ಕರ್ನಾಟಕ

karnataka

ETV Bharat / state

ವೈದ್ಯಕೀಯ ವಿದ್ಯಾರ್ಥಿಗಳ ಶಿಷ್ಯವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ: ಪರಿಷ್ಕೃತ ಸ್ಟೈಫಂಡ್ ವಿವರ ಹೀಗಿದೆ - MEDICAL STUDENT STIPEND HIKE - MEDICAL STUDENT STIPEND HIKE

ಸ್ಟೈಫಂಡ್ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮುಷ್ಕರಕ್ಕೆ ಕರೆ ನೀಡಿದ್ದರು. ಸರ್ಕಾರ ಶಿಷ್ಯವೇತನ ಹೆಚ್ಚಳ ಮಾಡಿದ ಬೆನ್ನಲ್ಲೇ ವೈದ್ಯರು ಮುಷ್ಕರನ್ನು ಹಿಂಪಡೆದಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Aug 24, 2024, 6:50 AM IST

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಸೀನಿಯರ್ ರೆಸಿಡೆಂಟ್ ವೈದ್ಯರ ಶಿಷ್ಯವೇತನ (ಸ್ಟೈಪೆಂಡ್)ವನ್ನು ಶೇ.25ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಲಾಗಿದೆ.

ಸ್ಟೈಫಂಡ್ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮುಷ್ಕರಕ್ಕೆ ಕರೆ ನೀಡಿದ್ದರು. ಈ ಬೆನ್ನಲ್ಲೇ ಸರ್ಕಾರ ಶಿಷ್ಯವೇತನ ಹೆಚ್ಚಳ ಮಾಡಿದ್ದು, ಪರಿಷ್ಕೃತ ಶಿಷ್ಯವೇತನ ಆಗಸ್ಟ್ 1ರಿಂದಲೇ ಜಾರಿಗೆ ಬಂದಿದ್ದು, ಶೇ.25ರಷ್ಟು ಹೆಚ್ಚಳವಾಗಲಿದೆ. ಸರ್ಕಾರದ ಆದೇಶದ ಬಳಿಕ ವೈದ್ಯರು ಮುಷ್ಕರನ್ನು ಹಿಂಪಡೆದಿದ್ದಾರೆ.

ಪರಿಷ್ಕೃತ ವೇತನ ಹೀಗಿರಲಿದೆ:

ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು:

  • 1ನೇ ವರ್ಷ – ರೂ. 45,000 ದಿಂದ 56,250
  • 2ನೇ ವರ್ಷ- ರೂ. 50,000 ದಿಂದ 62,500
  • 3ನೇ ವರ್ಷ- ರೂ. 55,000 ದಿಂದ 68,750

ಸೂಪರ್ ಸ್ಪೆಷಾಲಿಟಿ ವೈದ್ಯ ವಿದ್ಯಾರ್ಥಿಗಳು:

  • 1ನೇ ವರ್ಷ - ರೂ. 55,000 ದಿಂದ 68,750
  • 2ನೇ ವರ್ಷ- ರೂ. 60,000 ದಿಂದ 75,000
  • 3ನೇ ವರ್ಷ- ರೂ. 65,000 ದಿಂದ 81,250

ಸೀನಿಯರ್ ರೆಸಿಡೆಂಟ್ಸ್:ರೂ. 60,000 ದಿಂದ 75,000

ಮಂಜೂರಾದ ಸೀಟುಗಳು:

  • ಸ್ನಾತಕೋತ್ತರ- 3,540
  • ಸೂಪರ್ ಸ್ಪೆಷಾಲಿಟಿ- 445
  • ಸೀನಿಯರ್ ರೆಸಿಡೆಂಟ್- 527
  • ಒಟ್ಟು ಸೀಟುಗಳು- 4,312

ಮಹಿಳಾ ವೈದ್ಯರ ಸುರಕ್ಷತೆಗಾಗಿ ಶೀಘ್ರದಲ್ಲೇ ಮಾರ್ಗಸೂಚಿ:ಕೊಲ್ಕತ್ತಾದಲ್ಲಿ ಮಹಿಳಾ ವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶವ್ಯಾಪಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮಹಿಳಾ ವೈದ್ಯಕೀಯ ಸಿಬ್ಬಂದಿ ಹಾಗೂ ಮಹಿಳಾ ವೈದ್ಯರ ಸುರಕ್ಷತೆಗಾಗಿ ಸ್ವಯಂಪ್ರೇರಿತವಾಗಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲು ಚಿಂತನೆ ನಡೆಸಿದೆ.

