ಬೆಳಗಾವಿ:ರೋಗಿಯ ಕೈಗೆ ಕೊಳಲು ಕೊಟ್ಟು, ರೋಗಿ ಕೊಳಲು ಊದುತ್ತಿರುವಾಗಲೇ ಯಶಸ್ವಿಯಾಗಿ ಮೆದುಳು ಶಸ್ತ್ರಚಿಕಿತ್ಸೆ ಮಾಡಿ ಟ್ಯೂಮರ್ ಗೆಡ್ಡೆ ತೆಗೆಯುವ ಮೂಲಕ ಅಪರೂಪದ ದಾಖಲೆಗೆ ಕೊಲ್ಲಾಪುರದ ಕನೇರಿ ಮಠದ ಸಿದ್ಧಗಿರಿ ಆಸ್ಪತ್ರೆಯ ವೈದ್ಯರು ಪಾತ್ರವಾಗಿದ್ದಾರೆ. ಆಸ್ಪತ್ರೆಯ ನರಶಸ್ತ್ರ ಚಿಕಿತ್ಸಕ ಡಾ. ಶಿವಶಂಕರ್ ಮರಜಕ್ಕೆ ಹಾಗೂ ಅರವಳಿಕೆ ತಜ್ಞ ಪ್ರಕಾಶ ಭರಮಗೌಡ ಅವರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ವೈದ್ಯ ಲೋಕ ಅಚ್ಚರಿಯಿಂದ ತಮ್ಮತ್ತ ನೋಡುವಂತೆ ಮಾಡಿದ್ದಾರೆ.
ಕೊಳಲು ಊದುತ್ತಾ ಮಲಗಿರುವಾಗಲೇ ಶಸ್ತ್ರಚಿಕಿತ್ಸೆ:ರೋಗಿಗೆ ಯಾವುದೇ ತೊಂದರೆ ಆಗದಂತೆ, ಆರಾಮವಾಗಿ ಕೊಳಲು ಊದುತ್ತಾ ಮಲಗಿರುವಾಗಲೇ ಶಸ್ತ್ರಚಿಕಿತ್ಸೆ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ. ಈವರೆಗೂ ಒಟ್ಟು 103 ಮೆದುಳು ಶಸ್ತ್ರಚಿಕಿತ್ಸೆ ಮಾಡಿರುವ ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ವೈದ್ಯರ ತಂಡ, ಕೊಳಲು ಊದುತ್ತಿದ್ದ ವ್ಯಕ್ತಿಗೆ ಸುಮಾರು 5 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಅವೇಕ್ ಕ್ರೇನಿಯೊಟಮಿ ಶಸ್ತ್ರಚಿಕಿತ್ಸೆಗೆ ಸಿದ್ಧಗಿರಿ ಆಸ್ಪತ್ರೆ ಪ್ರಖ್ಯಾತಿ ಪಡೆದುಕೊಂಡಿದೆ. ವೈದ್ಯರ ಸಾಧನೆಗೆ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಆಪರೇಷನ್ ಸಕ್ಸಸ್ ಬಗ್ಗೆ ವೈದ್ಯರು ಹೇಳಿದ್ದಿಷ್ಟು:ಆಪರೇಷನ್ ಕುರಿತು ಡಾ.ಶಿವಶಂಕರ್ ಮರಜಕ್ಕೆ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, "ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಮಾಡುವಾಗ ರೋಗಿಗೆ ಅರವಳಿಕೆ ಇಂಜಕ್ಷನ್ ಕೊಟ್ಟು ಪ್ರಜ್ಞೆ ತಪ್ಪಿಸುತ್ತೇವೆ. ಆಗ ರೋಗಿಗೆ ಯಾವುದೇ ಅರಿವು ಇರುವುದಿಲ್ಲ. ಆದರೆ, ಇಲ್ಲಿ ನಾವು ತಲೆಯ ಮೇಲಿನ ಭಾಗಕ್ಕೆ ಮಾತ್ರ ಅರವಳಿಕೆ ಕೊಟ್ಟಿದ್ದೆವು. ಆ ರೋಗಿಯ ದೇಹದ ಬಾಯಿ, ಮೂಗು, ಕಣ್ಣು, ಕೈ, ಕಾಲುಗಳು ಸೇರಿ ಎಲ್ಲಾ ಭಾಗಗಳು ಕಾರ್ಯನಿರ್ವಹಿಸುತ್ತಿದ್ದವು. ಹೀಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೋಗಿಗೆ ಕೊಳಲು ನುಡಿಸುವುದು ಹವ್ಯಾಸ. ಹಾಗಾಗಿ, ಅವರಿಗೆ ಕೊಳಲು ನುಡಿಸಲು ಕೊಟ್ಟೆವು. ನಾವು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ಅವರ ಮೆದುಳಿನಲ್ಲಿದ್ದ ಗಡ್ಡೆ ಹೊರ ತೆಗೆದೆವು" ಎಂದು ವಿವರಿಸಿದರು.