ಬೆಂಗಳೂರು: ಕರ್ನಾಟಕ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯ ಎರಡನ್ನೂ ಸಮನಾಗಿ ನಿಭಾಯಿಸುತ್ತಾ ದೇಶದಲ್ಲೇ ಅತ್ಯುತ್ತಮ ಅಭಿವೃದ್ಧಿ ಸಾಧಿಸುತ್ತಿರುವ ರಾಜ್ಯಗಳ ಪೈಕಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ 76ನೇ ಗಣರಾಜ್ಯೋತ್ಸವ ಪ್ರಯುಕ್ತ ರಾಜ್ಯಪಾಲರು ಧ್ವಜಾರೋಹಣ ನೆರವೇರಿಸಿ ಬಳಿಕ ವಿವಿಧ ತುಕಡಿಗಳಿಂದ ಗೌರವ ರಕ್ಷೆ ಸ್ವೀಕರಿಸಿ, ತೆರೆದ ವಾಹನದಲ್ಲಿ ಕವಾಯತು ವೀಕ್ಷಿಸಿದರು. ನಂತರ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದರು.
ಎಲ್ಲರಿಗೂ ನಮಸ್ಕಾರ ಎನ್ನುತ್ತಾ ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು, ಕರ್ನಾಟಕ ಸಂವಿಧಾನದ ಮಹತ್ತರ ಆಶಯವಾದ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ನೆಲೆಗೊಳಿಸಲು ಶಕ್ತಿಮೀರಿ ಶ್ರಮಿಸುತ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಿಂದ ಸಾಮಾಜಿಕ ಮತ್ತು ಆರ್ಥಿಕ ನ್ಯಾಯಗಳಿಗೆ ಆಗುತ್ತಿರುವ ಹಿನ್ನಡೆಯನ್ನು ಮತ್ತು ಜನರಿಗೆ ಆಗುತ್ತಿರುವ ಸಂಕಷ್ಟಗಳನ್ನು ಅರಿತುಕೊಂಡು ಜಾರಿಗೆ ತಂದ ಐದು ಗ್ಯಾರಂಟಿ ಕಲ್ಯಾಣ ಯೋಜನೆಗಳು ಯಶಸ್ವಿಯಾಗಿ ಜಾರಿಗೊಂಡು ದೇಶದ ಗಮನ ಸೆಳೆದಿವೆ. ಈ ಯೋಜನೆಗಳಿಂದ ಆರ್ಥಿಕ ಬಿಕ್ಕಟ್ಟು, ಅಭಿವೃದ್ಧಿ ಕುಂಠಿತವಾದೀತು ಎಂಬ ನಿರಾಶಾವಾದಿ ಭವಿಷ್ಯ ಸುಳ್ಳಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸಂವಿಧಾನದ ಆಶಯಗಳಿಗನುಗುಣವಾಗಿ ಒಕ್ಕೂಟ ಧರ್ಮದ ನೀತಿರಿವಾಜುಗಳಿಗೆ ಬದ್ಧವಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಿದೆ. ಒಕ್ಕೂಟ ಧರ್ಮಕ್ಕೆ ಚ್ಯುತಿಯಾದಾಗ ತನ್ನ ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತಿದೆ. ಮುಂದೆಯೂ ಸಂವಿಧಾನ ವಿಧಿಸಿದ ಒಕ್ಕೂಟ ತತ್ವಗಳ ಅನುಸಾರ ರಾಜ್ಯ-ರಾಜ್ಯಗಳ ಸಂಬಂಧ ಮತ್ತು ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸಂಬಂಧ ಮುಂದುವರಿಯಬೇಕು ಎಂದು ಕರ್ನಾಟಕ ಬಯಸುತ್ತದೆ ಎಂದರು.
