ಕರ್ನಾಟಕ

karnataka

ETV Bharat / state

ಬೆಂಗಳೂರು: 110 ಗ್ರಾಮಗಳಿಗೆ ಮೇ ತಿಂಗಳ ವೇಳೆ ಕುಡಿಯಲು ಕಾವೇರಿ ನೀರು ಪೂರೈಕೆ: ಡಿಸಿಎಂ ಡಿಕೆ ಶಿವಕುಮಾರ್ - ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್

ಬೆಂಗಳೂರಿನ ಹೊರವಲಯದ 110 ಗ್ರಾಮಗಳಿಗೆ ಮೇ ತಿಂಗಳ ವೇಳೆ ಕುಡಿಯಲು ಕಾವೇರಿ ನೀರು ಪೂರೈಕೆ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರ ಪ್ರಶ್ನೆಗೆ ಉತ್ತರಿಸಿದರು.

DCM DK Shivakumar  ಡಿಸಿಎಂ ಡಿಕೆ ಶಿವಕುಮಾರ್  ಕಾವೇರಿ ನೀರು ಪೋರೈಕೆ  ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್  ವಿಧಾನಸಭೆ ಕಲಾಪ
110 ಗ್ರಾಮಗಳಿಗೆ ಮೇ ತಿಂಗಳ ವೇಳೆ ಕುಡಿಯಲು ಕಾವೇರಿ ನೀರು: ಡಿಸಿಎಂ ಡಿಕೆ ಶಿವಕುಮಾರ್

By ETV Bharat Karnataka Team

Published : Feb 21, 2024, 8:13 AM IST

ಬೆಂಗಳೂರು: "ಬೆಂಗಳೂರಿನ ಹೊರವಲಯದ 110 ಹಳ್ಳಿಗಳಿಗೆ ಮೇ ತಿಂಗಳ ವೇಳೆಗೆ ಕುಡಿಯಲು ಕಾವೇರಿ ನೀರು ಪೂರೈಸಲಾಗುವುದು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, "ಕುಡಿಯುವ ನೀರನ್ನು ಮುಂದಿನ ಮೇ ತಿಂಗಳಲ್ಲಿ ಪೂರೈಸಲಾಗುವುದು. ಆದರೆ, ಸೀವೇಜ್ ಪ್ಲಾಂಟ್ ಸೇರಿದಂತೆ ಇತರ ಕಾಮಗಾರಿಗಳು ಪೂರ್ಣಗೊಳ್ಳಲು ಎರಡು ವರ್ಷಗಳು ಬೇಕಾಗಬಹುದು" ಎಂದರು.

"ಯಶವಂತಪುರ ಕ್ಷೇತ್ರದಲ್ಲಿ ಅರಣ್ಯ ಭೂಮಿಯ ಪಕ್ಕದಲ್ಲಿ ಇರುವ ಬಿಡಿಎ ಬಡಾವಣೆಗಳಿಗೆ ನೀರು ಹರಿಸಲು ಇದ್ದಂತಹ ತೊಡಕುಗಳನ್ನು ನಿವಾರಿಸಲಾಗುವುದು. ಈಗಾಗಲೇ ಅರಣ್ಯ ಇಲಾಖೆಯವರ ಜೊತೆಗೆ ಚರ್ಚೆ ನಡೆಸಲಾಗಿದೆ. ಯಶವಂತಪುರ ಕ್ಷೇತ್ರ ದೊಡ್ಡದಾಗಿದ್ದು, ನಗರ ಭಾಗದಷ್ಟೇ ವಿಸ್ತೀರ್ಣವನ್ನು ಗ್ರಾಮೀಣ ಭಾಗ ಹೊಂದಿದೆ. ಎಲ್ಲ ಸಮಸ್ಯೆಗಳನ್ನು ನಾನೇ ಖುದ್ದಾಗಿ ಬಗೆಹರಿಸುತ್ತೇನೆ" ಎಂದು ಭರವಸೆ ನೀಡಿದರು.

