ಮಂಗಳೂರು:ಜನರಿಗೆ ಮೋಸ ಮಾಡಲು ವಂಚಕರು ಹಲವಾರು ತಂತ್ರಗಳನ್ನು ಅನುಸರಿಸುತ್ತಾರೆ. ನಗರದ ಪೆಟ್ರೋಲ್ ಬಂಕ್ನ ಸಿಬ್ಬಂದಿಯೊಬ್ಬ ಸಂಸ್ಥೆಯ ಕ್ಯೂಆರ್ ಕೋಡ್ ಬದಲಿಗೆ ತನ್ನ ವೈಯಕ್ತಿಕ ಕ್ಯೂಆರ್ ಕೋಡ್ ಬಳಸಿ ವಂಚನೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಮಂಗಳೂರು ಬಂಗ್ರಕೂಳೂರು ನಲ್ಲಿರುವ ರಿಯಲನ್ಸ್ ಔಟ್ ಲೆಟ್ನ ಮ್ಯಾನೇಜರ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಂಗ್ರಕೂಳೂರು ನಲ್ಲಿರುವ ರಿಲಯನ್ಸ್ ಔಟ್ ಲೆಟ್ ಪೆಟ್ರೋಲ್ ಬಂಕ್ನಲ್ಲಿ ಸುಮಾರು 15 ವರ್ಷಗಳಿಂದ ಸೂಪರ್ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದ ಮೋಹನದಾಸ್ ಎಂಬಾತ ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ಕಾಲ್ ಸೆಂಟರ್ ಸೋಗಿನಲ್ಲಿ ಷೇರು ಪೇಟೆಯಲ್ಲಿ ಹಣ ಹೂಡುವಂತೆ ಕರೆ ಮಾಡಿ ವಂಚನೆ; ಇಬ್ಬರ ಬಂಧನ, 15 ಮಂದಿ ಪೊಲೀಸ್ ವಶಕ್ಕೆ
ಮೋಹನದಾಸ್ ಬಂಕ್ನ ಹಣಕಾಸು ವ್ಯವಹಾರ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ನೋಡಿಕೊಂಡಿದ್ದನು. ಆರೋಪಿಯು ದಿನಾಂಕ 2023ರ ಮಾರ್ಚ್ 1ರಿಂದ 2023 ಜುಲೈ 31ರ ವರೆಗೆ ರಿಲಯನ್ಸ್ ಔಟ್ ಲೆಟ್ ಪೆಟ್ರೋಲ್ ಬಂಕ್ನಲ್ಲಿ ಕ್ಯೂಆರ್ ಕೋಡ್ ತೆಗೆದು, ತನ್ನ ವೈಯಕ್ತಿಕ ಖಾತೆಯ ಕ್ಯೂಆರ್ ಕೋಡ್ ಹಾಕಿದ್ದ. ಗ್ರಾಹಕರಿಗೆ ಬಂಕ್ನದ್ದೇ ಎಂದು ನಂಬಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೊಟ್ಟಾರ ಶಾಖೆಯ ಖಾತೆಗೆ ಒಟ್ಟು 58,85,333 ರೂ. ಹಣವನ್ನು ವರ್ಗಾಯಿಸಿಕೊಂಡಿದ್ದಾನೆ. ಈ ರೀತಿ ಲಕ್ಷಾಂತರ ರೂ. ಹಣ ಜಮೆ ಮಾಡಿಕೊಂಡು ದ್ರೋಹ ಎಸಗಿದ್ದಾನೆ ಎಂದು ರಿಲಯನ್ಸ್ ಔಟ್ ಲೆಟ್ನ ಮ್ಯಾನೇಜರ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:ವೈದ್ಯೆಗೆ ವಂಚನೆ: ಐಶ್ವರ್ಯ ಗೌಡ ಸೇರಿ ನಾಲ್ವರ ವಿರುದ್ಧ ಮತ್ತೊಂದು ಎಫ್ಐಆರ್