ಬೆಂಗಳೂರು: ಒಕ್ಕಲಿಗ ಸಮುದಾಯದ ಅಭಿವೃದ್ಧಿ ಕೆಲಸಗಳಿಗೆ ಕಾಂಗ್ರೆಸ್ ನೆರವಾಗಿದೆ. ಹಾಗಾಗಿ, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಒಕ್ಕಲಿಗ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಒಕ್ಕಲಿಗರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಡಿ.ಹನುಮಂತಯ್ಯ ಕರೆ ನೀಡಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಇಂದು ರಾಜ್ಯ ಒಕ್ಕಲಿಗರ ಸಮುದಾಯಗಳ ಒಕ್ಕೂಟ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠಗಳಿಗೆ ಕಾಂಗ್ರೆಸ್ ಕೊಡುಗೆ ಅನನ್ಯ. 1962-67ರಲ್ಲಿ ಎಸ್.ನಿಜಲಿಂಗಪ್ಪನವರ ಮಂತ್ರಿ ಮಂಡಲದಲ್ಲಿ ಕಂದಾಯ ಸಚಿವರಾಗಿದ್ದ ಎಂ.ವಿ.ಕೃಷ್ಣಪ್ಪನವರು ಬೆಂಗಳೂರು ಶ್ರೀಗಂಧಕಾವಲಿನಲ್ಲಿ ಸುಮಾರು 20 ಎಕರೆ ಭೂಮಿಯನ್ನು ಒಕ್ಕಲಿಗರ ಸಂಘದ ವಿದ್ಯಾಸಂಸ್ಥೆಗೆ ಮಂಜೂರಾತಿ ನೀಡಿದ್ದರು. ಇನ್ನುಳಿದ 15 ಎಕರೆ ಜಮೀನು ಮಂಜೂರು ಮಾಡಿಕೊಡಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದೇವೆ. ಅಂದಿನ ಕಾಂಗ್ರೆಸ್ ಪಕ್ಷದ ಸರ್ಕಾರ ರಾಜ್ಯ ಒಕ್ಕಲಿಗರ ಸಂಘದ ಇಂಜಿನಿಯರಿಂಗ್, ಡೆಂಟಲ್, ಕಾನೂನು ಪಿಜಿಯೋಥೆರಪಿ ನರ್ಸಿಂಗ್ ಐಟಿಐ ಮತ್ತು ಇತರೆ ಕಾಲೇಜುಗಳನ್ನು ನಡೆಸಲು ಪರವಾನಗಿ ನೀಡಲಾಗಿದೆ ಎಂದು ಹೇಳಿದರು.
ದೇವರಾಜ ಅರಸು ಅವರು ಎಲ್.ಜಿ.ಹಾವನೂರು ಆಯೋಗ ಸ್ಥಾಪಿಸಿ ಒಕ್ಕಲಿಗರಿಗೆ ಶೇ.11ರಷ್ಟು ಮೀಸಲಾತಿ ಕೊಟ್ಟಿದ್ದರು. ಆದಿಚುಂಚನಗಿರಿಯಲ್ಲಿ ಮೆಡಿಕಲ್ ಕಾಲೇಜ್, ಇಂಜಿನಿಯರಿಂಗ್ ಕಾಲೇಜ್ ಅನ್ನು ಕಾಂಗ್ರೆಸ್ ಸರ್ಕಾರ ನೀಡಿತ್ತು. ಹೆಚ್.ಡಿ.ದೇವೇಗೌಡರನ್ನು ಪ್ರಧಾನಿ ಮಾಡಿದ್ದು, ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಇದೇ ಕಾಂಗ್ರೆಸ್. ಆದರೆ, ಮತ್ತೊಂದು ಒಕ್ಕಲಿಗ ಮಠ ಸ್ಥಾಪಿಸಿದ್ದು ಜೆಡಿಎಸ್. ಒಕ್ಕಲಿಗ ನಾಯಕರನ್ನು ಪಕ್ಷದಿಂದ ಹೊರದಬ್ಬಲಾಗಿತ್ತು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಪ್ರಾಧಿಕಾರವನ್ನು ಸ್ಥಾಪಿಸುವ ಮೂಲಕ ಈ ನಾಡಿಗೆ ಕೀರ್ತಿ ತಂದುಕೊಟ್ಟಿದ್ದಾರೆ ಎಂದರು.
ಜೆಡಿಎಸ್ ಸಾಧನೆಗಳು ಏನೂ ಇಲ್ಲ. ಒಕ್ಕಲಿಗರ ಸಮಾಜದ ಬಾಲಗಂಗಾಧರನಾಥ ಸ್ವಾಮೀಜಿ ರವರ ವಿರುದ್ದವಾಗಿ ಮತ್ತೊಂದು ಒಕ್ಕಲಿಗರ ಸಮಾಜದ ಪೀಠ ಸ್ಥಾಪಿಸಿದರು. ಆ ಮಹಾ ಸಂಸ್ಥಾನವು ತೀವ್ರಗತಿಯಲ್ಲಿ ಬೆಳೆದಂತೆ ನೋಡಿರುವ ಇವರ ಸಾಧನೆಯಾಗಿದೆ. ರಾಜಕೀಯವಾಗಿ ಒಕ್ಕಲಿಗರ ನಾಯಕರುಗಳ ಎಚ್.ಎನ್.ನಂಜೇಗೌಡ, ಸಿ.ಬೈರೇಗೌಡ, ವೈ.ಕೆ.ರಾಮಯ್ಯ, ಕೆ.ಎನ್.ನಾಗೇಗೌಡ, ಬಿ.ಎನ್.ಬಚ್ಚೇಗೌಡ, ಜೀವರಾಜ್ ಆಳ್ವಾ, ಚಿತ್ರನಟ ಅಂಬರೀಶ್, ವರದೇಗೌಡ, ಎಂ.ಶ್ರೀನಿವಾಸ್, ಬಿ.ಎಲ್.ಶಂಕರ್ ರವರನ್ನು ಪಕ್ಷದಿಂದ ಹೊರಕ್ಕೆ ಹಾಕಿದ್ದೇ ಪ್ರಮುಖ ಸಾಧನೆಯಾಗಿದೆ.