ಬೆಂಗಳೂರಿನ ಪ್ರತಿ ಶಾಸಕರಿಗೆ 10 ಕೋಟಿ ಅನುದಾನ:ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೊಳವೆ ಬಾವಿಗಳನ್ನು ಕೊರೆಸುವ ಸಂಬಂಧ ಬಿಜೆಪಿ ಶಾಸಕರಾದ ಮುನಿರಾಜು ಮತ್ತು ಬೈರತಿ ಬಸವರಾಜು ಅವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, "ಬೆಂಗಳೂರಿನ ಎಲ್ಲ ಶಾಸಕರಿಗೂ 10 ಕೋಟಿ ರೂ. ಅನುದಾನ ನೀಡಿದ್ದು, ಇದನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳಬಹುದು. ಇತರ ಕಾಮಗಾರಿಗಳಿಗಿಂತ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗುವುದು. ಬಿಡಬ್ಲ್ಯೂಎಸ್ಎಸ್​ಬಿ ವ್ಯಾಪ್ತಿಯಲ್ಲಿ 11 ಸಾವಿರ ಕೊಳವೆ ಬಾವಿಗಳನ್ನು ಮತ್ತೆ ಕೊರೆಯಲು ಆದೇಶ ನೀಡಲಾಗಿದೆ" ಎಂದು ಹೇಳಿದರು.

"ಕೋವಿಡ್ ಕಾರಣದಿಂದ ಕಾವೇರಿ ನೀರು ಸರಬರಾಜು ಕಾಮಗಾರಿ ತಡವಾಗಿತ್ತು. ಅಲ್ಲಿಯವರೆಗೆ ರೀ- ಬೋರ್​ವೆಲ್, ಪಂಪ್ ದುರಸ್ತಿ ಸೇರಿದಂತೆ ಇತರ ಕೆಲಸಗಳಿಗೆ ಟೆಂಡರ್ ಕರೆಯಲಾಗಿದೆ. ಕೂಡಲೇ ಮುಂದಿನ ವಾರದೊಳಗೆ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಇಲಾಖೆ ವ್ಯಾಪ್ತಿಯಲ್ಲಿ 68 ಟ್ಯಾಂಕರ್ ಗಳು ಕಾರ್ಯನಿರ್ವಹಿಸುತ್ತಿವೆ" ಎಂದರು.

"ದಾಸರಹಳ್ಳಿಗೆ ಈಗಾಗಲೇ 5.24 ಲಕ್ಷ ಅನುದಾನವನ್ನು ನೀಡಲಾಗಿದೆ. ಲಕ್ಷ್ಮೀಪುರ ಸೇರಿದಂತೆ ದಾಸರಹಳ್ಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಕಾವೇರಿ ನೀರು ಪೂರೈಕೆ ಕಾಮಗಾರಿಯನ್ನು ನಡೆಸಲಾಗುವುದು. ದಾಸರಹಳ್ಳಿ ಕ್ಷೇತ್ರದಲ್ಲಿ ಕಾರ್ಖಾನೆಗಳು ಹೆಚ್ಚು ಇರುವ ಕಾರಣ ನೀರು ಹೆಚ್ಚು ಬಳಕೆಯಾಗುತ್ತಿದೆ. ಆದ ಕಾರಣ ವಸತಿ ಪ್ರದೇಶಗಳಿಗೆ ತೊಂದರೆಯಾಗುತ್ತಿದೆ. ಬೋರ್​ವೆಲ್ ನೀರು ಬಳಕೆಯ ಬಗ್ಗೆ ಈಗಾಗಲೇ ಕಾನೂನು ಇದ್ದು. ಈ ಬಗ್ಗೆಯೂ ಸದನದಲ್ಲಿ ಚರ್ಚೆ ಮಾಡಲಾಗುವುದು" ಎಂದು ಅವರು ತಿಳಿಸಿದರು.

