ಮಂಗಳೂರು:ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ ಪಕ್ಷ ಚುನಾವಣೆ ತಯಾರಿ ಆರಂಭಿಸಿದ್ದು, ನಾಳೆ ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಮ್ಮಿಕೊಂಡಿದೆ. ನಗರದ ಹೊರವಲಯದ ಅಡ್ಯಾರ್ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಸಮಾವೇಶ ಆಯೋಜಿಸಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸುತ್ತಿದ್ದು, ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನ ಎರಡು ಗಂಟೆಗೆ ಆರಂಭವಾಗಲಿರುವ ಸಮಾವೇಶ ಸಂಜೆ 6 ಗಂಟೆಯವರೆಗೂ ನಡೆಯಲಿದೆ. ಸಮಾವೇಶದಲ್ಲಿ ಭಾಗವಹಿಸಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಬ್ಲಾಕ್ ಕಾಂಗ್ರೆಸ್ ಮಟ್ಟದಿಂದ ಕಾರ್ಯಕರ್ತರನ್ನು ಕರೆತರಲು ಸಿದ್ದತೆ ಮಾಡಿಕೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಸಮಾವೇಶದ ಸಿದ್ದತೆ ವೇಗ ಪಡೆದಿದೆ. ಕಾಂಗ್ರೆಸ್ ಬೃಹತ್ ಸಮಾವೇಶಕ್ಕೆ ವೇದಿಕೆ ಸಿದ್ದಪಡಿಸಿದ್ದು, ಆಸನಗಳನ್ನು ಜೋಡಿಸಲಾಗುತ್ತಿದೆ. ಸಮಾವೇಶದ ಸಮೀಪ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿವಿಧೆಡೆ ಹೋರ್ಡಿಂಗ್ಸ್, ಬಂಟಿಂಗ್ಸ್ಗಳನ್ನು ಹಾಕಿದ್ದು, ಜನರ ಗಮನ ಸೆಳೆಯುತ್ತಿವೆ.
ರಾಜ್ಯಸಭೆಗೆ ನಾಮಪತ್ರ ಸಲ್ಲಿಕೆ:ಎಐಸಿಸಿ ಖಜಾಂಚಿ, ದೆಹಲಿ ಮೂಲದ ಅಜಯ್ ಮಾಕೇನ್, ಹಾಲಿ ಸದಸ್ಯ ಜೆ.ಸಿ.ಚಂದ್ರಶೇಖರ್ ಹಾಗೂ ಡಾ.ಸೈಯದ್ ನಾಸಿರ್ ಹುಸೇನ್ ಅವರು ಕಾಂಗ್ರೆಸ್ನಿಂದ ರಾಜ್ಯಸಭಾ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಹಾಲಿ ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರವಾಗಿ ಉತ್ತಮ ಕೆಲಸ ಮಾಡಿದ್ದರು. ಮಂಡ್ಯ, ತುಮಕೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಚುನಾವಣಾ ಸಂಯೋಜಕರನ್ನಾಗಿ ನೇಮಿಸಿ ಜವಾಬ್ದಾರಿ ನೀಡಲಾಗಿತ್ತು. ಮೂರೂ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಫಲಿತಾಂಶ ಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಟಿಕೆಟ್ ಕೊಡಲಾಗಿದೆ. ಮತ್ತೊಬ್ಬ ಹಾಲಿ ಸದಸ್ಯರಾದ ಸೈಯದ್ ನಾಸೀರ್ ಹುಸೇನ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತರು. ಇದರಿಂದಾಗಿ ಅವರಿಗೆ ಮತ್ತೊಮ್ಮೆ ಕಾಂಗ್ರೆಸ್ ಹೈಕಮಾಂಡ್ ಅವಕಾಶ ನೀಡಿದೆ.
ಇದನ್ನೂಓದಿ:ಉಪ್ಪು ಹುಳಿ ಖಾರ ಇಲ್ಲದ ಜನ ವಿರೋಧಿ ಬಜೆಟ್: ಸಿಎಂ ನಿಲುವು ಖಂಡಿಸಿ ಬಿಜೆಪಿ ಸಭಾತ್ಯಾಗ