ಬೆಂಗಳೂರು: ಭಾರತದ ಭೌಗೋಳಿಕ ವೈವಿಧ್ಯತೆ ಉಳಿಸಲು ಕಠಿಣ ಕಾನೂನು ಅವಶ್ಯಕವಾಗಿದೆ. ಭಾರತದ ಭೌಗೋಳಿಕ ಸಂರಕ್ಷಣೆ ಮಾಡದಿದ್ದರೆ ಭವಿಷ್ಯದಲ್ಲಿ ಎಲ್ಲವೂ ಸರ್ವನಾಶವಾಗಲಿದೆ. ಅಲ್ಲದೇ ಭಾರತ ವೈವಿಧ್ಯಮಯ ಭೌಗೋಳಿಕ ಪ್ರದೇಶ ಹೊಂದಿದ್ದರೂ ಯುನೆಸ್ಕೋ ಗ್ಲೋಬಲ್ ಜಿಯೋ ಪಾರ್ಕ್ ಸ್ಥಾನ ಸಿಗದಿರುವುದು ಬೇಸರದ ಸಂಗತಿ ಎಂದು ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಾಜಿ ನಿರ್ದೇಶಕ ಮಹೇಶ್ ಜಿ ಠಕ್ಕರ್ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ, ಜಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ಮತ್ತು ಭೂವಿಜ್ಞಾನ ಸಚಿವಾಲಯದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಭೂವೈವಿಧ್ಯ ದಿನಾಚರಣೆ 2024 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ಸಾಕಷ್ಟು ಸಂಪದ್ಭರಿತ ಭೂವೈವಿಧ್ಯತೆ ಹೊಂದಿರುವ ರಾಷ್ಟ್ರವಾಗಿದೆ. ಪರ್ವತ ಶ್ರೇಣಿ, ದಖ್ಖನ್ ಪ್ರಸ್ಥಭೂಮಿ, ಪಶ್ಚಿಮ ಘಟ್ಟ, ಕರಾವಳಿ ಪ್ರದೇಶ, ಬೆಟ್ಟ, ಗುಡ್ಡ, ಗುಹೆಗಳನ್ನು ಹೊಂದಿದೆ ಎಂದರು.
ಪೂರ್ವದಿಂದ ಪಶ್ಚಿಮದವರೆಗೂ, ಉತ್ತರದಿಂದ ದಕ್ಷಿಣವರೆಗೂ ವೈವಿಧ್ಯತೆಗಳಿಂದ ಕೂಡಿದೆ. ಭಾರತದ ಭೂಪ್ರದೇಶ ಅಥವಾ ಭೂಪದರಗಳ ರಚನೆ ಅಧ್ಯಯನ, ಸಂಶೋಧನೆಗೆ ಯೋಗ್ಯವಾದುದಾಗಿದೆ. ಭಾರತದ ಭೂಪದರಗಳ ಆವರ್ತಕ ಬದಲಾವಣೆ ಸಂಶೋಧನೆಯಿಂದ ಭೂತಕಾಲದ ಘಟನೆಗಳಿಂದ ಹಿಡಿದು ಭವಿಷ್ಯದ ಹವಾಮಾನ ಬದಲಾವಣೆಗಳವರೆಗೂ ಎಲ್ಲವನ್ನೂ ಅಂದಾಜಿಸಬಹುದು ಎಂದು ಹೇಳಿದರು.
1991 ರಲ್ಲಿ ಯುನೆಸ್ಕೋ 40 ರಿಂದ 45 ದೇಶಗಳಲ್ಲಿ ಜಿಯೋ ಪಾರ್ಕ್‌ಗಳನ್ನು ಗುರುತಿಸಿ ಮಾನ್ಯತೆ ನೀಡಿದೆ. ವೈವಿಧ್ಯತೆಗಳನ್ನೇ ತುಂಬಿರುವ ಭಾರತ ಜಿಯೋ ಪಾರ್ಕ್ ಸ್ಥಾನ ಹೊಂದಿಲ್ಲ. 2015 ರಿಂದ ನಿರಂತರ ಪ್ರಯತ್ನ ಸಾಗುತ್ತಿದ್ದರೂ ಯಶಸ್ಸು ಕಂಡಿಲ್ಲ. ಕೇಂದ್ರ ಸರ್ಕಾರ, ಸಂಬಂಧಪಟ್ಟ ಸಚಿವಾಲಯ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ಸಲಹೆ ನೀಡಿದರು.