ಬಳ್ಳಾರಿ: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ನಾನು ಅಧ್ಯಕ್ಷನಾಗಿ ನೇಮಕಗೊಂಡ ಬಳಿಕ ಬಾಕಿ ಉಳಿದಿದ್ದ ಹಾಗೂ ಹೊಸದಾಗಿ ಸಲ್ಲಿಸಲಾದ ಪ್ರಕರಣಗಳೂ ಸೇರಿದಂತೆ ಒಟ್ಟು 11,200 ಪ್ರಕರಣಗಳ ಪೈಕಿ, 2024ರ ಡಿಸೆಂಬರ್ ಅಂತ್ಯದವರೆಗೆ 8,061 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 3,139 ಪ್ರಕರಣಗಳು ವಿವಿಧ ಹಂತದಲ್ಲಿ ಬಾಕಿ ಇವೆ ಎಂದು ಟಿ.ಶ್ಯಾಮ್ ಭಟ್ ಹೇಳಿದರು.
ನಗರದ ಅನಂತಪುರ ರಸ್ತೆಯ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಆಯೋಗದಲ್ಲಿ ದಾಖಲಾದ ಪ್ರಕರಣಗಳ ವಿಚಾರಣೆಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಬೆಂಗಳೂರಿಗೆ ಅಲೆಯುವುದನ್ನು ತಪ್ಪಿಸಲು ಆಯೋಗವೇ ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ. ಈಗಾಗಲೇ 16 ಜಿಲ್ಲೆಗಳಿಗೆ ಭೇಟಿ ನೀಡಲಾಗಿದೆ. ಜಿಲ್ಲಾ ಹಂತದಲ್ಲಿಯೇ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯ ಮಾಡಲಾಗುತ್ತಿದೆ. ಆಯೋಗಕ್ಕೆ ಹೆಚ್ಚಿನ ಸೌಕರ್ಯ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ದೂರುಗಳನ್ನು ಆನ್‌ಲೈನ್ ಅಥವಾ ಅಂಚೆ ಮೂಲಕವೂ ಸಲ್ಲಿಸಬಹುದಾಗಿದೆ. ದೂರುದಾರರು ಇಲ್ಲದಿದ್ದರೂ ಅವರ ಪರವಾಗಿ ಬೇರೆ ಯಾರಾದರೂ ದೂರು ನೀಡಬಹುದು ಎಂದು ಅವರು ತಿಳಿಸಿದರು.
ಜಿಲ್ಲೆಯ 20 ಪ್ರಕರಣ ಇತ್ಯರ್ಥ, 7 ಪ್ರಕರಣ ಬಾಕಿ: ಬಳ್ಳಾರಿಗೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಕೆಯಾಗಿದ್ದ ಒಟ್ಟು 27 ಪ್ರಕರಣಗಳಲ್ಲಿ 20 ಪ್ರಕರಣ ಇತ್ಯರ್ಥಪಡಿಸಲಾಗಿದ್ದು, 07 ಪ್ರಕರಣ ಬಾಕಿ ಇವೆ ಎಂದು ಮಾಹಿತಿ ನೀಡಿದರು.