ಕರ್ನಾಟಕ

karnataka

ETV Bharat / state

ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಗ್ಗು ತಂದ ಸುಗ್ಗಿ - SUGGI SPECIAL IN UTTARA KANNADA - SUGGI SPECIAL IN UTTARA KANNADA

ಹೋಳಿ ಹಬ್ಬಕ್ಕೂ ಮುಂಚಿತವಾಗಿ ಕಾರವಾರದಲ್ಲಿ ಅನೇಕ ಸಮಾಜದವರು ತಮ್ಮ ಸಾಂಪ್ರದಾಯಿಕ ಕಲೆ ಸುಗ್ಗಿ ಕುಣಿತ ಆರಂಭಿಸಿದ್ದಾರೆ.

ಹಿಗ್ಗು ತಂದ ಸುಗ್ಗಿ
ಹಿಗ್ಗು ತಂದ ಸುಗ್ಗಿ

By ETV Bharat Karnataka Team

Published : Mar 24, 2024, 2:31 PM IST

ಹಿಗ್ಗು ತಂದ ಸುಗ್ಗಿ

ಕಾರವಾರ:ಹೋಳಿ ಹುಣ್ಣಿಮೆ ಹತ್ತಿರವಾದ ಬೆನ್ನಲ್ಲೇ ಉತ್ತರಕನ್ನಡ ಜಿಲ್ಲೆಯಲ್ಲಿ ಸುಗ್ಗಿಯ ಸಂಭ್ರಮ ಮುಗಿಲು ಮುಟ್ಟಿದೆ. ಜಿಲ್ಲೆಯಲ್ಲಿನ ಹಾಲಕ್ಕಿ, ಕೋಮಾರಪಂಥ, ಗ್ರಾಮ ಒಕ್ಕಲಿಗ, ನಾಮಧಾರಿ, ಅಂಬಿಗ, ಗುನಗಿ ಸೇರಿದಂತೆ ಅನೇಕ ಸಮಾಜದವರು ತಮ್ಮ ಸಾಂಪ್ರದಾಯಿಕ ಕಲೆಯಾದ ಸುಗ್ಗಿ ಕುಣಿತವನ್ನು ಹೋಳಿ ಹಬ್ಬಕ್ಕೂ ಮುಂಚಿತವಾಗಿ ಪ್ರಾರಂಭಿಸಿದ್ದಾರೆ.

ಹಬ್ಬಕ್ಕೆ ಏಳು, ಒಂಬತ್ತು ಇಲ್ಲವೇ 11 ದಿನಗಳ ಮುನ್ನ ಸುಗ್ಗಿ ಕಟ್ಟುವ ತಂಡ ಬಳಿಕ ಊರೂರು ತಿರುಗಿ ತಮ್ಮ ಸಮಾಜದವರ ಮನೆಗೆ ತೆರಳಿ ಕುಣಿತದ ಪ್ರದರ್ಶನ ನಡೆಸುತ್ತಿದ್ದಾರೆ. ಅದರಂತೆ ಅಂಕೋಲಾ ತಾಲೂಕಿನ ಅವರ್ಸಾದ ಕ್ಷತ್ರೀಯ ಕೋಮಾರಪಂಥದ ಸುಗ್ಗಿಯನ್ನು ಏಳು ವರ್ಷದ ಬಳಿಕ ಆರಂಭಿಸಲಾಗಿದೆ.

ತಮ್ಮ ಸಮುದಾಯದವರು ಇರುವಲ್ಲಿಗೆ ತೆರಳಿ ಸುಗ್ಗಿ ಕುಣಿತವನ್ನು ಪ್ರದರ್ಶಿಸುತ್ತಿದ್ದಾರೆ. ಹೋಳಿ ಹುಣ್ಣಿಮೆಗೂ 9 ದಿನಗಳ ಮುಂಚೆ ಸುಗ್ಗಿ ಕುಣಿತವನ್ನು ಪ್ರಾರಂಭಿಸಲಾಗಿದೆ. ಈಗಾಗಲೇ ತಮ್ಮ ಸಮುದಾಯದವರು ಇರುವ ಕಡೆಯ ಮನೆಗಳ ಮುಂದೆ ತೆರಳಿ ಸುಗ್ಗಿ ಕುಣಿತ ಆಡಲಾಗುತ್ತಿದೆ.

ಇದು ಅನಾದಿಕಾಲದಿಂದಲೂ ನಡೆದುಕೊಂಡ ಬಂದ ಪ್ರಕ್ರಿಯೆಯಾಗಿದೆ. ಕಳೆದ ಕೆಲ‌ವು ವರ್ಷಗಳಿಂದ ಸುಗ್ಗಿ ಆಡಿರಲಿಲ್ಲ. ಆದರೆ ಈ ಬಾರಿ ಊರೂರು ಸುತ್ತುತ್ತಾ ಸುಗ್ಗಿ ಆಡಲಾಗುತ್ತಿದೆ. ಹೀಗೆ ಆಡುವ ಸುಗ್ಗಿಯನ್ನು ಮನೆ ಬಾಗಿಲಿಗೆ ಕರೆಸಿ ಆಡಿಸಿದಲ್ಲಿ ಒಳ್ಳೆದಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ ಎನ್ನುತ್ತಾರೆ ಸಮುದಾಯದ ಹಿರಿಯರಾದ ನಾಗೇಂದ್ರ ಮಹಾದೇವ ನಾಯ್ಕ.