ಶುಕ್ರವಾರ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ವೈದ್ಯಕೀಯ ಶಿಕ್ಷಣ ನಿರ್ದೇಶಕರ ಡಾ. ಸುಜಾತ ರಾಥೋಡ್ ಅವರಿಗೆ ಮಹಿಳಾ ವೈದ್ಯರ ಸುರಕ್ಷತೆಯ ಬಗ್ಗೆ ಸಂಬಂಧಿಸಿದ ಎಲ್ಲಾ ಸಂಸ್ಥೆಗಳು/ಪಾಲುದಾರರನ್ನು ಸಂಪರ್ಕಿಸಿ ಸಮಗ್ರವಾದ ಮಾರ್ಗಸೂಚಿಯನ್ನು ರಚಿಸುವಂತೆ ಸೂಚಿಸಿದರು.

ಡಾ. ರಾಥೋಡ್ ಅವರಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಎಲ್ಲಾ ನಿರ್ದೇಶಕರುಗಳು, ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ವೈದ್ಯರ ಸಂಘ ಸಂಸ್ಥೆಗಳೊಂದಿಗೆ ಸಮಾಲೋಚಿಸಲು ನಿರ್ದೇಶನ ನೀಡಿದರು. ಇದರೊಂದಿಗೆ ಖಾಸಗಿ ಆಸ್ಪತ್ರೆಗಳು, ಮಹಿಳಾ ವೈದ್ಯರು ಇನ್ನಿತರೆ ಪಾಲುದಾರರೊಂದಿಗೆ ಸಮಾಲೋಚಿಸಿ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ವಿಶೇಷವಾಗಿ ಮಹಿಳಾ ವೈದ್ಯರ ಸುರಕ್ಷತೆಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ರೂಪಿಸುವಂತೆ ಒತ್ತಿಹೇಳಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ (ETV Bharat)

ಈ ಹಿನ್ನೆಲೆಯಲ್ಲಿ ಮಹಿಳಾ ವೈದ್ಯರ ಸುರಕ್ಷತೆಗಾಗಿ ವೈದ್ಯಕೀಯ ಸಮುದಾಯದ ಸಲಹೆ ಸೂಚನೆಗಳಂತೆ ರಾಜ್ಯ ಸರ್ಕಾರವು ಶೀಘ್ರವೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ. ಈ ಮಾರ್ಗಸೂಚಿಗಳು ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಅನ್ವಯವಾಗುತ್ತವೆ ಎಂದು ಸಚಿವರು ಮಾಧ್ಯಮಕ್ಕೆ ತಿಳಿಸಿದರು.

ಕೊಲ್ಕತ್ತಾದ ಆರ್​ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ 31 ವರ್ಷದ ವೈದ್ಯೆ ಮೇಲೆ ನಡೆದ ಅತ್ಯಾಚಾರವನ್ನು ತೀವ್ರವಾಗಿ ಖಂಡಿಸಿದ, ಸ್ವತಃ ವೈದ್ಯರಾದ ಡಾ. ಪಾಟೀಲರು, "ವೃತ್ತಿಪರ ಮಹಿಳೆಯರ ಮೇಲಾಗುವ ದೌರ್ಜನ್ಯವನ್ನು ಸರ್ಕಾರ ಸಹಿಸುವುದಿಲ್ಲ. ಮತ್ತು ಮಹಿಳಾ ವೈದ್ಯರ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ" ಎಂದು ಹೇಳಿದರು.

ಇದನ್ನೂ ಓದಿ:ಸ್ಟೈಫಂಡ್ ಹೆಚ್ಚಿಸಲು ಆಗ್ರಹ: ನಿವಾಸಿ ವೈದ್ಯರ ಮುಷ್ಕರ ಮುಂದುವರಿಕೆ - Resident Doctors Strike

ABOUT THE AUTHOR

...view details