ಬೆಂಗಳೂರು: "ಥಣಿಸಂದ್ರದ ಹೆಗಡೆ ನಗರದ ರಾಯಲ್ ಬ್ಲಿಸ್ ಅಪಾರ್ಟ್‌ಮೆಂಟ್‌ನಿಂದ ಅನಧಿಕೃತವಾಗಿ ಕಾವೇರಿ 5ನೇ ಹಂತದ ಪೈಪ್‌ಲೈನ್‌ಗೆ ಸ್ಯಾನಿಟರಿ ಕನೆಕ್ಷನ್ ನೀಡಿದ್ದ ಕಟ್ಟಡ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ(BWSSB) ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
"ಬುಧವಾರ ಹೆಗಡೆ ನಗರದಲ್ಲಿ ಕಾವೇರಿ ಪೈಪ್ಲೈನ್ನಿಂದ ನೀರು ರಭಸವಾಗಿ ಹೊರಬಂದು ಅಕ್ಕಪಕ್ಕದ ಮನೆಗಳಿಗೆ ಹಾನಿ ಉಂಟಾದ ಬಗ್ಗೆ ದೂರು ಬಂದಿತ್ತು. ಜಲಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ರಾಯಲ್ ಬ್ಲಿಸ್ ಅಪಾರ್ಟ್ಮೆಂಟ್ನ ಮಾಲೀಕರು ತಮ್ಮ ಕಟ್ಟಡದ ಸ್ಯಾನಿಟರಿ ಲೈನ್ ಕನೆಕ್ಷನ್ ಅನ್ನು ಅನಧಿಕೃತವಾಗಿ ಕಾವೇರಿ 5ನೇ ಹಂತದ ಪೈಪ್‌ಲೈನ್‌ಗೆ ನೀಡಿದ್ದರು. ಅದನ್ನು ಕಾಂಕ್ರಿಟ್ ಬಳಸಿ ಮುಚ್ಚಿ ಯಾರಿಗೂ ಗೊತ್ತಾಗದಂತೆ ಮರೆಮಾಚಿದ್ದರು. ಇದುವರೆಗೂ ಆ ಪೈಪ್‌ಲೈನ್‌ನಲ್ಲಿ ಕಾವೇರಿ ನೀರು ಸರಬರಾಜು ಪ್ರಾರಂಭವಾಗಿರಲಿಲ್ಲ. ನಿನ್ನೆ ರಾತ್ರಿ ಪೈಪ್ ಅನ್ನು ಕಮಿಷನ್ ಮಾಡಿದ ಸಂದರ್ಭದಲ್ಲಿ, ಅನಧಿಕೃತವಾಗಿ ಹಾಕಿದ್ದ ಪೈಪ್‌ಲೈನ್ 12 ಕೆ.ಜಿ ಪರ್ ಸ್ಕ್ವಯರ್ ಸೆಂಟಿಮೀಟರ್ ಒತ್ತಡವನ್ನು ನಿಭಾಯಿಸದೇ ನೀರು ರಭಸವಾಗಿ ಹೊರಚೆಲ್ಲಿದೆ. ಇದರಿಂದ ನೀರು ಸರಬರಾಜು ಪೈಪ್‌ಲೈನ್ ಹಾಗೂ ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗಿದೆ" ಎಂದು ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
"ಇದೀಗ ಈ ಪೈಪ್‌ಲೈನ್ ಅನ್ನು ಸಮರ್ಪಕವಾಗಿ ಶುದ್ದೀಕರಿಸಲಾಗಿದ್ದು, ಡಿಸ್‌ಇನ್‌ಫೆಕ್ಟ್ ಮಾಡಿ 110 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ನಿರ್ವಹಣಾ ವಿಭಾಗಕ್ಕೆ ಹಸ್ತಾಂತರಿಸಲಾಗುವುದು. ಜಲಮಂಡಳಿ ವತಿಯಿಂದ ಸಾವಿರಾರು ಮಾನವ ಗಂಟೆಗಳ ಶ್ರಮ ವ್ಯಯಿಸುವ ಮೂಲಕ ಲಕ್ಷಾಂತರ ಜನರಿಗೆ ನೀರು ಒದಗಿಸುವ ಕಾರ್ಯಕ್ಕೆ ರಾಯಲ್ ಬ್ಲಿಸ್ ಕಟ್ಟಡ ಮಾಲೀಕರು ಹಾಗೂ ಇನ್ನಿತರರು ಅನಾದರ ತೋರಿಸಿದ್ದು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ" ಎಂದರು.