ಪಂಚ ಗ್ಯಾರಂಟಿಗಳ ಯಶಸ್ವಿ ಅನುಷ್ಠಾನ:ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೆ ತರಲಾದ “ಗೃಹಲಕ್ಷ್ಮಿ” ಯೋಜನೆಯಡಿ, ಆಗಸ್ಟ್ 2023 ರಿಂದ ಪ್ರತಿ ಕುಟುಂಬದ ಯಜಮಾನಿಯರಿಗೆ ಮಾಸಿಕ ಎರಡು ಸಾವಿರ ರೂ ನಂತೆ ಒಟ್ಟು 35,180.20 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿದೆ. “ಗೃಹ ಜ್ಯೋತಿ” ಯೋಜನೆಯಡಿ, ಪ್ರಸ್ತುತ 1.62 ಕೋಟಿ ಗ್ರಾಹಕರು ಪ್ರಯೋಜನ ಪಡೆಯುತ್ತಿದ್ದಾರೆ. “ಶಕ್ತಿ” ಯೋಜನೆ - ಮಹಿಳಾ ಸಬಲೀಕರಣವನ್ನು ಬಲಪಡಿಸುವತ್ತ ಸರ್ಕಾರದ ಒಂದು ಹೆಜ್ಜೆಯಾಗಿದೆ. ಯೋಜನೆಯ ಆರಂಭದಿಂದ ಈವರೆಗೆ ಒಟ್ಟು 373.27 ಕೋಟಿ ಟ್ರಿಪ್ಗಳಲ್ಲಿ ಫಲಾನುಭವಿಗಳು ಉಚಿತವಾಗಿ ಪ್ರಯಾಣಿಸಿದ್ದು, ಇದಕ್ಕಾಗಿ ಸರ್ಕಾರವು 9,051 ಕೋಟಿ ರೂ. ವಿನಿಯೋಗಿಸಿದೆ ಎಂದು ವಿವರಿಸಿದರು.
“ಯುವನಿಧಿ” ಯೋಜನೆಯಡಿಯಲ್ಲಿ 1,24,176 ಅರ್ಹ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ. ಯುವನಿಧಿ ಪ್ಲಸ್ ಉಪಕ್ರಮದಡಿಯಲ್ಲಿ 25,000 ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಲಾಗುವುದು. 12,000 ಅಭ್ಯರ್ಥಿಗಳಿಗೆ ಕೈಗಾರಿಕಾ ಸಂಪರ್ಕ ಕೋಶ ಮತ್ತು ಭವಿಷ್ಯದ ಕೌಶಲ್ಯಗಳ ಅಡಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಜನರ ಹಸಿವನ್ನು ನೀಗಿಸುವುದರ ದೃಷ್ಟಿಯಿಂದ “ಅನ್ನಭಾಗ್ಯ” ಯೋಜನೆಯನ್ನು ಜಾರಿಗೆ ತರಲಾಯಿತು. ಬಿಪಿಎಲ್ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ 5 ಕೆ.ಜಿ ಅಕ್ಕಿ ನೀಡುವ ಜೊತೆಗೆ, ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಾಗಿ ಪ್ರತಿ ಸದಸ್ಯರಿಗೆ 170 ರೂ. ರಂತೆ ಅವರ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆ ಮಾಡಲಾಗುತ್ತಿದೆ. ಜುಲೈ-2023 ರಿಂದ ಈವರೆ ಡಿಬಿಟಿ ಮೂಲಕ ವರ್ಗಾಯಿಸಲು 9,775.51 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಮೂಲಸೌಕರ್ಯ ಒದಗಿಸುವಲ್ಲಿ ಮುಂದೆ:ಕರ್ನಾಟಕ ಸರ್ಕಾರ 2024-25ರಲ್ಲಿ ರಾಜ್ಯದ ಹಣಕಾಸು ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಿಸಿದೆ ಮತ್ತು ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಿದೆ. ಡಿಸೆಂಬರ್ 2024 ರ ಅಂತ್ಯದ ವೇಳೆಗೆ, ರಾಜ್ಯದ ಆದಾಯ ಸಂಗ್ರಹವು 1,81,908 ಕೋಟಿಗಳಷ್ಟಿತ್ತು ಮತ್ತು ವರ್ಷದಿಂದ ವರ್ಷಕ್ಕೆ 13% ಬೆಳವಣಿಗೆಯನ್ನು ಸಾಧಿಸಿಕೊಂಡು ಬಂದಿದೆ. ರಾಜ್ಯಗಳು ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯದ ವಿಷಯದಲ್ಲಿ ಕರ್ನಾಟಕವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಸರ್ಕಾರ ನಾಡಿನ ಸಮಗ್ರ ಅಭಿವೃದ್ಧಿ ಮತ್ತು ಸಂಪತ್ತಿನ ವಿನಿಯೋಗದಲ್ಲಿ ಸಾಮಾಜಿಕ ನ್ಯಾಯವನ್ನು ಅನುಷ್ಠಾನ ಮಾಡುವಲ್ಲಿ ಮಹತ್ತರ ಪಾತ್ರವಹಿಸಿದೆ. ಆರೋಗ್ಯ, ವಿದ್ಯುತ್, ಶಿಕ್ಷಣ, ರಸ್ತೆ ಮುಂತಾದ ಮೂಲಭೂತ ಸೌಲಭ್ಯಗಳ ಒದಗಿಸುವಿಕೆಯಲ್ಲಿ ಮುಂದೆ ಇದೆ ಎಂದು ಹೇಳಿದರು.
ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣವನ್ನು ಬಲಪಡಿಸುವ ದೃಷ್ಟಿಯಿಂದ ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿಯನ್ನು ತರಲು ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ. ಇದರ ಜೊತೆಗೆ ಖಾಲಿ ಇರುವ ಬೋಧಕ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಕಳೆದ ಒಂದೂವರೆ ವರ್ಷಗಳಲ್ಲಿ 13,000 ಕ್ಕೂ ಹೆಚ್ಚಿನ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಉಳಿದಿದ್ದ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಿದೆ. ಒಟ್ಟಾರೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಉದ್ದೇಶಿಸಿದೆ ಎಂದು ತಿಳಿಸಿದರು.
2024-25ರ ಅವಧಿಯಲ್ಲಿ 2491 ಕಿ.ಮೀ. ರಾಜ್ಯ ಹೆದ್ದಾರಿಗಳು ಮತ್ತು 3103 ಕಿ.ಮೀ. ಪ್ರಮುಖ ಜಿಲ್ಲಾ ರಸ್ತೆಗಳ ಸುಧಾರಣೆ ಮತ್ತು ನವೀಕರಣ ಪೂರ್ಣಗೊಂಡಿದೆ. 190 ಸೇತುವೆಗಳನ್ನು ನಿರ್ಮಿಸಲಾಗಿದೆ. ಹೈಬ್ರಿಡ್ ವರ್ಷಾಶನ ಮಾದರಿ (HAM) ಯಲ್ಲಿ ರಾಯಚೂರು ಬಳಿಯ ಕಲ್ಮಲಾ ಜಂಕ್ಷನ್‌ನಿಂದ ಸಿಂಧನೂರಿನವರೆಗಿನ 78.45 ಕಿ.ಮೀ. ರಾಜ್ಯ ಹೆದ್ದಾರಿಯ ಅಭಿವೃದ್ಧಿ 1696 ಕೋಟಿ ರೂ. ವೆಚ್ಚದಲ್ಲಿ ಪ್ರಗತಿಯಲ್ಲಿದೆ. 2024-25ನೇ ಸಾಲಿನಲ್ಲಿ, ಏಪ್ರಿಲ್ 2024 ರಿಂದ ಸೆಪ್ಟೆಂಬರ್ 2024 ರವರೆಗೆ 88,853 ಮಿಲಿಯನ್ ಯುಎಸ್ ಡಾಲರ್ ರಫ್ತು ಮಾಡುವ ಮೂಲಕ ರಾಜ್ಯವು ಒಟ್ಟಾರೆ ರಫ್ತಿನಲ್ಲಿ 1ನೇ ಸ್ಥಾನದಲ್ಲಿದೆ. ಹಿಂದಿನ 2023-24 ವರ್ಷಕ್ಕೆ ಹೋಲಿಸಿದರೆ, ರಾಜ್ಯವು ಒಟ್ಟಾರೆ ರಫ್ತಿನಲ್ಲಿ 11.17% ರಷ್ಟು ಬೆಳವಣಿಗೆಯನ್ನು ಸಾಧಿಸಿದೆ ಎಂದು ವಿವರಿಸಿದರು.