ಕರ್ನಾಟಕ

karnataka

ETV Bharat / state

ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ, ವಕ್ಫ್ ಆಸ್ತಿ ನೋಟಿಸ್ ಗದ್ದಲ: 2024ರಲ್ಲಿ ವಿವಾದ ಎಬ್ಬಿಸಿದ ರಾಜ್ಯ ಸರ್ಕಾರದ ತೀರ್ಮಾನಗಳು - STATE GOVT CONTROVERSIAL DECISIONS

ಕರ್ನಾಟಕ ಸರ್ಕಾರ 2024ರಲ್ಲಿ ಹಲವು ಪ್ರಮುಖ ತೀರ್ಮಾನಗಳನ್ನು ಕೈಗೊಂಡಿತು. ಇವುಗಳ ಪೈಕಿ ಕೆಲವು ಜನಪರ, ಆಡಳಿತಸ್ನೇಹಿಯಾಗಿದ್ದರೆ, ಇನ್ನೊಂದಿಷ್ಟು ವಿವಾದ ಎಬ್ಬಿಸಿದವು. ಅವುಗಳನ್ನು ಸಂಕ್ಷಿಪ್ತವಾಗಿ ನೋಡೋಣ.

YEAR END STORIES  BENGALURU  CONGRESS GOVERNMENT  ರಾಜ್ಯ ಸರ್ಕಾರ ವಿವಾದ ತೀರ್ಮಾನಗಳು
2024ರ ರೌಂಡ್​ ಅಪ್ (ETV Bharat)

By ETV Bharat Karnataka Team

Published : Dec 31, 2024, 3:46 PM IST

Updated : Jan 1, 2025, 6:29 AM IST

ಬೆಂಗಳೂರು:2024 ಕಳೆದು, 2025ರ ಹೊಸ ವರ್ಷಕ್ಕೆ ಕಾಲಿಡಲು ಕೆಲವೇ ಗಂಟೆಗಳಷ್ಟೇ ಬಾಕಿ ಉಳಿದಿದೆ.‌ ಈ ಹಿನ್ನೆಲೆಯಲ್ಲಿ ಕರ್ನಾಟಕದ ಮಹತ್ವದ ರಾಜಕೀಯ ವಿದ್ಯಮಾನಗಳನ್ನು ಒಮ್ಮೆ ಮೆಲುಕು ಹಾಕೋಣ. ಪ್ರಸಕ್ತ ವರ್ಷದಲ್ಲಿ ರಾಜ್ಯಾಡಳಿತ ಸಾಕಷ್ಟು ಏರುಪೇರುಗಳನ್ನು ಕಂಡಿತು. ಸರ್ಕಾರದ ಹಲವು ತೀರ್ಮಾನಗಳು ವಿವಾದ ಎಬ್ಬಿಸಿದವು.

ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ:ಸರ್ಕಾರಿ ಗುತ್ತಿಗೆಗಳಲ್ಲಿ ಅಲ್ಪಸಂಖ್ಯಾತರಿಗೆ 4% ಮೀಸಲಾತಿ ನೀಡುವ ಪ್ರಸ್ತಾವನೆ ದೊಡ್ಡ ವಿವಾದವಾಯಿತು. ಕಾಂಗ್ರೆಸ್ ಸರ್ಕಾರ ಒಂದು ಕೋಟಿ ರೂ.ವರೆಗಿನ ಕಾಮಗಾರಿ ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಈ ಮೀಸಲಾತಿ ನೀಡುವ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿರುವ ಬಗ್ಗೆ ಚಿಂತನೆ ನಡೆಸಿತ್ತು. ಕಾಂಗ್ರೆಸ್​ನ ಮುಸ್ಲಿಂ ಶಾಸಕರ ನಿಯೋಗ ಸಿಎಂರನ್ನು ಭೇಟಿಯಾಗಿ ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ 4% ಮೀಸಲಾತಿ ಕಲ್ಪಿಸುವಂತೆ ಮನವಿ ಮಾಡಿತ್ತು. ಆಗಸ್ಟ್ 24ರಂದು ಕಾಂಗ್ರೆಸ್ ಮುಸ್ಲಿಂ ನಾಯಕರು ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದರು. ಈ ಕಡತವನ್ನು ಪರಿಶೀಲಿಸಿ ಮಂಡಿಸಿ ಆರ್ಥಿಕ ಇಲಾಖೆಗೆ ಸೂಚಿಸಿದ್ದರು. ಈ ಸಂಬಂಧ ಕೆಟಿಪಿಪಿ ಕಾಯ್ದೆಯ 1999ರ 6ನೇ ಪ್ರಕರಣಕ್ಕೆ ತಿದ್ದುಪಡಿಗೆ ಚಿಂತನೆ ನಡೆದಿತ್ತು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿರುವುದಾಗಿ ಟಿಪ್ಪಣಿಯೂ ಹರಿದಾಡಿತ್ತು.‌ ಈ ಪ್ರಸ್ತಾವನೆಗೆ ಪ್ರತಿಪಕ್ಷ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಯಾವಾಗ ಈ ಪ್ರಸ್ತಾಪ ವಿವಾದದ ಕಿಡಿ ಹಚ್ಚಿಸಿತೋ ಕೂಡಲೇ ಸಿಎಂ ಕಚೇರಿ ಆ ರೀತಿಯ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿ, ವಿವಾದಕ್ಕೆ ತೆರೆ ಎಳೆಯಿತು.

