ಕರ್ನಾಟಕ

karnataka

ETV Bharat / state

ಒತ್ತುವರಿ ಆರೋಪ: ಲೋಕಾಯುಕ್ತ ಕುಂದುಕೊರತೆ ವಿಭಾಗಕ್ಕೆ ಮನವಿ ಸಲ್ಲಿಸಲು ಹೈಕೋರ್ಟ್ ಸೂಚನೆ - High Court - HIGH COURT

ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಸುತ್ತ ಪಾದಚಾರಿ ಮಾರ್ಗ ಒತ್ತುವರಿ ಆರೋಪದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್​ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

high court
ಹೈಕೋರ್ಟ್​

By ETV Bharat Karnataka Team

Published : Apr 25, 2024, 10:53 PM IST

ಬೆಂಗಳೂರು: ನಗರದ ಕೆ.ಆರ್.ಮಾರುಕಟ್ಟೆ, ಅವೆನ್ಯೂ ಮತ್ತು ಎಸ್‌ಜೆಪಿ ರಸ್ತೆಗಳ ಪಾದಚಾರಿ ಮಾರ್ಗ, ರಸ್ತೆಯ ಎರಡು ಬದಿಯಲ್ಲಿ ಬೀದಿ ಬದಿ ವ್ಯಾಪಾರಿಗಳು ಹಣ್ಣು ಮತ್ತು ಹೂ ಮಾರಾಟ ಮಾಡುವುದನ್ನು ಶಾಶ್ವತವಾಗಿ ನಿರ್ಬಂಧಿಸಲು ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಲೋಕಾಯುಕ್ತಕ್ಕೆ ಕುಂದುಕೊರತೆ ವಿಭಾಗಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ನಗರದ ಎನ್.ಎಸ್.ಪಾಳ್ಯ ನಿವಾಸಿ ಬಿ.ಸುನೀಲ್ ಕುಮಾರ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿತು. ಈ ಸಂದರ್ಭದಲ್ಲಿ ತರಕಾರಿ ಮಾರುಕಟ್ಟೆ ಸ್ಥಗಿತಗೊಳಿಸಲಾಗಿದೆಯೇ? ಅಥವಾ ಇಲ್ಲವೇ? ಯಾವ ತರಕಾರಿಯನ್ನು ಯಾರಿಗೆ ಮಾರಾಟ ಮಾಡಲಾಗಿದೆ? ಎಂಬ ವಿಚಾರವನ್ನು ಹೈಕೋರ್ಟ್ ಹೇಗೆ ಮೇಲ್ವಿಚಾರಣೆ ನಡೆಸಲು ಸಾಧ್ಯವಿದೆ ಎಂದು ಪೀಠ ಪ್ರಶ್ನಿಸಿತು.

ಅರ್ಜಿದಾರರ ಪರ ವಕೀಲರ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ತರಕಾರಿ ಮಾರುಕಟ್ಟೆ ಕುರಿತಂತೆ ವಿಚಾರಣೆ ನಡೆಸಲು ಸಾಧ್ಯವಿಲ್ಲ, ನೀವು ಬೇಕಾದರೆ ಲೋಕಾಯುಕ್ತ ಹಾಗೂ ಉಪಲೋಕಾಯುಕ್ತರಿಗೆ ಮನವಿ ಮಾಡಬಹುದು. ಒಮ್ಮೆ ಲೋಕಾಯುಕ್ತ ಕಾಯ್ದೆಯನ್ನು ಓದಿ. ಲೋಕಾಯುಕ್ತ ಸಂಸ್ಥೆಯಲ್ಲಿ ಜನರ ಕುಂದುಕೊರತೆಗಳಿಗೆ ಪರಿಹಾರ ಘಟಕವಿದೆ. ಅದಕ್ಕೆ ನೀವು ಮನವಿ ಸಲ್ಲಿಸಿ. ಆದರೆ ನೀವು ಆಕ್ಷೇಪ ಎತ್ತಿರುವ ವಿಚಾರಗಳನ್ನು ಹೈಕೋರ್ಟ್ ಮೇಲ್ವಿಚಾರಣೆ ನಡೆಸಿಕೊಂಡು ಕೂರಲು ಸಾಧ್ಯವಿಲ್ಲ ಎಂದು ಮೌಖಿಕವಾಗಿ ಮನವಿ ಮಾಡಿತು.

ಇದರಿಂದ ಲೋಕಾಯುಕ್ತ ಮೊರೆ ಹೋಗಲು ಅವಕಾಶ ನೀಡುವಂತೆ ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರು ತಮ್ಮ ಕುಂದುಕೊರತೆ ಪರಿಹಾರಕ್ಕಾಗಿ ಲೋಕಾಯುಕ್ತ ಮೊರೆ ಹೋಗಲು ಸ್ವತಂತ್ರವಾಗಿದ್ದಾರೆ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಹಾಜರಾಗಿ, ಬೀದಿ ಬದಿ ವ್ಯಾಪಾರಿಗಳು ಕೆ.ಆರ್. ಮಾರುಕಟ್ಟೆ, ಅವೆನ್ಯೂ ರೆಸ್ತೆ ಮತ್ತು ಎಸ್ಜೆಪಿ ರಸ್ತೆಯಲ್ಲಿ ಪಾದಚಾರಿ ಮಾರ್ಗ, ರಸ್ತೆಯ ಎರಡು ಬದಿಯಲ್ಲಿ ಹಣ್ಣು ಮತ್ತು ಹೂ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಹಚ್ಚಾಗಿದೆ. ಜನ ಹಾಗೂ ವಾಹನಗಳ ಸುಗಮ ಸಂಚಾರವೇ ಕಷ್ಟವಾಗಿದೆ. ಈ ರಸ್ತೆಗಳ ಪಾದಚಾರಿ ಮಾರ್ಗ ಮತ್ತು ರಸ್ತೆ ಬದಿಯಲ್ಲಿ ತರಕಾರಿ ಹಾಗೂ ಹೂ ಮಾರಾಟವನ್ನು ಶಾಶ್ವತವಾಗಿ ನಿರ್ಬಂಧಿಸಲು ಕೋರಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಿಗೆ 2023ರ ಸೆ.22ರಂದು ಮನವಿ ಪತ್ರ ಸಲ್ಲಿಸಲಾಗಿದೆ. ಅದನ್ನು ಈ ವರೆಗೆ ಪರಿಗಣಿಸಿಲ್ಲ. ಆದ್ದರಿಂದ ಅರ್ಜಿದಾರರ ಮನವಿ ಪತ್ರ ಪರಿಗಣಿಸಲು ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿದರು.

ಇದನ್ನೂಓದಿ:ಬೈಕ್ ಟ್ಯಾಕ್ಸಿಗಳಿಗೆ ಅಡ್ಡಿ: ಸೂಕ್ತ ಕಾನೂನು ಕ್ರಮಕ್ಕೆ ಹೈಕೋರ್ಟ್ ಸೂಚನೆ - Bike Taxi Services

ABOUT THE AUTHOR

...view details