ಇನ್ನು ಈ ಸುಗ್ಗಿ ಕುಣಿತಕ್ಕೆ ತನ್ನದೇ ಆದ ವಿಶೇಷವಿದೆ. ಇಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು, ತಲೆಗೆ ಬಣ್ಣ ಬಣ್ಣದ ತುರಾಯಿ, ಪೇಟವನ್ನು ಕಟ್ಟಿ, ಪೊಗಡೆ ವೇಷಭೂಷಣ ಧರಿಸಿ ಸುಗ್ಗಿ ಕುಣಿಯುವುದು ಎಲ್ಲರ ಮನಸೆಳೆಯುತ್ತದೆ. ಇದರೊಂದಿಗೆ ಗುಮಟೆ, ಜಾಗಟೆಯ ಸದ್ದು, ವಾದ್ಯಗಳ ಹಿಮ್ಮೇಳ ಸುಗ್ಗಿ ಕುಣಿತಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಒಮ್ಮೆ ವೇಷತೊಟ್ಟು ಹಣೆಗೆ ಗಂಧವನ್ನು ಇಟ್ಟುಕೊಂಡು ಹೊರಟರೆ ಸುಗ್ಗಿ ಕುಣಿತ ಮುಗಿಸುವ ಏಳು ದಿನದವರೆಗೂ ವಾಪಸ್​ ಮನೆಗೆ ತೆರಳುವಂತಿಲ್ಲ.

ಜೊತೆಗೆ ಸಮಾಜದ ಮನೆಯವರ ಅಂಗಳದಲ್ಲಿ ಸುಗ್ಗಿ ಕುಣಿತ ಮಾಡಿದಾಗ ಅವರು ನೀಡುವ ಹಣ, ಊಟ ತಿಂಡಿ ಸ್ವೀಕರಿಸುವ ಪ್ರತೀತಿ ಇದೆ. ಸುಗ್ಗಿ ಆಡುವ ತಂಡದವರು ಒಂದು ತಿಂಗಳ ಮೊದಲೇ ತಯಾರಿಯನ್ನು ಆರಂಭಿಸುತ್ತಾರೆ. ಸುಗ್ಗಿ ಆಡುವಾಗ ತಲೆಯ ಮೇಲೆ ಹೊರುವ ತುರಾಯಿಗಳು ಎಷ್ಟಿರಬೇಕು ಎಂದು ನಿಗದಿಪಡಿಸಿಕೊಂಡು ಬಳಿಕ ಅವುಗಳನ್ನು ಸಿದ್ಧಪಡಿಸುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ.

ಇದಾದ ಬಳಿಕ ಹೋಳಿಗೆ ಎಂಟು ದಿನಗಳಿಗೆ ಮುನ್ನ ಸುಗ್ಗಿ ತಂಡದೊಂದಿಗೆ ಹೊರಟು ಸಮುದಾಯದ ಮನೆಗಳವರು ತಮ್ಮನ್ನು ಆಹ್ವಾನಿಸಿದಲ್ಲಿಗೆ ತೆರಳಿ ಕುಣಿತವನ್ನು ಪ್ರದರ್ಶನ ಮಾಡಲಾಗುತ್ತದೆ. ಹೀಗೆ ಬಂದವರಿಗೆ ಕಾಯಿ ವೀಳ್ಯದೆಲೆ ಹಾಗೂ ದೇಣಿಗೆ ನೀಡಲಾಗುತ್ತದೆ. ಹೀಗೆ ಮಾಡುವುದರಿಂದ ನಮ್ಮ‌‌ಮನೆಗಳಿಗೆ ಯಾವುದೇ‌ ರೋಗ ರುಜಿನಗಳು ಬಾರದಂತೆ ಕರಿ ದೇವರು ಕಾಪಾಡುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಆದರೆ ಸುಗ್ಗಿ ಕುಣಿತಕ್ಕೆ ಸಾಕಷ್ಟು ಖರ್ಚು ತಗಲುವುದರಿಂದ ಸರ್ಕಾರ ಈ ಬಗ್ಗೆ ಗಮನ ಹರಿಸಿ ಸಹಾಯದನ ಘೋಷಣೆ ಮಾಡಬೇಕು ಎಂದು ತಂಡದ ರವೀರಾಜ್​ ನಾಯ್ಕ ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಜಾನಪದ ಕಲೆಗಳು ವಿನಾಶದ ಅಂಚಿನಲ್ಲಿರುವ ಈ ದಿನಗಳಲ್ಲಿ ತಲೆ ತಲಾಂತರಗಳಿಂದ ಬಂದಿರುವ ಸಾಂಪ್ರದಾಯಿಕ ಸುಗ್ಗಿಕುಣಿತದ ಕಲೆಯನ್ನು ಇಂದಿಗೂ ನಡೆಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ. ಸುಗ್ಗಿಯಲ್ಲಿ ಮಕ್ಕಳು, ಯುವಕರೂ ಸಹ ಹಿರಿಯರೊಂದಿಗೆ ಒಟ್ಟಾಗಿ ಪಾಲ್ಗೊಳ್ಳುವುದರಿಂದ ಮುಂದಿನ ಪೀಳಿಗೆಗೂ ಆಚರಣೆಗಳನ್ನು ತಿಳಿಸಿಕೊಡುವಲ್ಲಿ ಸುಗ್ಗಿ ಕುಣಿತ ಸಹಕಾರಿಯಾಗಿರುವುದಂತೂ ಸತ್ಯ.

ABOUT THE AUTHOR

...view details