ವಕ್ಫ್ ಆಸ್ತಿ ನೋಟಿಸ್:ಈ ವರ್ಷ ಕಾಂಗ್ರೆಸ್ ಸರ್ಕಾರವನ್ನು ದೊಡ್ಡ ಮಟ್ಟಿಗೆ ಕಾಡಿದ ವಿವಾದ ವಕ್ಫ್ ಆಸ್ತಿ ನೋಟಿಸ್.‌ ವಿಜಯಪುರ ಜಿಲ್ಲೆಯಿಂದ ಆರಂಭವಾದ ವಕ್ಫ್‌ ಆಸ್ತಿಯ ಖಾತೆ ಪ್ರಕ್ರಿಯೆ ವಿವಾದದ ಸ್ವರೂಪ ಪಡೆದಿತ್ತು. ಹಲವು ರೈತರಿಗೆ, ಮಠಗಳಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿರುವುದು ದೊಡ್ಡ ವಿವಾದಕ್ಕೆ ಕಾರಣವಾಯಿತು. ಹಲವು ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮದ್ ವಕ್ಫ್ ಅದಾಲತ್ ಮಾಡಿ ವಕ್ಫ್ ಆಸ್ತಿ ಒತ್ತುವರಿ ತೆರವಿಗೆ ಖಡಕ್ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ರೈತರು ಸೇರಿದಂತೆ ಹಲವರಿಗೆ ವಕ್ಫ್ ಬೋರ್ಡ್ ನೋಟಿಸ್ ಜಾರಿ ಮಾಡುವ ಮೂಲಕ ವಿವಾದದ ಕಿಡಿ ಹಚ್ಚಿತ್ತು. ಇದರ ವಿರುದ್ಧ ಬಿಜೆಪಿ ದೊಡ್ಡ ಹೋರಾಟ ನಡೆಸಿತು. ಮಹಾರಾಷ್ಟ್ರ ಚುನಾವಣೆಯಲ್ಲೂ ರಾಜ್ಯದ ವಕ್ಫ್ ವಿವಾದ ಸದ್ದು ಮಾಡಿತು. ಹೋರಾಟ, ವಿವಾದ ಹೆಚ್ಚಾಗುತ್ತಿದ್ದ ಹಾಗೆಯೇ ರೈತರಿಗೆ ನೋಟಿಸ್ ನೀಡದಂತೆ ಮತ್ತು ನೀಡಿರುವ ನೋಟಿಸ್ ವಾಪಸ್ ಪಡೆಯುವಂತೆ ಸಿಎಂ ಸಿದ್ದರಾಮಯ್ಯ ನಿರ್ದೇಶನ ನೀಡಿದರು. ರೈತರು ಹಾಗೂ ಇತರೆ ಆಸ್ತಿಗಳನ್ನು ವಕ್ಫ್‌ ಮಂಡಳಿಯ ಹೆಸರಿಗೆ ಖಾತೆ ಮಾಡಬಾರದು. ಮುಟೇಷನ್‌ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಕಂದಾಯ ಇಲಾಖೆ ಆದೇಶ ಹೊರಡಿಸಿತು.

ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್​:ಹುಬ್ಬಳ್ಳಿಯಲ್ಲಿ 2022ರ ಏಪ್ರಿಲ್ 16ರಂದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಗುಂಪೊಂದರ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಹಿಂಪಡೆಯುವ ಕಾಂಗ್ರೆಸ್ ಸರ್ಕಾರದ ತೀರ್ಮಾನ ಮತ್ತೊಂದು ದೊಡ್ಡ ವಿವಾದಕ್ಕೆ ಕಾರಣವಾಯಿತು.‌ ಕೇಸು ವಾಪಸ್ ಪಡೆಯುವ ಸಂಬಂಧ ಅಂಜುಮನ್-ಎ-ಇಸ್ಲಾಂ ಗೃಹ ಸಚಿವ ಜಿ.ಪರಮೇಶ್ವರ್​ ಅವರಿಗೆ ಮನವಿ ಸಲ್ಲಿಸಿತ್ತು. ಇದರ ಬೆನ್ನಲ್ಲೇ ಸಚಿವ ಸಂಪುಟ ಸಭೆಯಲ್ಲಿ ಪ್ರಕರಣ ಹಿಂಪಡೆಯಲು ನಿರ್ಧರಿಸಲಾಯಿತು. ಗಲಭೆಯ ಹಿನ್ನೆಲೆಯಲ್ಲಿ ಪೊಲೀಸರು 12 ಪ್ರಕರಣಗಳನ್ನು ದಾಖಲಿಸಿ, 158 ಮಂದಿಯನ್ನು ಬಂಧಿಸಿದ್ದರು. ಸಂಪುಟ ಸಭೆಯಲ್ಲಿ ಆರೋಪಿಗಳ ಮೇಲಿನ 43 ಕೇಸ್‌ಗಳನ್ನು ಸರ್ಕಾರ ವಾಪಸ್ ಪಡೆಯಲು ತೀರ್ಮಾನಿಸಿತು. ಹುಬ್ಬಳ್ಳಿ ಗಲಭೆ ಪ್ರಕರಣದ ಪ್ರಕರಣ ವಾಪಸ್ ಪಡೆದ ತೀರ್ಮಾನ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಯಿತು.‌

ಗಿಗ್ ಕಾರ್ಮಿಕರ ಮಸೂದೆ:ರಾಜ್ಯ ಸರ್ಕಾರ ಯು-ಟರ್ನ್ ಮಾಡಿದ ಮತ್ತೊಂದು ತೀರ್ಮಾನ ಉದ್ದೇಶಿತ ಗಿಗ್‌ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ. ಗಿಗ್‌ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ನೆರವು ಒದಗಿಸಲು ಪ್ರತ್ಯೇಕ ಗಿಗ್‌ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸುವ ಮಸೂದೆ ಇದಾಗಿದೆ. ಗಿಗ್‌ ಕಾರ್ಮಿಕರ ಮಸೂದೆ-2024ರ ಕರಡನ್ನು ಕಾರ್ಮಿಕ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಮಸೂದೆಗೆ ಅಂಗೀಕಾರ ಪಡೆಯಲು ಉದ್ದೇಶಿಸಿತ್ತು. ಕಾಯ್ದೆಯನ್ನು ಉಲ್ಲಂಘಿಸುವವರಿಗೆ ₹1 ಲಕ್ಷದವರೆಗೆ ದಂಡ ವಿಧಿಸುವುದಕ್ಕೂ ಅವಕಾಶ ಹಾಗೂ ಗಿಗ್‌ ಕಾರ್ಮಿಕರ ಸೇವೆ ಬಳಸಿಕೊಳ್ಳುವ ಕಂಪನಿಗಳಲ್ಲಿ ತಪಾಸಣೆ ನಡೆಸುವ ಅಧಿಕಾರವನ್ನೂ ಮಸೂದೆಯ ಕಾರ್ಮಿಕ ಇಲಾಖೆಗೆ ನೀಡಿತ್ತು. ಆದರೆ, NASSCOM ಸೇರಿ ಉದ್ಯಮಿಗಳು ಸಿಎಂ ಸಿದ್ದರಾಮಯ್ಯಗೆ ಮಸೂದೆ ಸಂಬಂಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಉದ್ಯಮಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಪ್ರಸ್ತಾಪಿತ ಮಸೂದೆ ಮಂಡನೆಯನ್ನು ಸರ್ಕಾರ ತಾತ್ಕಾಲಿಕವಾಗಿ ತಡೆಹಿಡಿಯಬೇಕಾಯಿತು.

ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಬಿಲ್:ಜುಲೈ ತಿಂಗಳಲ್ಲಿ ರಾಜ್ಯದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಪ್ರಸ್ತಾಪಿತ ಮಸೂದೆ ಮತ್ತೊಂದು ವಿವಾದಕ್ಕೆ ಆಹಾರವಾಯಿತು.‌ ಸ್ಥಳೀಯರಿಗೆ ಮೀಸಲಾತಿ ಕಲ್ಪಿಸುವ ಸರ್ಕಾರದ ಈ ನಡೆಗೆ ಉದ್ಯಮ ವಲಯದಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಯಿತು. ರಾಜ್ಯದ ಖಾಸಗಿ ಉದ್ದಿಮೆಗಳ 'ಸಿ' ಮತ್ತು 'ಡಿ' ದರ್ಜೆಯ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ 100ರಷ್ಟು ಮೀಸಲಾತಿ ನೀಡುವ ಮಸೂದೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಆದರೆ, ಉದ್ಯಮಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಸಿಎಂ ಆ ಪೋಸ್ಟನ್ನು ಅಳಿಸಿದರು. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲು ಬಗ್ಗೆ ಸಂಪುಟ ಸಭೆಯಲ್ಲಿ ಅರ್ಧಂಬರ್ಧ ಚರ್ಚೆ ಆಗಿತ್ತು. ಮುಂದಿನ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು. ಈ ವಿಚಾರವಾಗಿ ಸ್ವಲ್ಪ ಗೊಂದಲವಿದೆ. ಗೊಂದಲ ನಿವಾರಣೆಗಾಗಿ ಮತ್ತೆ ಸಂಪುಟದಲ್ಲಿ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿವಾದಕ್ಕೆ ತೆರೆ ಎಳೆದಿದ್ದರು.

ಡಿಕೆಶಿ ಮೇಲಿನ ಸಿಬಿಐ ತನಿಖೆ ಅನುಮತಿ ಹಿಂಪಡೆ:ಅಕ್ರಮ ಆಸ್ತಿಗಳಿಕೆ ಪ್ರಕರಣ ಸಂಬಂಧ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿ ಆದೇಶಿಸಿದ್ದ ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಆದೇಶವನ್ನು ಹಿಂಪಡೆಯಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದ್ದು, ದೊಡ್ಡ ವಿವಾದ ಸೃಷ್ಟಿಸಿತು.‌ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣವನ್ನು ಸೆ.25, 2019ರಂದು ದೆಹಲಿ ವಿಶೇಷ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಕಾಯ್ದೆ 1946 ಅಡಿ ಸೆಕ್ಷನ್ 6 ಅನ್ವಯ ತನಿಖೆ ಕೈಗೊಳ್ಳಲು ಸಿಬಿಐಗೆ ವಹಿಸಿ ಆದೇಶಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿತ್ತು. ಈ ಸಚಿವ ಸಂಪುಟ ಸಭೆಗೆ ಡಿಸಿಎಂ ಡಿಕೆಶಿ ಗೈರಾಗಿದ್ದರು. ಹಿಂದಿನ ಅಡ್ವೊಕೇಟ್ ಜನರಲ್ ಮತ್ತು ನಮ್ಮ ಸರ್ಕಾರದ ಅಡ್ವೊಕೇಟ್ ಜನರಲ್ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಿ ಸ್ಪೀಕರ್​ರಿಂದ ಪಡೆಯಬೇಕಾದ ಅನುಮತಿಯನ್ನು ನಿಯಮಾನುಸಾರವಾಗಿ ಪಡೆಯದೆ ಅಂದಿನ ಸರ್ಕಾರ ತೆಗೆದುಕೊಂಡಿದ್ದ ಕ್ರಮ ಕಾನೂನು ಪ್ರಕಾರ ಇದ್ದಿಲ್ಲ ಎಂದು ಸಂಪುಟ ಸಭೆ ತೀರ್ಮಾನಿಸಿತ್ತು.‌ ವಿಪಕ್ಷ ಈ ತೀರ್ಮಾನದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಸಿಬಿಐ ತನಿಖೆ ಕುಣಿಕೆಯಿಂದ ತಪ್ಪಿಸಲು ಡಿಕೆಶಿ ಪ್ರಭಾವ ಬಳಸಿ ತಮ್ಮ ಅಧಿಕಾರ ದುರುಪಯೋಗ ಪಡಿಸಿರುವ ಗಂಭೀರ ಆರೋಪ ಕೇಳಿ ಬಂದಿತ್ತು. ರಾಜ್ಯ ಸರ್ಕಾರದ ಈ ತೀರ್ಮಾನ ದೊಡ್ಡ ವಿವಾದಕ್ಕೆ ಕಾರಣವಾಯಿತು.

