ಬೆಂಗಳೂರು: ಕೃತಕ ಬಣ್ಣದ ಬೆರೆಸುವಿಕೆಯಿಂದಾಗಿ ಸಾರ್ವಜನಿಕರ ಮತ್ತು ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಿನ್ನೆಲೆ ರಾಜ್ಯದಲ್ಲಿ ಕಲರ್ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿ ತಯಾರಿಕೆಯಲ್ಲಿ ಅಪಾಯಕಾರಿ ಕೃತಕ ಬಣ್ಣಗಳನ್ನು ಬೆರೆಸುವುದನ್ನು ರಾಜ್ಯ ಸರ್ಕಾರ ನಿರ್ಬಂಧಿಸಿದೆ.
ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು, "ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಗೋಬಿ ಮಂಚೂರಿ ಮತ್ತು ಕಲರ್ ಕಾಟನ್ ಕ್ಯಾಂಡಿಗಳ ಗುಣಮಟ್ಟ ಕೃತಕ ಬಣ್ಣ ಬೆರಸುವಿಕೆಯಿಂದಾಗಿ ಕಳಪೆಯಿಂದ ಕೂಡಿದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಗೋಬಿ ಮಂಚೂರಿ ಮತ್ತು ಕಲರ್ ಕಾಟನ್ ಕ್ಯಾಂಡಿಗಳ ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಲಾಗಿದೆ" ಎಂದು ತಿಳಿಸಿದರು.
"ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ 'ರೋಡಮೈನ್-ಬಿ' ಹಾಗೂ ಗೋಬಿ ಮಂಚೂರಿಯಲ್ಲಿ 'ಸನ್‌ಸೆಟ್ ಯೆಲ್ಲೊ' ಬಣ್ಣ ಮತ್ತು 'ಟಾಟ್ರಾಜಿನ್' ರಾಸಾಯನಿಕ ಅಂಶ ಪತ್ತೆಯಾಗಿದೆ. ಕಲರ್ ಕಾಟನ್ ಕ್ಯಾಂಡಿ ಮಾರಾಟ ಮಾಡುವಂತಿಲ್ಲ. ಹಾಗೆಯೇ ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣ ಬಳಸಿದರೇ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ 59ರ ಅಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ತಪ್ಪಿತಸ್ಥರು ಎಂದು ಕಂಡು ಬಂದರೆ 7 ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ. ವರೆಗೂ ದಂಡ ವಿಧಿಸಬಹುದು" ಎಂದು ಎಚ್ಚರಿಕೆ ನೀಡಿದರು.
"ರಾಜ್ಯದಲ್ಲಿ ಅಪಾಯಕಾರಿಯಾದ ಕಾಟನ್ ಕ್ಯಾಂಡಿ ಬ್ಯಾನ್ ಮಾಡಲಾಗಿದೆ. ಬಿಳಿ ಬಣ್ಣದ ಕ್ಯಾಂಡಿ ಬಳಕೆ ಮಾಡಬಹುದು. ಇನ್ನು ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವಂತಿಲ್ಲ. ಈ ಬಗ್ಗೆ ಸುತ್ತೋಲೆ ಹೊರಡಿಸಲಾಗುತ್ತದೆ. ಕ್ಯಾಂಡಿ ಮಾರಾಟ ಮಾಡಿದರೆ ಮತ್ತು ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣ ಬಳಸಿದರೇ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಹೇಳಿದರು.
"ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೋಟೆಲ್ ಮತ್ತಿತರ ಕಡೆಗಳಲ್ಲಿ ಆಹಾರ ಸೇವನೆ ಮಾಡುತ್ತಾರೆ. ಇದರಿಂದ ಕ್ಯಾನ್ಸರ್ ಹಾಗೂ ಅಸಾಂಕ್ರಮಿಕ ಖಾಯಿಲೆ ಏರಿಕೆಯಾಗುತ್ತಿದೆ. ಸರಿಯಾದ ಆಹಾರ ತಯಾರು ಮಾಡದಿರುವುದು ಸಮಸ್ಯೆಗೆ ಕಾರಣವಾಗಿದೆ. ಹೆಚ್ಚು ಕೊಬ್ಬುಕಾರಕ, ಉಪ್ಪು ಹಾಗೂ ಸಕ್ಕರೆಯ ಆಹಾರ ಬಳಕೆಯಾಗುತ್ತಿದೆ. ಹೀಗಾಗಿ 171 ತರಹದ ಗೋಬಿ ಮಂಚೂರಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡಿದ್ದೇವೆ. ಇದರಲ್ಲಿ 107 ಮಾದರಿಯಲ್ಲಿ ಕೃತಕ ಬಣ್ಣ ಕಂಡು ಬಂದಿದೆ. 64 ಸುರಕ್ಷಿತವಾದ ಮಾದರಿಗಳು ಕಂಡು ಬಂದಿದೆ. ಅಸುರಕ್ಷಿತ ಗೋಬಿ ಮಂಚೂರಿ ಮಾದರಿಗಳಲ್ಲಿ ಟಾಟ್ರ್ರಾಜಿನ್, ಸನ್ ಸೆಟ್ ಮತ್ತು ಕಾರ್ಮೋಸಿನ್‌ನಂತ ಕೃತಕ ಬಣ್ಣಗಳನ್ನು ಬಳಸಲಾಗಿದೆ. ಇವು ಆರೋಗ್ಯಕ್ಕೆ ತುಂಬಾ ಅಪಾಯಕಾರಿ" ಎಂದು ಸಚಿವರು ಮಾಹಿತಿ ನೀಡಿದರು.
