ಬೆಂಗಳೂರು :ರಾಜ್ಯ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆಯ ಜೊತೆಗೆ ಮತ್ತೊಂದು ಶುಭ ಸುದ್ದಿಯನ್ನು 7ನೇ ವೇತನ ಆಯೋಗ ನೀಡಿದೆ. ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ವಾರದಲ್ಲಿ 5 ದಿನ ಕೆಲಸ, ಎರಡು ದಿನ ರಜೆ ಇರುವ ಪದ್ಧತಿ ಜಾರಿಗೆ ಅಸ್ತು ಎಂದಿದೆ.
ರಾಜ್ಯ ಸರ್ಕಾರಿ ನೌಕರರ ಕಾರ್ಯಕ್ಷಮತೆ ಹೆಚ್ಚಿಸಲು ವಾರದಲ್ಲಿ 5 ದಿನ ಕೆಲಸ ಮಾಡುವ ಪದ್ಧತಿ ಜಾರಿಗೆ ತರಬೇಕು ಎಂದು 7 ನೇ ವೇತನ ಆಯೋಗವು ತನ್ನ ವರದಿಯಲ್ಲಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಐಟಿ ಬಿಟಿ ಸಂಸ್ಥೆಗಳು, ಖಾಸಗಿ ಕಂಪನಿಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳಲ್ಲಿ ವಾರದಲ್ಲಿ 5 ದಿನ ಕೆಲಸ 2 ದಿನ ರಜೆ ಇರುವಂತೆ ರಾಜ್ಯ ಸರ್ಕಾರಿ ನೌಕರರು ನಮಗೂ ವಾರದಲ್ಲಿ 5 ದಿನವಷ್ಟೇ ಕೆಲಸ ಮಾಡುವ ಪದ್ಧತಿ ಜಾರಿಗೆ ತರಬೇಕು ಎಂದು ಹಲವಾರು ವರ್ಷಗಳಿಂದ ಸರ್ಕಾರದ ಮುಂದೆ ತಮ್ಮ ಬೇಡಿಕೆ ಇಟ್ಟಿದ್ದರು.
ರಾಜ್ಯ ಸರ್ಕಾರಿ ನೌಕರರ ಮೇಲಿನ ಒತ್ತಡ ಕಡಿಮೆ ಮಾಡಲು ಮತ್ತು ಕೆಲಸದ ಕಾರ್ಯದಕ್ಷತೆ ಹೆಚ್ವಿಸಲು ವಾರದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕೆಲಸ ವೀಕ್ ಎಂಡ್ ನಲ್ಲಿ ಶನಿವಾರ ಮತ್ತು ಭಾನುವಾರ ರಜೆ ನೀಡುವಂತೆ ಮನವಿ ಸಲ್ಲಿಸಿ ಆಗ್ರಹಿಸಿದ್ದವು. ಸರ್ಕಾರಿ ನೌಕರರ ಈ ಬೇಡಿಕೆಗೆ 7ನೇ ವೇತನ ಆಯೋಗ ಸ್ಪಂದಿಸಿದ್ದು, ವಾರದಲ್ಲಿ 5 ದಿನ ಕೆಲಸದ ಪದ್ಧತಿ ಅನುಷ್ಟಾನಗೊಳಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಸದ್ಯ ಸರ್ಕಾರಿ ನೌಕರರು ವಾರದಲ್ಲಿ 6 ದಿನ ಕೆಲಸ ಮಾಡುವ ಪದ್ಧತಿ ಜಾರಿಯಲ್ಲಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಸರ್ಕಾರಿ ರಜೆ ನೀಡಲಾಗುತ್ತಿದೆ. ಅಂದರೆ ಒಂದು ತಿಂಗಳಲ್ಲಿ ಎರಡು ವಾರ (ತಿಂಗಳ ಎರಡನೇ ವಾರ ಮತ್ತು ನಾಲ್ಕನೇ ವಾರ) 5 ದಿನ ಕೆಲಸವಿದೆ. ಹಾಗೆಯೇ ತಿಂಗಳ ಮೊದಲವಾರ ಮತ್ತು ಮೂರನೇ ವಾರ 6 ದಿನಗಳ ಕೆಲಸ ಮಾಡುವ ಪದ್ಧತಿ ಜಾರಿಯಲ್ಲಿದೆ.
ಇದನ್ನೂ ಓದಿ :ಚುನಾವಣೆಗೂ ಮುನ್ನ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಗುಡ್ ನ್ಯೂಸ್: ಬಾಕಿ ಮೊತ್ತ ಪಾವತಿಗೆ ಆದೇಶ