ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳಿಕೆ ಹಾಸನ:ಲೋಕಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಸನದಿಂದಲೇ ಸ್ಪರ್ಧೆ ಮಾಡಿದರೇ ಜೆಡಿಎಸ್ ಕಾರ್ಯಕರ್ತರಿಗೆ ಸ್ಪೂರ್ತಿ ಜೊತೆಗೆ ಉಳಿದ ಅಭ್ಯರ್ಥಿಗಳಿಗೂ ಶಕ್ತಿ ನೀಡಿದಂತಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳಿದ್ದಾರೆ.
ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಹಾಸನದಿಂದ ಸ್ಪರ್ಧೆ ಮಾಡಿದರೆ ಒಳ್ಳೆಯದು, ಅದರಿಂದ ಇಡೀ ರಾಜ್ಯದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು, ಕಾರ್ಯಕರ್ತರನ್ನು ಹುರಿದುಂಬಿಸಿದಂತಾಗುತ್ತದೆ. ಕಾರ್ಯಕರ್ತರಿಗೆ ಹೊಸ ಪರಿವರ್ತನಾ ಶಕ್ತಿ ಕೊಟ್ಟಂತೆ ಆಗುತ್ತದೆ ಎಂದರು. ಬಿಜೆಪಿ - ಜೆಡಿಎಸ್ ಮೈತ್ರಿಯಲ್ಲಿ ಮಂಡ್ಯ, ಹಾಸನ ಕ್ಷೇತ್ರಗಳು ಜೆಡಿಎಸ್ ಪಾಲಾಗುತ್ತದೆಯೇ ಎಂಬ ಪ್ರಶ್ನೆಗೆ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ನಮ್ಮ ತಾತ ಡಿಕ್ಲೇರ್ ಮಾಡಿದರೆ ಲೋಕಸಭೆ ಚುನಾವಣೆಯಲ್ಲಿ ಹೆಚ್‌ಡಿಕೆ ಸ್ಪರ್ಧಿಸಲಿ.
ನಮ್ಮ ಅಭ್ಯರ್ಥಿ ಬಗ್ಗೆ ಯಾವುದೇ ರೀತಿ ಗೊಂದಲವಿಲ್ಲ. ನಮ್ಮ ಅಭ್ಯರ್ಥಿ ಬಗ್ಗೆ ಸಂಪೂರ್ಣ ಸ್ಪಷ್ಟತೆ ಇದೆ. ನಮ್ಮ ಜಿಲ್ಲೆಯಲ್ಲಿ ಏನು ಕೆಲಸ ಮಾಡುಬೇಕೋ, ಕಾರ್ಯಕರ್ತರಿಗೆ ಶಕ್ತಿ ತುಂಬಬೇಕೋ ಅದನ್ನು ನಾನು, ರೇವಣ್ಣ ಅವರು ಮಾಡುತ್ತಿದ್ದೇವೆ. ಬೇರೆ ಜಿಲ್ಲೆ ಬಗ್ಗೆ ನನಗೆ ಮಾಹಿತಿ ಇಲ್ಲ, ನಮ್ಮ ಜಿಲ್ಲೆಯನ್ನು ನಾವು ನೋಡಬೇಕು, ಒಳ್ಳೆಯ ರೀತಿ ಚುನಾವಣೆ ಮುಗಿಸಬೇಕು. ಒಂದೊಳ್ಳೆ ಫಲಿತಾಂಶ ಕೊಡಬೇಕು, ಕಾರ್ಯಕರ್ತರ ಶ್ರಮಕ್ಕೆ ಒಳ್ಳೆಯ ಪ್ರತಿಫಲ ಸಿಗಬೇಕು ಅದೇ ನಮ್ಮ ಉದ್ದೇಶ ಎಂದರು.
ಕೊನೆಗೆ ಲೋಕಸಭೆಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರದಲ್ಲಿ ನನಗೆ ಮಾಹಿತಿಯಿಲ್ಲ, ನನಗೇನೂ ಗೊತ್ತಿಲ್ಲ, ನಮ್ಮ ನಮ್ಮ ಜಿಲ್ಲೆ ಬಿಟ್ಟು ಹೊರಗಡೆ ಜಿಲ್ಲೆಯ ಬಗ್ಗೆ ಮಾಹಿತಿಯಿಲ್ಲ ಎಂದು ಸುಮ್ಮನಾದರು.