"ಮಂಚೂರಿಯ ಮಾದರಿಗಳನ್ನು ಸಂಗ್ರಹಿಸಿ, ರಾಜ್ಯ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಲಾಗಿದೆ. ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ 171 ಮಂಚೂರಿಯ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದೆ. ವಿಶ್ಲೇಷಣೆಗೊಳಪಡಿಸಲಾದ ಮಾದರಿಗಳಲ್ಲಿ ಪ್ರಯೋಗಾಲಯಗಳಲ್ಲಿ 107 ಮಂಚೂರಿಯ ಮಾದರಿಗಳು ಕೃತಕ ಬಣ್ಣದಿಂದ (ಟಾರ್‌ಟ್ರಾಸೈನ್ ಕೃತಕ ಬಣ್ಣ - 12 ಮಾದರಿಗಳು, ಸನ್‌ಸೆಟ್ ಯೆಲ್ಲೋ 62 ಮಾದರಿಗಳು ಮತ್ತು ಸನ್‌ಸೆಟ್ ಯೆಲ್ಲೋ ಹಾಗೂ ಕಾರ್ಮೋನ್ ಹೊಂದಿರುವ ಮಾದರಿಗಳು 33) ಕೂಡಿರುವುದರಿಂದ ಅಸುರಕ್ಷಿತ ಎಂದು ವರದಿ ಬಂದಿದೆ. ಹಾಗಾಗಿ, ಕೃತಕ ಬಣ್ಣ ಬಳಸುವುದನ್ನು ನಿರ್ಬಂಧಿಸಲಾಗಿದೆ. ಕಬಾಬ್ ಪೌಡರ್ ಸೇರಿದಂತೆ ಇತರ ಆಹಾರ ಪದಾರ್ಥಗಳನ್ನು ಸಹ ಮುಂದಿನ ದಿನಗಳಲ್ಲಿ ಪರೀಕ್ಷಿಸಲಾಗುವುದು" ಎಂದು ಸಚಿವರು ಹೇಳಿದರು.
ಗೋಬಿ ಮಂಚೂರಿ ಮಾದರಿಗಳ ವಿವರ:
- ಸಂಗ್ರಹಿಸಲಾದ ಮಾದರಿಗಳು - 171
- ಕೃತಕ ಬಣ್ಣಗಳು ಕಂಡುಬಂದ ಅಸುರಕ್ಷಿತ ಮಾದರಿಗಳು - 107
- ತಕ ಬಣ್ಣಗಳಿಲ್ಲದೆ ಇರುವ ಸುರಕ್ಷಿತ ಮಾದರಿಗಳು - 64
- ಕಂಡುಬಂದಿರುವ ಕೃತಕ ಬಣ್ಣಗಳು ಟಾರ್‌ಟ್ರಾಸೈನ್, ಸನ್‌ಸೆಟ್ ಯೆಲ್ಲೋ ಮತ್ತು ಕಾರ್ಮೋನ್
ಕಾಟನ್ ಕ್ಯಾಂಡಿ ಮಾದರಿಗಳ ವಿವರ:
- ಸಂಗ್ರಹಿಸಲಾದ ಮಾದರಿಗಳು - 25
- ಕೃತಕ ಬಣ್ಣಗಳು ಕಂಡುಬಂದ ಅಸುರಕ್ಷಿತ ಮಾದರಿಗಳು - 15
- ಕೃತಕ ಬಣ್ಣಗಳಿಲ್ಲದೆ ಇರುವ ಸುರಕ್ಷಿತ ಮಾದರಿಗಳು - 10
- ಕಂಡುಬಂದಿರುವ ಕೃತಕ ಬಣ್ಣಗಳು - ಟಾರ್‌ಟ್ರಾಸೈನ್, ಸನ್‌ಸೆಟ್ ಯೆಲ್ಲೋ ಮತ್ತು ರೋಡಮೈನ್-ಬಿ
ಇದನ್ನೂ ಓದಿ:ಗೋಬಿ ಮಂಚೂರಿ ನಿಷೇಧ ಕುರಿತು ಪರೀಕ್ಷೆ, ವರದಿ ಬಳಿಕ ಮುಂದಿನ ಕ್ರಮ: ಸಚಿವ ದಿನೇಶ್ ಗುಂಡೂರಾವ್