ಬೆಂಗಳೂರು:ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿರುವ 8 ಕ್ಷೇತ್ರಗಳಲ್ಲಿ 7 ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬಿಜೆಪಿಯ ಅವಲೋಕನಾ ಸಭೆ ಮುಗಿದಿದೆ. ಗೆಲ್ಲುವ ಅವಕಾಶವಿದ್ದ ಮೂರು ಕ್ಷೇತ್ರ ಕಳೆದುಕೊಳ್ಳಲು ಸ್ಥಳೀಯ ನಾಯಕರ ಅಸಹಕಾರ ಕಾರಣಗಿದ್ದು, ಒಂದು ಕ್ಷೇತ್ರದಲ್ಲಿ ಚುನಾವಣೆಗೆ ಮೊದಲೇ ಸೋಲೊಪ್ಪಿದ ನಡೆ ಹಾಗೂ ಮೂರು ಕ್ಷೇತ್ರಗಳಲ್ಲಿ ಹಲವು ಕಾರಣಗಳಿಂದಾಗಿ ಪಕ್ಷಕ್ಕೆ ಸೋಲಾಗಿದೆ ಎನ್ನುವ ಮಾಹಿತಿ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಪಕ್ಷದ ನಿರ್ದೇಶನ ಪಾಲಿಸದೇ ಅಸಹಕಾರ ತೋರಿರುವ ನಾಯಕರಿಗೆ ಬಿಸಿ ಮುಟ್ಟಿಸಿಯೇ ವಸ್ತುಸ್ಥಿತಿಯ ವಿವರಗಳನ್ನು ರಾಜ್ಯ ಉಸ್ತುವಾರಿ ಹೈಕಮಾಂಡ್ಗೆ ತಲುಪಿಸಿದ್ದಾರೆ.
ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಎರಡು ದಿನಗಳ ಕಾಲ ಸೋತ ಕ್ಷೇತ್ರಗಳ ಅವಲೋಕನಾ ಸಭೆಯನ್ನು ನಡೆಸಲಾಯಿತು. ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೊದಲ ದಿನ ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ ಕ್ಷೇತ್ರಗಳ ಸಭೆ ನಡೆಸಿದರೆ. ಎರಡನೇ ದಿನ ಬೀದರ್, ಚಿಕ್ಕೋಡಿ, ಚಾಮರಾಜನಗರ ಕ್ಷೇತ್ರಗಳ ಸಭೆ ನಡೆಸಲಾಯಿತು.
ದಾವಣಗೆರೆ ಕ್ಷೇತ್ರದ ಕುರಿತ ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ. ಈ ಏಳು ಕ್ಷೇತ್ರಗಳಲ್ಲಿ ಕಲಬುರಗಿ, ಬೀದರ್, ಚಿಕ್ಕೋಡಿ ಕ್ಷೇತ್ರಗಳ ಸೋಲಿಗೆ ರಾಜ್ಯ ಉಸ್ತುವಾರಿಗಳು ಗರಂ ಆದರು. ಹೊಂದಾಣಿಕೆ ರಾಜಕಾರಣ, ಅಸಹಕಾರದಂತಹ ನಡೆ ಪಕ್ಷ ವಿರೋಧಿ ಚಟುವಟಿಕೆಗೆ ಸಮವಾಗಿರಲಿದೆ. ಪಕ್ಷದ ನಿರ್ದೇಶನ ಪಾಲಿಸದೇ ಪಕ್ಷದ ಹಿನ್ನಡೆಗೆ ಕಾರಣವಾಗಿದ್ದೀರಿ. ಇಂತಹ ವರ್ತನೆ ಮರುಕಳಿಸಿದರೆ ಕ್ರಮ ಖಚಿತ ಎಂದು ನೇರವಾಗಿಯೇ ಸ್ಥಳೀಯ ಪ್ರಭಾವಿ ಮುಖಂಡರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಚಾಮರಾಜನಗರ ವಿಚಾರದಲ್ಲಿಯೂ ಸ್ಥಳೀಯ ನಾಯಕರು ಯುದ್ದಕ್ಕೆ ಮೊದಲೇ ಶಸ್ತ್ರತ್ಯಾಗ ಮಾಡಿದ ಮನೋಭಾವ ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಹೊಂದಾಣಿಕೆಯಿಂದ ಕಲಬುರಗಿ ಸೋಲು:ಕಳೆದ ಬಾರಿ ಕಾಂಗ್ರೆಸ್ನ ಪ್ರಭಾವಿ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ವಶಕ್ಕೆ ಪಡೆದಿದ್ದ ಕಲಬುರಗಿ ಕ್ಷೇತ್ರವನ್ನು ಈ ಬಾರಿ ಕಳೆದುಕೊಂಡಿದ್ದಕ್ಕೆ ಅವಲೋಕನಾ ಸಭೆಯಲ್ಲಿ ಅಭ್ಯರ್ಥಿಯನ್ನೂ ಒಳಗೊಂಡಂತೆ ಸ್ಥಳೀಯ ಮುಖಂಡರಿಗೆ ಕ್ಲಾಸ್ ತೆಗೆದುಕೊಳ್ಳಲಾಗಿದೆ. ಅಂಕಿ - ಅಂಶಗಳೊಂದಿಗೆ ಕುಳಿತಿದ್ದ ರಾಜ್ಯ ಉಸ್ತುವಾರಿ, ಸ್ಥಳೀಯ ನಾಯಕರಿಂದ ಇಂಚಿಂಚೂ ವಿವರಣೆ ಪಡೆದುಕೊಂಡರು. ಜಿಲ್ಲಾ ಘಟಕದ ವಿರುದ್ಧವೇ ಆರೋಪ ಬರುತ್ತಿದ್ದಂತೆ ಕೆರಳಿದ ಅಗರ್ವಾಲ್, ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಧಾನಸಭೆ ಚುನಾವಣೆ ವೇಳೆ ಪಡೆದ ಮತಕ್ಕಿಂತ ಕಡಿಮೆ ಮತ ಬಂದಿದೆ ಎಂದರೆ ಸೋಲಿಗೆ ಒಳಮೈತ್ರಿಯೇ ಕಾರಣವಲ್ಲವೇ ಎಂದು ಸ್ಥಳೀಯ ನಾಯಕರನ್ನು ತರಾಟೆ ತೆಗೆದುಕೊಂಡರು.
ಈ ವೇಳೆ ಕೆಲವರು ಅಭ್ಯರ್ಥಿ ಡಾ. ಉಮೇಶ್ ಜಾದವ್ ವಿರುದ್ಧವೇ ಬೆರಳು ತೋರಿದ್ದು, ಸಭೆ ಮುಖಂಡರ ನಡುವಿನ ಆರೋಪ - ಪ್ರತ್ಯಾರೋಪಕ್ಕೆ ವೇದಿಕೆಯಾಯಿತು. ಕೂಡಲೇ ಮಧ್ಯಪ್ರವೇಶ ಮಾಡಿದ ವಿಜಯೇಂದ್ರ, ಜಿಲ್ಲೆಯ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ. ಯಾರೆಲ್ಲ ಪಕ್ಷದ ವಿರುದ್ಧ ಮಸಲತ್ತು ಮಾಡಿದ್ದಾರೆ ಎಂದು ಗೊತ್ತು, ಇಂತಹ ನಡೆ ಮರುಕಳಿಸಿದರೆ ಶಿಸ್ತುಕ್ರಮ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಒಳಜಗಳಕ್ಕೆ ಬೀದರ್ ಸೋಲು:ಬೀದರ್ನಲ್ಲಿ ಕೇಂದ್ರ ಸಚಿವರಾಗಿದ್ದ ಭಗವಂತ ಖೂಬಾ ಸೋಲಿಗೆ ಒಳಜಗಳಗಳೇ ಕಾರಣ ಎನ್ನುವುದು ಅವಲೋಕನಾ ಸಭೆಯಲ್ಲಿ ಸ್ಪಷ್ಟವಾಗಿದೆ. ಸ್ಥಳೀಯ ನಾಯಕರು ಹಾಗೂ ಅಭ್ಯರ್ಥಿ ನಡುವಿನ ಕಲಹಕ್ಕೆ ಪಕ್ಷ ನಷ್ಟವನ್ನು ಅನುಭವಿಸುವಂತಾಯಿತು ಎಂದು ರಾಜ್ಯ ಉಸ್ತುವಾರಿ ಅಗರ್ವಾಲ್ ನೇರವಾಗಿಯೇ ಸ್ಥಳೀಯ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ವರಿಷ್ಠರು ಅಭ್ಯರ್ಥಿಯನ್ನು ಫೈನಲ್ ಮಾಡಿದ ಮೇಲೆ ಕೆಲಸ ಮಾಡಬೇಕಾಗಿತ್ತು. ಅದನ್ನು ಬಿಟ್ಟು ಒಳಜಗಳ, ತಟಸ್ಥ ನಿಲುವು ತಳೆದ ಕಾರಣ ಪಕ್ಷಕ್ಕೆ ಹೊಡೆತ ಬಿದ್ದಿದೆ. ನಿಮ್ಮಂತಹವರಿಂದ ದೇಶದಲ್ಲಿ ಇದೇ ರೀತಿ 50 ರಿಂದ 60 ಸ್ಥಾನಗಳಲ್ಲಿ ಸೋತಿದ್ದೇವೆ ಎಂದು ಗರಂ ಆದರು, ಅಲ್ಲದೇ ಅಭ್ಯರ್ಥಿಯಾದ ನೀವು ಕೇಂದ್ರ ಸಚಿವರಾಗಿದ್ದವರು. ಪರಿಸ್ಥಿತಿ ತಿಳಿಗೊಳಿಸಿ ಸಮಸ್ಯೆ ಪರಿಹರಿಸಿಕೊಳ್ಳದಿದ್ದದ್ದು ಏಕೆ ಎಂದು ಪ್ರಶ್ನಿಸಿದರು. ಇದೇ ರೀತಿ ಮುಂದುವರಿದರೆ ಮುಲಾಜಿಲ್ಲದೇ ಕ್ರಮವಾಗಲಿದೆ ಎಂದು ಪರಾಜಿತ ಅಭ್ಯರ್ಥಿ ಭಗವಂತ ಖೂಬಾ, ಬೀದರ್ ಜಿಲ್ಲೆಯ ಪಕ್ಷದ ಶಾಸಕರು, ಪ್ರಮುಖರು, ಪದಾಧಿಕಾರಿಗಳಿಗೆ ಗಂಭೀರ ಎಚ್ಚರಿಕೆ ನೀಡಿದರು ಎಂದು ಪಕ್ಷದ ಮೂಲಗಳು ಹೇಳಿವೆ.
ನಿರ್ಲಕ್ಷ್ಯಕ್ಕೆ ಚಿಕ್ಕೋಡಿ ಸೋಲು:ಚಿಕ್ಕೋಡಿ ಸೋಲಿಗೆ ಕತ್ತಿ ಕುಟುಂಬವನ್ನೂ ಒಳಗೊಂಡಂತೆ ಕ್ಷೇತ್ರದ ಪ್ರಮುಖ ನಾಯಕರ ಹೆಸರು ಉಲ್ಲೇಖಿಸಿಯೇ ಅಗರ್ವಾಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕ್ಷೇತ್ರದಲ್ಲಿ ಹಿರಿಯ ಮುಖಂಡರು ಏನು ಮಾಡಿದರು ಎಂದು ಗೊತ್ತಿದೆ. ಕೆಲವರಂತೂ ಕಾಂಗ್ರೆಸ್ ಅಭ್ಯರ್ಥಿ ಜತೆಗೆ ಕೈಜೋಡಿಸಿರುವ ಮಾಹಿತಿಯಿದೆ. ಹಿರಿಯ ಮುಖಂಡರು ದೂರ ಉಳಿದ ಕಾರಣಕ್ಕೆ ಬೆಂಬಲಿಗರು ಬರಲಿಲ್ಲ. ನಿಮ್ಮ ಮೇಲಿಟ್ಟ ನಿರೀಕ್ಷೆ ಹುಸಿ ಮಾಡಿದಿರಿ ಎಂದು ತರಾಟೆಗೆ ತೆಗೆದುಕೊಂಡರು. ಅಭ್ಯರ್ಥಿ ಅಣ್ಣಾ ಸಾಹೇಬ್ ಜೊಲ್ಲೆ ವಿರುದ್ಧ ಆರೋಪಕ್ಕೆ ಸ್ಥಳೀಯ ನಾಯಕರು ಮುಂದಾಗುತ್ತಿದ್ದಂತೆ ಲೋಕಸಭೆ ಚುನಾವಣೆಗೆ ಉಸ್ತುವಾರಿಯಾಗಿದ್ದೆ ಎನ್ನುವುದು ನೆನಪಿರಲಿ. ಪ್ರತಿಯೊಂದು ಕ್ಷೇತ್ರದ ಮಾಹಿತಿ, ವಿವರಗಳು ನನ್ನ ಬಳಿಯಿವೆ. ಇನ್ಮುಂದೆ ಇಂತಹದ್ದೆಲ್ಲಾ ನಡೆಯಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದರು ಎಂದು ತಿಳಿದು ಬಂದಿದೆ.