ್ಸಲರು:ಜನವರಿ 8 ರಂದು 6 ಜನ ನಕ್ಸಲರು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲು ಸಮಯ ನಿಗದಿ ಆಗಿತ್ತು. ಆದರೆ ಕೊನೆ ಕ್ಷಣದಲ್ಲಿ ಸಿಎಂ ಕಚೇರಿಯಲ್ಲಿ ಶರಣಾಗತಿಗೆ ಸ್ಥಳ ಬದಲಾವಣೆ ಮಾಡಿದ್ದರಿಂದ ಭದ್ರತೆಯಲ್ಲಿ ನಕ್ಸಲರನ್ನು ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಬಳಿಕ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ನಕ್ಸಲರು ಶರಣಾಗಿದ್ದರು.