"ಕೆ.ಆರ್. ಪುರಂ ಕ್ಷೇತ್ರದಲ್ಲಿ ನಾರಾಯಣಪುರ ಸೇರಿದಂತೆ ಕೆಲವೆಡೆ ನೀರು ತುಂಬುವ ಕೆಲಸ ಮಾಡಬೇಕಿದೆ. ಟ್ಯಾಂಕರ್ ಗಳು ರೂ.1,500 ವಸೂಲಿ ಮಾಡುತ್ತಿದ್ದು ಇದನ್ನು ರೂ. 500ಕ್ಕೆ ಇಳಿಸಬೇಕು ಎಂದು ಬೈರತಿ ಬಸವರಾಜು ಅವರು ಮನವಿ ಮಾಡಿದ್ದು. ಖಾಸಗಿ ನೀರು ಟ್ಯಾಂಕರ್ ದರ ಇಳಿಸಲು ಕಾನೂನು ತರಬಹುದು. ಇಲ್ಲಿ ಎಲ್ಲರೂ ಒಮ್ಮತಕ್ಕೆ ಬಂದರೆ ಇದನ್ನು ಜಾರಿಗೆ ತರಲು ಸಿದ್ಧ. ಈ ವಿಚಾರವಾಗಿ ವಿರೋಧ ಪಕ್ಷದ ನಾಯಕರಿಂದ ಒಂದು ಪತ್ರ ಬರೆಸಿ ಕೊಟ್ಟರೆ ಸಲಹೆಯನ್ನು ಪರಿಗಣಿಸುತ್ತೇವೆ" ಎಂದು ಹೇಳಿದರು.

ಬೆಂಗಳೂರಿಗೆ 1,450 ಎಂಎಲ್​ಡಿ ನೀರು ಸರಬರಾಜು:"ಅಂತರ್ಜಲ ನೀರಿನ ಅತಿ ಹೆಚ್ಚಿನ ಬಳಕೆ, ಶೋಷಣೆ ತಪ್ಪಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಈ ವಿಚಾರವಾಗಿ ಕಂದಾಯ ಇಲಾಖೆಯ ಬಳಿಯೂ ಚರ್ಚೆ ನಡೆಸಲಾಗುವುದು. ಬೆಂಗಳೂರಿಗೆ ಈಗ 1,450 ಎಂಎಲ್​ಡಿ ನೀರು ಸರಬರಾಜಾಗುತ್ತಿದೆ. ಈ ವರ್ಷ ಬರಗಾಲ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಈ ವಿಚಾರವಾಗಿ ಮೊನ್ನೆ ಬಿಜೆಪಿ ಶಾಸಕರಾದ ಸೋಮಶೇಖರ್ ಹಾಗೂ ಮುನಿರತ್ನ ಅವರು ಪ್ರಸ್ತುತ ಇರುವ ಕೊಳವೆ ಬಾವಿಗಳನ್ನು ಇನ್ನೂ 500 ಅಡಿ ಹೆಚ್ಚು ಕೊರೆಯಲು ಅವಕಾಶ ನೀಡಬೇಕು ಎಂಬ ಸಲಹೆ ನೀಡಿದ್ದಾರೆ. ಈ ವಿಚಾರವಾಗಿ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದು ವಿವರಿಸಿದರು.

ಇದನ್ನೂ ಓದಿ:ಕೋಲಾರಕ್ಕೆ ನೀರುಣಿಸುವ ಕೆಸಿ ವ್ಯಾಲಿ ಯೋಜನೆ ಬಗ್ಗೆ ಜನರಿಗೆ ತಪ್ಪು ಸಂದೇಶ ನೀಡಬೇಡಿ: ಕೃಷ್ಣ ಬೈರೇಗೌಡ

ABOUT THE AUTHOR

...view details