ಬೆಂಗಳೂರು:ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ತಿದ್ದುಪಡಿ ಮಸೂದೆಯನ್ನು ಮತ್ತೊಮ್ಮೆ ಚರ್ಚಿಸಿ ಎಂದು ನಾವು ತಿರಸ್ಕರಿಸಿದ್ದೇವೆ. ಅರ್ಚಕರ ಪರವಾಗಿರುವ ನಮ್ಮ ನಿಲುವಿನ ಕುರಿತು ದಾರಿ ತಪ್ಪಿಸುವ ಕೆಲಸವನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಇತರರು ಮಾಡಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಆರೋಪಿಸಿದರು.
ಮಲ್ಲೇಶ್ವರ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಧಾರ್ಮಿಕ ದತ್ತಿ ಇಲಾಖೆಗೆ ನಮ್ಮ ಸರಕಾರ 250 ಕೋಟಿ ರೂ ನೀಡಿದೆ. ಆದರೆ ಕಾಂಗ್ರೆಸ್ ಸರಕಾರವು ಹಿಂದೂ ಧಾರ್ಮಿಕ ದತ್ತಿ ಇಲಾಖೆಯನ್ನು ಕಡೆಗಣಿಸಿದ್ದು, ಈ ವರ್ಷ 50 ಕೋಟಿಯನ್ನು ಕೊಟ್ಟಿಲ್ಲ. ವಿಧೇಯಕದ ವಿಚಾರದಲ್ಲಿ ಈ ಸರ್ಕಾರದಿಂದ ಅರ್ಚಕರಿಗೆ ತಪ್ಪು ಮಾಹಿತಿ ಕೊಡಲಾಗಿದೆ. ಹೀಗಾಗಿ ಅರ್ಚಕರು ಪತ್ರಿಕಾಗೋಷ್ಠಿ ಮಾಡುವಂತಾಗಿದೆ. ಅರ್ಚಕರಿಗೆ ಮನೆ ಕೊಟ್ಟದ್ದು ನಮ್ಮ ಸರಕಾರ. ತಸ್ತೀಕ್ ತಂದದ್ದು ನಮ್ಮ ಸರಕಾರ. ಅದನ್ನು 48 ಸಾವಿರಕ್ಕೆ ಏರಿಸಿದ್ದು ನಮ್ಮ ಸರಕಾರ. ಇದೆಲ್ಲವನ್ನು ಜನರು ಅರ್ಥ ಮಾಡಿಕೊಳ್ಳಬೇಕು. ದೇವಸ್ಥಾನದ ಒಟ್ಟು ಆದಾಯದಿಂದ ಶೇ 10 ಪಡೆಯುವ ಮಸೂದೆ ಜಾರಿಗೆ ಮುಂದಾಗಿದ್ದರಿಂದ ದೇವಸ್ಥಾನದ ಒಟ್ಟು ಆರ್ಥಿಕ ವ್ಯವಸ್ಥೆ ಕುಸಿಯಬಾರದೆಂಬ ಕಾರಣಕ್ಕೆ ವಿರೋಧಿಸಿದ್ದೇವೆ. ಆದರೆ ಬಿಜೆಪಿಯವರ ವಿರುದ್ಧ ಕಾಂಗ್ರೆಸ್ನವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಮಧ್ಯಾಹ್ನದ ಅನ್ನಪ್ರಸಾದ, ಸಪ್ತಪದಿ (ಮದುವೆ) ವ್ಯವಸ್ಥೆ ಇದೆ. ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿ ಮೊನ್ನೆ ದೇಗುಲಗಳ ಮಸೂದೆಯನ್ನು ಬಿಜೆಪಿ- ಜೆಡಿಎಸ್ ಸದಸ್ಯರು ವಿರೋಧಿಸಿದ್ದಾರೆ. ನಾವು ಅರ್ಚಕರಿಗೆ- ದೇವಾಲಯಗಳಿಗೆ ಒಳ್ಳೆಯದು ಮಾಡಲು ಹೊರಟಿದ್ದೇವು. ಆದರೆ ಬಿಜೆಪಿ ಇದನ್ನು ವಿರೋಧಿಸಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಶೇಷವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹಿರಿಯ ಸಚಿವ ಎಚ್.ಕೆ.ಪಾಟೀಲ್, ಧಾರ್ಮಿಕ ದತ್ತಿ ಸಚಿವ ರಾಮಲಿಂಗಾರೆಡ್ಡಿ ಅವರು ಆರೋಪಿಸುತ್ತಿರುವುದನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ವಾಸ್ತವಿಕವಾಗಿ ದೇವಾಲಯಗಳ ಅಭಿವೃದ್ಧಿಗಾಗಿ ತಿದ್ದುಪಡಿ ತಂದು 33,500 ದೇವಸ್ಥಾನಗಳಿಗೆ ತಸ್ತೀಕ್ ಕೊಡುವ ಯೋಜನೆಯನ್ನು ಬಿಜೆಪಿ ರೂಪಿಸಿದೆ ಎಂದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ತಸ್ತೀಕ್ ಯೋಜನೆ ಜಾರಿ:ಯಡಿಯೂರಪ್ಪ ಅವರು ಸಿಎಂ ಆಗಿದ್ದ ವೇಳೆ ತಸ್ತೀಕ್ ಎಂಬ ಯೋಜನೆಯನ್ನು ನಮ್ಮ ಸರಕಾರ ಜಾರಿಗೊಳಿಸಿತು. ಆಗ ತಸ್ತೀಕ್ 6,500 ರೂ ಇತ್ತು. 33,500 ರೂ ದೇವಸ್ಥಾನಗಳಿಗೆ ಕೊಡುತ್ತಿದ್ದೆವು. ವಿ.ಎಸ್.ಆಚಾರ್ಯರು ಸಚಿವರಿದ್ದಾಗ ಅದನ್ನು 12 ಸಾವಿರ ಮಾಡಿದ್ದು, ನಾನು ಧಾರ್ಮಿಕ ದತ್ತಿ ಸಚಿವನಾಗಿದ್ದಾಗ 24 ಸಾವಿರಕ್ಕೆ ಏರಿಸಿದ್ದೇನು. ನಮ್ಮದೇ ಸರಕಾರ ಇದ್ದಾಗ 48 ಸಾವಿರಕ್ಕೆ ಏರಿಸಿದ್ದು, ಈಗ ಅದು 60 ಸಾವಿರ ಆಗಿದೆ. ಬಡ ದೇವಸ್ಥಾನಗಳಿಗೆ ಅನುಕೂಲ ಆಗಲಿ ಎಂದು ಅದನ್ನು 1 ಲಕ್ಷಕ್ಕೆ ಏರಿಸಲು ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದರು.