ಬೆಂಗಳೂರು: ರಾಜ್ಯ ಸರ್ಕಾರ ತೆರಿಗೆ ಆದಾಯವನ್ನು ಪಂಚಗ್ಯಾರಂಟಿ, ಬದ್ಧ ವೆಚ್ಚಕ್ಕಾಗಿ ಬಳಕೆ ಮಾಡುತ್ತಿದೆ. ಇತ್ತ ಅಭಿವೃದ್ಧಿಗಾಗಿನ ಬಂಡವಾಳ ವೆಚ್ಚಕ್ಕಾಗಿ ಸಂಪೂರ್ಣ ಸಾಲವನ್ನೆ ನೆಚ್ಚಿಕೊಂಡಿದೆ. ಹೀಗಾಗಿ ಮುಂದಿನ ಮೂರು ತಿಂಗಳಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಸಗಳಿಗಾಗಿ 48,000 ಕೋಟಿ ಸಾಲ ಮಾಡಲು ಯೋಜಿಸಿದೆ.
ಆರ್ಥಿಕ ವರ್ಷದ ಮುಕ್ಕಾಲು ಭಾಗ ಪೂರ್ಣವಾಗಿದೆ. ಕೊನೆಯ ತ್ರೈಮಾಸಿಕ ಚಾಲ್ತಿಯಲ್ಲಿದೆ. ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಕೇಂದ್ರಿತ ಆಡಳಿತ ನಡೆಸುತ್ತಿದೆ. ತನ್ನ ಸ್ವಂತ ತೆರಿಗೆ ಆದಾಯದ ಬಹುಪಾಲನ್ನು ಪಂಚ ಗ್ಯಾರಂಟಿಗಾಗಿ ಬಳಸುತ್ತಿದೆ. ಇನ್ನು ಉಳಿದಂತೆ ಬದ್ಧ ವೆಚ್ಚಕ್ಕೆ ಬಳಸಲಾಗುತ್ತಿದೆ. ಇನ್ನು ರಾಜ್ಯದ ಆಸ್ತಿ ಸೃಜಿಸುವ ಅಭಿವೃದ್ಧಿ ವೆಚ್ಚಕ್ಕಾಗಿ ರಾಜ್ಯ ಸಂಗ್ರಹಿಸುವ ತೆರಿಗೆ ಆದಾಯದ ಹಣ ಸಾಲುತ್ತಿಲ್ಲ. ಹೀಗಾಗಿ ಅಭಿವೃದ್ಧಿ ವೆಚ್ಚಕ್ಕಾಗಿ ರಾಜ್ಯ ಸರ್ಕಾರ ಸಾಲವನ್ನೇ ನೆಚ್ಚಿಕೊಂಡಿದೆ.
ಒಟ್ಟು ನಾಲ್ಕು ಪ್ರಮುಖ ತೆರಿಗೆಗಳ ಮೂಲಕ ಡಿಸೆಂಬರ್ ವರೆಗೆ 1,25,101 ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. ಗಳಿಸಿದ ಆದಾಯವೆಲ್ಲವೂ ರಾಜಸ್ವ ವೆಚ್ಚಕ್ಕೆ ವ್ಯಯವಾಗುತ್ತಿದೆ. ಈ ಬಾರಿ ಅಭಿವೃದ್ಧಿ ಕಾಮಗಾರಿಗಳಿಗಾಗಿನ ಬಂಡವಾಳ ವೆಚ್ಚಕ್ಕೆ 55,877 ಕೋಟಿ ರೂ.ಅನುದಾನ ಹಂಚಿಕೆ ಮಾಡಲಾಗಿದೆ. ರಾಜ್ಯ ಸರ್ಕಾರ ನವೆಂಬರ್ ವರೆಗೆ ಮೂಲಸೌಕರ್ಯ ಅಭಿವೃದ್ಧಿ ಸೇರಿ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಒಟ್ಟು 21,493 ಕೋಟಿ ರೂ. ಖರ್ಚು ಮಾಡಿದೆ. ಈ ಅಭಿವೃದ್ಧಿ ವೆಚ್ಚಕ್ಕೆ ರಾಜ್ಯ ಸರ್ಕಾರ ಬಹುವಾಗಿ ಸಾಲವನ್ನೇ ಬಳಸಿಕೊಂಡಿದೆ. ಇನ್ನು ಉಳಿದಿರುವ ಮೂರು ತಿಂಗಳಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿ ವೆಚ್ಚಕ್ಕಾಗಿ ಇನ್ನೂ ಹೆಚ್ಚಿನ ಸಾಲ ಮಾಡಲಿದೆ.
ಡಿಸೆಂಬರ್ ವರೆಗೆ 53,000 ಕೋಟಿ ರೂ. ಸಾಲ ಎತ್ತುವಳಿ: ರಾಜ್ಯ ಸರ್ಕಾರ 2024-25 ಸಾಲಿನಲ್ಲಿ ಅಂದಾಜು 1,05,246 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿದೆ. ಅದರಂತೆ ಕೇಂದ್ರ ಸರ್ಕಾರದಿಂದ 6,855 ಕೋಟಿ ರೂ. ಸಾಲ ಪಡೆಯಲು ಅಂದಾಜಿಸಲಾಗಿದೆ. ಬಹಿರಂಗ ಮಾರುಕಟ್ಟೆ ಮೂಲಕ 96,840 ಕೋಟಿ ರೂ. ಸಾಲ ಮಾಡಲು ಮುಂದಾಗಿದೆ. ಇನ್ನು ಈಗಾಗಲೇ ಡಿಸೆಂಬರ್ವರೆಗೆ ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ 47,000 ಕೋಟಿ ರೂ. ಮತ್ತು ಇತರ ಮೂಲಗಳಿಂದ 6 ಸಾವಿರ ಕೋಟಿ ರೂ ಸೇರಿ ಒಟ್ಟು 53 ಸಾವಿರ ಕೋಟಿ ರೂ ಸಾಲ ಮಾಡಿದೆ.