ಬೆಂಗಳೂರು: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದೆ. ಬಿಜೆಪಿ ಇಬ್ಬರು ರೆಬೆಲ್ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.
ಗುರುವಾರ ಡಿಕೆ ಶಿವಕುಮಾರ್ ಮನೆಗೆ ಆಗಮಿಸಿದ ಬಿಜೆಪಿ ರೆಬೆಲ್ ಶಾಸಕರಾದ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಕೆಲ ಕಾಲ ಚರ್ಚೆ ಸಹ ನಡೆಸಿದ್ದಾರೆ. ಡಿಸಿಎಂ ಡಿಕೆಶಿ ಅವರ ಸದಾಶಿವನಗರ ನಿವಾಸಕ್ಕೆ ಇಬ್ಬರು ರೆಬೆಲ್ ಶಾಸಕರು ಒಂದೇ ಕಾರಿನಲ್ಲಿ ಆಗಮಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಎಸ್ ಟಿ ಸೋಮಶೇಖರ್ ಅವರು ಕಾಂಗ್ರೆಸ್ ಪರ ಅಡ್ಡ ಮತದಾನ ಮಾಡಿದ್ದರೆ, ಶಿವರಾಂ ಹೆಬ್ಬಾರ್ ಚುನಾವಣೆಗೆ ಗೈರಾಗಿದ್ದರು.
ಆತ್ಮ ಸಾಕ್ಷಿಯಿಂದ ಮತ ಹಾಕಿದ್ದೇನೆ. ಯಾರಿಗೆ ತೋರಿಸಬೇಕು ಅವರಿಗೆ ತೋರಿಸಿ ಮತ ಚಲಾಯಿಸಿದ್ದೇನೆ ಎಂದು ಮತದಾನದ ಬಳಿಕ ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದ್ದರೆ, ತಮ್ಮ ಆರೋಗ್ಯದಲ್ಲಿ ಏರುಪೇರು ಆಗಿತ್ತು, ವೈದ್ಯರ ಸಲಹೆ ಮೇರೆಗೆ ನಾನು ಮತದಾನಕ್ಕೆ ಹೋಗಲು ಸಾಧ್ಯವಾಗಲಿಲ್ಲ ಎಂದು ಶಿವರಾಂ ಹೆಬ್ಬಾರ್ ಸ್ಪಷ್ಟಪಡಿಸಿದ್ದರು.