ಮಂಗಳೂರು:ನಗರದ ಜೆರೋಸಾ ಶಾಲೆಯ ಶಿಕ್ಷಕಿ ಧಾರ್ಮಿಕ ನಿಂದನೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಅನಿತಾ ಅವರು ಪ್ರಕಟಣೆ ನೀಡಿ, ''ಸಿಸ್ಟರ್ ಪ್ರಭಾ ಅವರು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿಲ್ಲ. ಅವರನ್ನು ಕೆಲಸದಿಂದ ತೆಗೆದುಹಾಕಲು ಶಾಸಕ ವೇದವ್ಯಾಸ್ ಕಾಮತ್ ಅವರು ಶಾಲಾ ಆಡಳಿತದ ಮೇಲೆ ಒತ್ತಡ ಹೇರಿದ್ದರು'' ಎಂದು ಆರೋಪ ಮಾಡಿದ್ದಾರೆ.
''ಸೇಂಟ್ ಜೆರೋಸಾ ಶಾಲೆಯು ಫೆಬ್ರವರಿ 8ರಂದು ದುರದೃಷ್ಟಕರ ಮತ್ತು ದುಃಖದ ಘಟನೆಗೆ ಸಾಕ್ಷಿಯಾಗಿದ್ದು, 60 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಹೀಗಾಗಿದೆ. ಫೆಬ್ರವರಿ 10ರಂದು ನಾಲ್ವರು ಮುಖ್ಯೋಪಾಧ್ಯಾಯಿನಿಯವರನ್ನು ಸಂಪರ್ಕಿಸಿ ರವೀಂದ್ರನಾಥ ಠಾಗೋರ್ ರಚಿಸಿದ 'ವರ್ಕ್ ಈಸ್ ವರ್ಷಿಪ್' ಕವನವನ್ನು ಬೋಧಿಸುವಾಗ ಸಿಸ್ಟರ್ ಪ್ರಭಾ ಅವರು ಹಿಂದೂ ಧರ್ಮ ಮತ್ತು ಪ್ರಧಾನಿ ವಿರುದ್ಧ ಕೆಲವು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಲಾಗಿತ್ತು. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಈ ವಿಚಾರಣೆ ವೇಳೆ ಸಂಬಂಧಪಟ್ಟ ಶಿಕ್ಷಕಿ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ'' ಎಂದು ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.
''ರವೀಂದ್ರನಾಥ ಠಾಗೋರ್ ರಚಿಸಿದ ಕವಿತೆಯನ್ನು ಕಲಿಸುವಾಗ ಶಿಕ್ಷಕರು ದೇವಾಲಯಗಳು, ಚರ್ಚ್ಗಳು ಮತ್ತು ಮಸೀದಿಗಳು ಕೇವಲ ಕಟ್ಟಡಗಳು. ದೇವರು ಮಾನವ ಹೃದಯದಲ್ಲಿ ನೆಲೆಸಿದ್ದಾನೆ. ಆದ್ದರಿಂದ ದೇವರ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲಬಾರದು. ನಾವು ಕೆಲಸ ಮತ್ತು ಮನುಷ್ಯರನ್ನು ಗೌರವಿಸಬೇಕು ಮತ್ತು ಅವರಲ್ಲಿ ದೇವರನ್ನು ಕಾಣಬೇಕು. ದೇವರು ರಚನೆಗಳಲ್ಲಿ ಅಸ್ತಿತ್ವದಲ್ಲಿಲ್ಲ. ಆದರೆ ಮಾನವ ಹೃದಯದಲ್ಲಿ ಮತ್ತು ನಾವೆಲ್ಲರೂ ದೇವರ ದೇವಾಲಯಗಳು ಎಂದು ವಿವರಿಸಿದ್ದಾರೆ. ಶಿಕ್ಷಕಿ ತಾನು ಯಾವುದೇ ದೇವರ ವಿರುದ್ಧ ಮಾತನಾಡಿಲ್ಲ. ಆದರೆ ಕವಿತೆಯ ಅರ್ಥವನ್ನು ವಿದ್ಯಾರ್ಥಿಗಳಿಗೆ ವಿವರಿಸಿದ್ದಾರೆ. ತಾನು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿಲ್ಲ ಎಂದು ತಿಳಿಸಿದ್ದಾರೆ'' ಎಂದು ಸಿಸ್ಟರ್ ಅನಿತಾ ಹೇಳಿದ್ದಾರೆ.
''ಆಡಿಯೋ ಸಂದೇಶದಲ್ಲಿ ಅನಾಮಧೇಯ ಮಹಿಳೆ ಮತ್ತು ಬಿಜೆಪಿ ನಾಯಕರು ಆರೋಪಿಸಿದಂತೆ, ಸಿ.ಪ್ರಭಾ ಅವರು ಕವಿತೆಯನ್ನು ವಿವರಿಸುವಾಗ ಹಿಂದೂ ಅಥವಾ ಯಾವುದೇ ಇತರ ಧರ್ಮದ ವಿರುದ್ಧ ಅಥವಾ ಪ್ರಧಾನಿಯ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡಿಲ್ಲ. ಶಾಲಾ ಆಡಳಿತ ಮಂಡಳಿಯು ಜಿಲ್ಲಾಡಳಿತವನ್ನು ಸಂಪರ್ಕಿಸಿ ಆಡಿಯೋ ಸಂದೇಶವು ಸತ್ಯಕ್ಕೆ ದೂರವಾಗಿದೆ. ಈ ಬಗ್ಗೆ ತನಿಖೆ ನಡೆಸಲು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ರಕ್ಷಣೆಯನ್ನು ಕೋರಲಾಗಿದೆ. ವೈರಲ್ ಆಗಿರುವ ಮಹಿಳೆಯ ಆಡಿಯೋ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ಕೂಡ ನೀಡಲಾಗಿದೆ'' ಎಂದು ತಿಳಿಸಿದ್ದಾರೆ.
''ಫೆ.12ರಂದು ಶಿಕ್ಷಣ ಇಲಾಖೆ ಹಾಗೂ ಬಿಇಒ ಕಚೇರಿಯಿಂದ ವಿಷಯ ಪರಿವೀಕ್ಷಕರು, ಡಿಡಿಪಿಐ ಕಚೇರಿಯ ಸಮನ್ವಯಾಧಿಕಾರಿ, ಬಿಇಒ, ಇಸಿಒ ಮತ್ತು ಸಿಆರ್ಪಿಯವರು ಶಾಲೆಗೆ ಭೇಟಿ ನೀಡಿದ್ದು, ಅವರ ಕೋರಿಕೆಯ ಮೇರೆಗೆ ಎಲ್ಲವನ್ನೂ ವಿವರಿಸಲಾಗಿದೆ. ಇದಾದ ಬಳಿಕ ಸ್ಥಳೀಯ ಶಾಸಕ ವೇದವ್ಯಾಸ್ ಕಾಮತ್ ಅವರು ಹಿಂದು ಸಂಘಟನೆಗಳೊಂದಿಗೆ ಆಗಮಿಸಿ ಶಾಲೆಯ ವಿರುದ್ಧ ಘೋಷಣೆಗಳನ್ನು ಕೂಗಿದರು'' ಎಂದು ಆರೋಪಿಸಿದ್ದಾರೆ.