ಪೆಟ್ರೋಲ್, ಡೀಸೆಲ್, ಹಾಲಿನ ದರ ಏರಿಕೆ:ರಾಜ್ಯ ಸರ್ಕಾರ ಈ ವರ್ಷ ಒಂದರ ಹಿಂದೊಂದರಂತೆ ದರ ಏರಿಕೆಯ ತೀರ್ಮಾನಗಳಿಂದ ಸದ್ದು ಮಾಡಿದವು. ಜೂನ್​​​ ತಿಂಗಳಲ್ಲಿ ರಾಜ್ಯದಲ್ಲಿ ಪೆಟ್ರೋಲ್‌ ₹3.02 ಹಾಗೂ ಡೀಸೆಲ್‌ ಬೆಲೆಯಲ್ಲಿ ₹3 ಹೆಚ್ಚಳ ಮಾಡಿರುವುದು ದೊಡ್ಡ ವಿವಾದ ಸೃಷ್ಟಿಸಿತು. ಈ ಬೆಲೆ ಏರಿಕೆಯಿಂದ ರಾಜ್ಯದ ಜನರು ಹಾಗೂ ಪ್ರತಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು. ಗ್ಯಾರಂಟಿ ಹೊರೆಗೆ ಪೆಟ್ರೋಲ್ ಬೆಲೆ ಏರಿಕೆ ಮಾಡಿರುವುದಾಗಿ ವಿಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದಿತ್ತು. ಪೆಟ್ರೋಲ್​, ಡೀಸೆಲ್​ ಮೇಲಿನ ಮೌಲ್ಯವರ್ಧಿತ ತೆರಿಗೆ ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಲು ಕೇಂದ್ರ ಸರ್ಕಾರ ನೇರ ಹೊಣೆ ಎಂದು ಸಿಎಂ ಸಿದ್ದರಾಮಯ್ಯ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದರು. ರಾಜ್ಯದ ತೆರಿಗೆ ಪಾಲನ್ನು ಕೇಂದ್ರ ಕೊಡದ ಹಿನ್ನೆಲೆಯಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಸಂಪನ್ಮೂಲಕ ಕ್ರೋಡೀಕರಣ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ತೆರಿಗೆ ಹೆಚ್ಚಳ ಮಾಡಬೇಕಾಯಿತು ಎಂಬುದು ಸರ್ಕಾರದ ವಾದವಾಗಿತ್ತು.

ಇದರ ಬೆನ್ನಲ್ಲೇ ಜೂನ್​ನಲ್ಲಿ ಕೆಎಂಎಫ್​ ಪ್ರತಿ ಲೀಟರ್​ ಹಾಲಿಗೆ 2 ರೂ. ಹೆಚ್ಚಳ ಮಾಡಿತ್ತು. ಜೊತೆಗೆ ಅರ್ಧ ಲೀಟರ್​ ಹಾಲಿಗೆ 50 ಎಂಎಲ್​ ಹಾಲನ್ನು ಹೆಚ್ಚುವರಿ ಮಾಡಿತ್ತು. ಈ ಬೆಲೆ ಏರಿಕೆ ಮತ್ತೆ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಯಿತು.

ಇದನ್ನೂ ಓದಿ:ಕಂಡು ಕೇಳರಿಯದ ಪ್ರಕರಣಗಳಿಗೆ ಸಾಕ್ಷಿಯಾದ 2024: ತೀವ್ರ ಸಂಚಲನ ಮೂಡಿಸಿದ್ದ ಪ್ರಮುಖ ಅಪರಾಧ ಪ್ರಕರಣಗಳು

Last Updated : Jan 1, 2025, 6:29 AM IST

ABOUT THE AUTHOR

...view details