ಸಿಎಂ ಉದ್ಘಾಟನೆಗೆ ಹೆಚ್.ಡಿ.ರೇವಣ್ಣ ವ್ಯಂಗ್ಯ: ನಮ್ಮ ಅವಧಿಯಲ್ಲಿ ಮಾಡಲಾದ ಅಭಿವೃದ್ಧಿ ಕೆಲಸಗಳಿಗೆ ಸಿಎಂ ಉದ್ಘಾಟನೆ ಮಾಡಲು ಮಾ.1 ರಂದು ಆಗಮಿಸುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ವ್ಯಂಗವಾಡಿದ್ದಾರೆ. ಮಾಧ್ಯಮದೊಂದಿಗೆ ಸೋಮವಾರ ಮಾತನಾಡಿದ ಅವರು, ಹಾಸನ ಜಿಲ್ಲೆಗೆ ಯೋಜನೆಗಳನ್ನು ಕೊಟ್ಟಿರುವುದು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಅವಧಿಯಲ್ಲಿಯೇ ಹೊರತು ಕಾಂಗ್ರೆಸ್ ಸರ್ಕಾರದಲ್ಲಿ ಅಲ್ಲ. ಸಿಎಂ ನಾವು ಮಾಡಿರುವ ಕೆಲಸಗಳ ಉದ್ಘಾಟನೆ ಮಾಡುತ್ತಾರೆ. ಇದಕ್ಕಾಗಿ ಜಿಲ್ಲಾಧಿಕಾರಿಗಳು ಎಲ್ಲ ಅಧಿಕಾರಿಗಳಿಗೆ ಇಷ್ಟಿಷ್ಟು ಜನ ಕರೆದುಕೊಂಡು ಬರಬೇಕೆಂದು ಕಟ್ಟಪ್ಪಣೆ ಮಾಡಿದ್ದಾರೆ ಎಂದು ಟೀಕಿಸಿದರು.
ನಮ್ಮ ಅವಧಿಯಲ್ಲಿ ನಿರ್ಮಾಣವಾಗಿ ಈಗಾಗಲೇ ಜನರಿಗೆ ಸೇವೆ ನೀಡುತ್ತಿರುವ ಕಟ್ಟಡಗಳು ಈಗ ಎರಡೆರಡು ಬಾರಿ ಉದ್ಘಾಟನೆ ಆಗುತ್ತಿವೆ. ನಮ್ಮೂರಿನ ಪಶು ಆಸ್ಪತ್ರೆ ಉದ್ಘಾಟನೆ ಆಗಿ ಒಂದು ವರ್ಷ ಆಗಿದೆ. ಅದನ್ನೂ ಉದ್ಘಾಟನೆ ಮಾಡೋಣ ಅಂತ ಡಿಸಿಯವರು ಹೇಳುತ್ತಿದ್ದಾರೆ. ಯಾವ್ಯಾವುದು ಉದ್ಘಾಟನೆ ಆಗಿದೆಯೋ ಅವುಗಳನ್ನು ಮತ್ತೆ ಉದ್ಘಾಟನೆ ಮಾಡಿಸುತ್ತಿದ್ದಾರೆ, ಡಿಸಿಯವರಿಗೆ ಅದೇ ಕೆಲಸವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಗೆ ಯೋಜನೆಗಳನ್ನು ಕೊಟ್ಟಿರುವುದು ಜೆಡಿಎಸ್ ಹೊರತು ಕಾಂಗ್ರೆಸ್ ಅಲ್ಲ.
