ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಎಸ್ಎಸ್ಎಲ್ಸಿ ಪರೀಕ್ಷೆ-3ರ ಫಲಿತಾಂಶವನ್ನು ಆನ್ಲೈನ್ ಮೂಲಕ ಪ್ರಕಟಿಸಿದ್ದು, ಈ ಪರೀಕ್ಷೆಯಲ್ಲಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ರಾಜ್ಯಾದ್ಯಂತ 410 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ-3 ಅನ್ನು ನಡೆಸಲಾಗಿದ್ದು, ಪರೀಕ್ಷೆಗೆ 97,952 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಆಗಸ್ಟ್ 13 ರಿಂದ 16ರ ವರೆಗೆ ರಾಜ್ಯದ 21 ಶೈಕ್ಷಣಿಕ ಜಿಲ್ಲೆಗಳ 62 ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆದಿದ್ದು, 13055 ಮೌಲ್ಯಮಾಪಕರು ಭಾಗವಹಿಸಿದ್ದರು. ಒಟ್ಟು 97,952 ವಿದ್ಯಾರ್ಥಿಗಳಲ್ಲಿ 25,347 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 25.88ರಷ್ಟು ಫಲಿತಾಂಶ ಬಂದಿದೆ.
67,729 ಬಾಲಕರಲ್ಲಿ 16,764 ಬಾಲಕರು ಉತ್ತೀರ್ಣರಾಗಿದ್ದು, ಶೇ. 24.75 ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ 30,223 ವಿದ್ಯಾರ್ಥಿನಿಯರಲ್ಲಿ 8,583 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು ಶೇ. 28.4ರಷ್ಟು ಫಲಿತಾಂಶ ಬಂದಿದೆ. ಸರ್ಕಾರಿ ಶಾಲೆಗೆ ಶೇ. 24.3, ಅನುದಾನಿತ ಶಾಲೆಗೆ ಶೇ. 25.19, ಅನುದಾನರಹಿತ ಶಾಲೆಗೆ ಶೇ. 30.66 ರಷ್ಟು ಫಲಿತಾಂಶ ಬಂದಿದೆ. ನಗರ ಪ್ರದೇಶಕ್ಕೆ ಶೇ. 24.85, ಗ್ರಾಮೀಣ ಪ್ರದೇಶದಲ್ಲಿ ಶೇ. 27.49 ರಷ್ಟು ಫಲಿತಾಂಶ ಬಂದಿದೆ. ಫಲಿತಾಂಶವನ್ನು https:/karresults.nic.in ನಲ್ಲಿ ವೀಕ್ಷಿಸಬಹುದಾಗಿದೆ ಎಂದು ಮಂಡಳಿ ತಿಳಿಸಿದೆ.
ಸ್ಕ್ಯಾನ್ ಪ್ರತಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಗಸ್ಟ್ 30ರ ವರೆಗೆ ಕಾಲಾವಕಾಶ ನೀಡಿದ್ದು, ಮರುಎಣಿಕೆ, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಆಗಸ್ಟ್ 31ರಿಂದ ಸೆಪ್ಟಂಬರ್ 4ರ ವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
ಇದನ್ನೂ ಓದಿ:ವೈದ್ಯಕೀಯ, ಇಂಜಿನಿಯರಿಂಗ್ ಕೋರ್ಸ್ ಅಣುಕು ಸೀಟು ಹಂಚಿಕೆ ಫಲಿತಾಂಶ ಪ್ರಕಟ - Mock Seat Allotment Results