ಇಲ್ಲಿ ಕುಡಿಯುವ ನೀರಿಲ್ಲದೇ ಜನ ಪರದಾಡುತ್ತಿದ್ದಾರೆ, ನೀರಿಗೆ ಹಾಹಾಕಾರ ಎದುರಾಗಿದ್ದು, ರೈತರ ಬೆಳೆ ನಷ್ಟಕ್ಕೆ ಪರಿಹಾರ ಇಲ್ಲವಾಗಿದೆ ಎಂದು ಆರೋಪಿಸಿದರು. ಎಂಟು ತಿಂಗಳ ಕಾಲ ರಾಜ್ಯ ಸರ್ಕಾರಕ್ಕೆ ಕೊಬ್ಬರಿಗೆ ಬೆಂಬಲ ಬೆಲೆ ಕೊಡಲು ಆಗಿರಲಿಲ್ಲ. ಚುನಾವಣೆ ಸಂದರ್ಭದಲ್ಲಿ ಕ್ವಿಂಟಾಲ್‌ಗೆ ಹದಿನೈದು ಸಾವಿರ ರೂ. ಕೊಡ್ತಿನಿ ಅಂದರು. ಈ ರಾಜ್ಯದ ಜನತೆಗೆ ದ್ರೋಹ ಬಗೆದಿರುವ ಸರ್ಕಾರ ಏನಾದರೂ ಇದ್ದರೆ ಅದು ಕಾಂಗ್ರೆಸ್ ಸರ್ಕಾರ. ದೇವೇಗೌಡರು ಹೋಗಿ ಕೇಂದ್ರದಲ್ಲಿ ಮೋದಿ ಅವರನ್ನು ಭೇಟಿ ಮಾಡಿದರು. ಅದರ ಪರಿಣಾಮವಾಗಿ ಕೊಬ್ಬರಿ ಖರೀದಿ ಮಾಡುತ್ತಿದ್ದಾರೆ. ಜಿಲ್ಲೆಯ ಜನ ಮೋದಿ, ದೇವೇಗೌಡರು, ಸಂಸದರು ಹಾಗೂ ಶಾಸಕರಿಗೆ ಧನ್ಯವಾದ ಹೇಳಬೇಕು ಎಂದು ಹೇಳಿದರು.
ಗ್ಯಾರಂಟಿಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ- ಎಂಪಿ ರೇಣುಕಾಚಾರ್ಯ:ರಾಜ್ಯ ಸರಕಾರ ಜಾರಿಗೆ ತಂದ ಗ್ಯಾರಂಟಿಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ಇನ್ನು ಕಾಂಗ್ರೆಸ್ ಸರಕಾರವು ದಿವಾಳಿ ಆಗಿದ್ದು, ಮುಂದೆ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ಸರ್ಕಾರ ದಿವಾಳಿಯಾಗಿದೆ, ರಾಜ್ಯ ಸರ್ಕಾರ ನೀಡಿರುವ ಯಾವುದೇ ಗ್ಯಾರಂಟಿ ಯೋಜನೆಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ಅನ್ನಭಾಗ್ಯ, ಶಕ್ತಿಯೋಜನೆ, ಗೃಹಲಕ್ಸ್ಮಿ, ಯುವನಿಧಿ, ಗೃಹಜ್ಯೋತಿ ಯೋಜನೆಗಳು ಅರ್ಧದಷ್ಟು ಜನರಿಗೂ ತಲುಪಿಲ್ಲ. ಇದನ್ನೆಲ್ಲ ರಾಜ್ಯದ ಜನ ಗಮನಿಸುತ್ತಿದ್ದಾರೆ. ಇವತ್ತು ಕಾಂಗ್ರೆಸ್ ಸೊಕ್ಕಿನಿಂದ ನಡೆಯುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ ವಾಗ್ದಾಳಿ ನಡೆಸಿದರು.
ಮುಂದುವರೆದು, ಸೂರ್ಯಚಂದ್ರ ಇರೋದು ಎಷ್ಟು ಸತ್ಯನೋ ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿ ಆಗೋದು ಅಷ್ಟೇ ಸತ್ಯ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಜನಪರ, ರೈತರ ಪರ ಎಲ್ಲ ವರ್ಗದವರ ಪರ ಆಡಳಿತ ನೀಡಿ ಹತ್ತು ವರ್ಷಗಳ ಕಾಲ ಯಶಸ್ವಿಯಾಗಿ ಅಧಿಕಾರ ನಡೆಸಿದ್ದಾರೆ. ದೇಶದಲ್ಲಿ ಎನ್.ಡಿ.ಎ. ಮೈತ್ರಿಕೂಟದಿಂದ ಸುಮಾರು 400 ಮಂದಿ ಈ ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮಂಡ್ಯದಿಂದಲೇ ಬಿಜೆಪಿ ಟಿಕೆಟ್ ಪಡೆಯುವ ವಿಶ್ವಾಸವಿದೆ: ಸುಮಲತಾ ಅಂಬರೀಶ್